More

    ಧನಾತ್ಮಕ ಮನೋಭಾವದಿಂದ ಗೆಲುವು ಸಾಧ್ಯ

    ಶಿವಮೊಗ್ಗ: ಧನಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸ ಯಾವುದೇ ಕ್ರೀಡೆಗಳನ್ನು ಗೆಲ್ಲಲು ಸಹಕರಿಸುತ್ತವೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
    ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘಸಂಸ್ಥೆಗಳ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಬೆಂಗಳೂರು ವಿಭಾಗಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
    ಕ್ರೀಡಾಪಟುಗಳು ಧನಾತ್ಮಕ ಮನೋಭಾವ ಹೊಂದುವುದು ಅತಿ ಮುಖ್ಯ. ಜತೆಗೆ ಆತ್ಮವಿಶ್ವಾಸವನ್ನೂ ಹೊಂದಿರಬೇಕು. ಇವೆರಡರೊಂದಿಗೆ ಗುರಿ ಸಾಧನೆಯೆಡೆ ಗಮನ ಹರಿಸಿ ಗೆಲುವು ತಮ್ಮದಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಎಲ್ಲ ಕ್ರೀಡಾಪಟುಗಳು ತಮ್ಮ ಗುರಿಯತ್ತ ಗಮನ ಹರಿಸಿ ಮುನ್ನಡೆಯಬೇಕು ಎಂದು ಹೇಳಿದರು.
    ವಾಲಿಬಾಲ್ ಅಸೋಸಿಯೇಷನ್‌ನ ಕಾರ್ಯಾಧ್ಯಕ್ಷ ಕೆ.ಇ.ಕಾಂತೇಶ್ ಮಾತನಾಡಿ, ಕ್ರೀಡೆಯನ್ನು ಕೇವಲ ಆಟವೆಂದು ಪರಿಗಣಿಸದೇ ಸವಾಲೆಂದು ಸ್ವೀಕರಿಸಿ ಕ್ರೀಡಾಮನೋಭಾವದಿಂದ ಪಾಲ್ಗೊಳ್ಳಬೇಕು. ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಸ್ಥಿತಿಗಳು ಎದುರಾಗುತ್ತವೆ. ಒಳ್ಳೆಯದನ್ನು ಸ್ವೀಕರಿಸಿ ತಂದೆ-ತಾಯಿಗಳೊಟ್ಟಿಗಿದ್ದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
    ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಒಲಿಂಪಿಕ್ ಅಸೋಸಿಯೇಷನ್‌ನ ಕಾರ್ಯದರ್ಶಿ ಶಶಿ, ಅಂತಾರಾಷ್ಟ್ರೀಯ ಅಥ್ಲೆಟಿಕ್ ತೀರ್ಪುಗಾರ ವಿಶ್ವನಾಥ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts