More

    ಜನಸೇವೆಗೆ ಗೃಹ ಖಾತೆ ಪೂರಕ: ಸಚಿವ ಆರಗ ಜ್ಞಾನೇಂದ್ರ

    ಶಿವಮೊಗ್ಗ: ಗೃಹ ಖಾತೆ ಎಂಬುದು ದೊಡ್ಡದು ಅಥವಾ ಗೌರವಾಯುತ ಸ್ಥಾನವೆಂಬುದು ನನ್ನ ತಲೆಯೊಳಗಿಲ್ಲ. ಜನಪರವಾಗಿ ಕೆಲಸ ಮಾಡುವ ಖಾತೆ ಇದಾಗಿದ್ದು ಕಾಲಮಿತಿಯೊಳಗೆ ಏನೇನು ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಮಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
    ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಭಾನುವಾರ ಆಗಮಿಸಿದ ಅವರು ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.
    ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಮಂತ್ರಿಯಾಗುವ ಕನಸಿತ್ತು. ನಮ್ಮದೇ ಸರ್ಕಾರ ಬಂದಿದ್ದರೂ ಅನಿವಾರ್ಯ ಕಾರಣಗಳಿಂದ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಕನಸು ನನಸಾಗಿದೆ. ಹಿರಿಯರು, ಪಕ್ಷದ ಮುಖಂಡರು ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ಇಂಥದ್ದೇ ಖಾತೆ ಕೊಡಿ ಎಂದು ಕೇಳಿರಲಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸಿಕೊಂಡು ಹೋಗುವ ವಿಶ್ವಾಸ ನನ್ನಲ್ಲಿತ್ತು. ಆದರೂ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಗೃಹ ಖಾತೆಯನ್ನೇ ನೀಡಿದ್ದಾರೆ. ಅಂಜಿಕೆ ಇಲ್ಲದೆ ಕೆಲಸ ಮಾಡುತ್ತೇನೆ ಎಂದರು.
    ಸಮಯಾವಕಾಶ ಕಡಿಮೆ ಇದೆ. 2 ವರ್ಷದಲ್ಲಿ 6 ತಿಂಗಳು ಚುನಾವಣಾ ನೀತಿ ಸಂಹಿತೆಗೆ ಮೀಸಲಿಡಬೇಕಾಗುತ್ತದೆ. ಹಾಗಾಗಿ ಉಳಿದ ಒಂದೂವರೆ ವರ್ಷದಲ್ಲಿ ನನ್ನಿಂದ ಏನೆಲ್ಲ ಸಾಧ್ಯವೋ ಅದನ್ನು ಮಾಡಿ ತೋರಿಸುತ್ತೇನೆ. ಏನೇನು ಮಾಡಬಾರದೋ ಅದನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಆ.ಪ.ರಾಮ ಭಟ್ಟ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಬಿಜೆಪಿ ಮುಖಂಡ ಸಂತೋಷ್ ಬಳ್ಳೆಕೆರೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts