More

    ಲಿಂಗತ್ವ ಅಲ್ಪಸಂಖ್ಯಾತರನ್ನು ಕಡೆಗಣಿಸಬೇಡಿ; ನ್ಯಾಯಾಧೀಶ ಮಲ್ಲಿಕಾರ್ಜುನಗೌಡ

    ಶಿವಮೊಗ್ಗ: ಪ್ರಸ್ತುತ ಸಮಾಜದಲ್ಲಿ ವ್ಯಕ್ತಿಯನ್ನು ವ್ಯಕ್ತಿತ್ವ ಅಥವಾ ಆತ್ಮದಿಂದ ತುಲನೆ ಮಾಡಲಾಗುತ್ತದೆ. ಆದರೆ ಯಾವತ್ತೂ ಕುಟುಂಬ ಮತ್ತು ಸಮಾಜ ಲಿಂಗತ್ವ ಅಲ್ಪಸಂಖ್ಯಾತರನ್ನು ತುಚ್ಛವಾಗಿ ಕಾಣದೆ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಹೇಳಿದರು.
    ಡಿಎಆರ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ರಕ್ಷ ಸಮುದಾಯ ಸಂಘದ ಆಶ್ರಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದು ದಿನದ ಕಾರ್ಯಾಗಾರ ಹಾಗೂ ಸ್ವೀಪ್-ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಒಂದು ಅಂಗವಿಕಲ ಮಗು ಹುಟ್ಟಿದರೆ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅದೇ ತೃತೀಯ ಲಿಂಗಿಗಳೆಂದು ತಿಳಿದಾಗ ಕೀಳಾಗಿ ಕಾಣುತ್ತೇವೆ. ನಮ್ಮ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಅದನ್ನು ಲಿಂಗದಿಂದ ತುಲನೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿತ್ವ ಅಥವಾ ಆತ್ಮದಿಂದ ವ್ಯಕ್ತಿಯ ತುಲನೆ ಮಾಡಲಾಗುತ್ತದೆ. ಆದ್ದರಿಂದ ಯಾವುದೇ ಲಿಂಗತ್ವ ಅಲ್ಪಸಂಖ್ಯಾತರನ್ನು ಕೀಳಾಗಿ ನೋಡಿ ಅವರನ್ನು ಕಡೆಗಣಿಸಬಾರದು. ಕುಟುಂಬವು ಅಂತಹ ವ್ಯಕ್ತಿಯನ್ನು ಗೌರವ, ಪ್ರೀತಿಯಿಂದ ಕಾಣಬೇಕು. ಹಾಗೆ ನೋಡಿಕೊಂಡಿದ್ದರೆ ಈ ರೀತಿ ತಮ್ಮ ಹಕ್ಕಿಗಾಗಿ ಹೋರಾಡುವ ಅವಶ್ಯಕತೆ ಬರುತ್ತಿರಲಿಲ್ಲ. ಕುಟುಂಬ ಮತ್ತು ಸಮಾಜ ಗೌರವದಿಂದ ಕಂಡು ಸ್ವೀಕರಿಸುವವರೆಗೂ ಸಂಘಟಿತರಾಗಿ ಹೋರಾಡುವ ಅವಶ್ಯಕತೆ ಇದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಯಾರಾದರೂ ಒತ್ತಡ ಹೇರಿ ಬೆದರಿಕೆ ಹಾಕಿ ನೀವು ಹೆಣ್ಣೋ ಅಥವಾ ಗಂಡೇ ಎಂದು ಗುರುತಿಸಿಕೊಳ್ಳಬೇಕು ಎಂದಾಗಲಿ ಅಥವಾ ಇತರ ರೀತಿ ಬೆದರಿಕೆ ಹಾಕಿದರೆ ಜಿಲ್ಲಾಡಳಿತಕ್ಕೆ ತಿಳಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
    ಶಿವಮೊಗ್ಗ ಉಪವಿಭಾಗದ ಡಿವೈಎಸ್ಪಿ-2 ಎಂ.ಸುರೇಶ್ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಜಿ.ಜಿ.ಸುರೇಶ್, ರಾಜ್ಯಮಟ್ಟದ ವಿಶಿಷ್ಟ ಲೈಂಗಿಕತೆ ಸಂಘಟನೆಯ ಒಕ್ಕೂಟ ಸಾರಥ್ಯದ ಅಧ್ಯಕ್ಷ ಮಹಮ್ಮದ್ ಸೈಫುಲ್ಲಾ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಮಂಗಳಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts