More

    ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಕೋಟಿಕಂಠ ಗಾಯನ ಮೆರುಗು

    ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ಉದ್ದೇಶಿಸಿದ್ದು ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಪರಂಪರೆಯನ್ನು ಉಳಿಸುವಲ್ಲಿ ಸಂಕಲ್ಪತೊಡುವ ಅತ್ಯಪರೂಪದ ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಎಡಿಸಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಹೇಳಿದರು.
    ಡಿಸಿ ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಕಳೆದ ಸಾಲಿನಲ್ಲಿ ಮಾತಾಡ್ ಮಾತಾಡು ಕನ್ನಡ ಘೋಷಣೆಯೊಂದಿಗೆ ನಡೆಸಿದ್ದ ಕಾರ್ಯಕ್ರಮದಲ್ಲಿ ಲಕ್ಷ ಕಂಠ ಗಾಯನ ಇತಿಹಾಸವನ್ನೇ ಸೃಷ್ಟಿಸಿದ್ದು ಹೆಮ್ಮೆಯ ಸಂಗತಿ. ಪ್ರಸಕ್ತ ಸಾಲಿನ 67ನೇ ಕನ್ನಡ ರಾಜ್ಯೋತ್ಸವವನ್ನು ಇನ್ನೂ ಹೆಚ್ಚಿನ ಸಂಭ್ರಮ ಮತ್ತು ಉತ್ಸಾಹಗಳಿಂದ ನಾಡಿನಾದ್ಯಂತ ಆಚರಿಸಲು ಕೋಟಿಕಂಠ ಗಾಯನ ಕಾರ್ಯಕ್ರಮ ಆಯೋಜಿಸಿದೆ ಎಂದರು.
    ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಡಿನ ಹಿರಿಯ ಹೆಸರಾಂತ ಸಾಹಿತಿಗಳು ರಚಿಸಿರುವ ಸುಪ್ರಸಿದ್ಧ ಆಯ್ದ 6 ಕನ್ನಡ ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದು ರಾಜ್ಯಾದ್ಯಂತ ಒಂದು ಕೋಟಿಗೂ ಹೆಚ್ಚಿನ ಜನ ಏಕಕಂಠದಲ್ಲಿ ಹಾಡುವುದರ ಮೂಲಕ ಐತಿಹಾಸಿಕ ದಾಖಲೆ ಬರೆಯಲಿದ್ದಾರೆ ಎಂದು ಹೇಳಿದರು.
    ಅ.28ರಂದು ಬೆಳಗ್ಗೆ 11ರಿಂದ 11.30ರ ಅವಧಿಯಲ್ಲಿ ಜಿಲ್ಲೆಯ ಆಯ್ದ 20ರಿಂದ 25 ಸ್ಥಳಗಳಲ್ಲಿ ಸಾಮೂಹಿಕವಾಗಿ ಹಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಸರ್ಕಾರದ ಹಿರಿಯ ಅಧಿಕಾರಿ-ಸಿಬ್ಬಂದಿ, ತಾರೆಯರು, ಗಾಯಕರು, ಸಾಂಸ್ಕೃತಿಕ ಲೋಕದ ದಿಗ್ಗಜರು, ಸಂಘಟನೆಗಳ ಪ್ರತಿನಿಧಿಗಳು, ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುತ್ತಿರುವುದು ವಿಶೇಷ ಎಂದರು. ರಂಗಾಯಣ ಶಿವಮೊಗ್ಗ ಘಟಕದ ನಿರ್ದೇಶಕ ಸಂದೇಶ ಜವಳಿ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ರೂಪಿಸಿ, ಅನುಸರಿಸುವುದು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದರು.
    ಆನ್‌ಲೈನ್ ಮೂಲಕ ನೋಂದಣಿ:
    ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಪ್ರತಿಯೊಬ್ಬರೂ ಆನ್‌ಲೈನ್ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಕಾರ್ಯಕ್ರಮದ ನಂತರ ಆನ್‌ಲೈನ್‌ನಲ್ಲಿಯೇ ಇಲಾಖೆಯಿಂದ ಕೊಡಮಾಡಲಾಗುವ ಪ್ರಮಾಣಪತ್ರವೂ ದೊರೆಯಲಿದೆ. ಜಿಲ್ಲೆಯ ಪ್ರತಿ ಗ್ರಾಮದಲ್ಲಿ, ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ, ವಿದ್ಯಾನಿಲಯಗಳಲ್ಲಿ ತಾವೇ ಸ್ವತಃ ಸಮೂಹ ಗಾಯನವನ್ನು ಆಯೋಜಿಸುವಂತೆ ಹಾಗೂ ಈ ವಿನೂತನ ಕಾರ್ಯಕ್ರಮದ ಯಶಸ್ಸಿಗೆ ನಿಮ್ಮ ಸಲಹೆ-ಸೂಚನೆಗಳನ್ನು ನೀಡುವಂತೆ ತಿಳಿಸಿದ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಲು http://kannadasiri.karnataka.gov.in/kkg/public/ಜಾಲತಾಣ ಸಂಪರ್ಕಿಸಬಹುದು ಎಂದು ಎಡಿಸಿ ತಿಳಿಸಿದರು. ಉಪವಿಭಾಗಾಧಿಕಾರಿ ದೊಡ್ಡಗೌಡರ್, ಸೂಡಾ ಆಯುಕ್ತ ಎಚ್.ಕೊಟ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು, ಗಾಯಕರು, ಸಾಂಸ್ಕೃತಿಕ ಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts