More

    ಕೆಎಸ್​ಆರ್​ಟಿಸಿ ನೌಕರರ ಪ್ರತಿಭಟನೆ

    ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ ಕೆಎಸ್​ಆರ್​ಟಿಸಿ ನೌಕರರು ಶುಕ್ರವಾರ ಬಸ್​ಗಳ ಸ್ಥಗಿತಗೊಳಿಸಿದ ಪರಿಣಾಮ ನಗರದಲ್ಲಿ ನೂರಾರು ಪ್ರಯಾಣಿಕರು ಅಕ್ಷರಶಃ ಪರದಾಡುವಂತಾಯಿತು.

    ರಾಜ್ಯಾದ್ಯಂತ ಎಲ್ಲ ನಾಲ್ಕು ನಿಗಮಗಳ ವ್ಯಾಪ್ತಿಯ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್​ಗಳು ಮುಷ್ಕರಕ್ಕೆ ಬೆಂಬಲಿಸಿದ್ದು ಶಿವಮೊಗ್ಗ ವಿಭಾಗದಲ್ಲಿ 1,500ಕ್ಕೂ ಅಧಿಕ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಿದರು. ಇದರಿಂದ ಜಿಲ್ಲೆಯ ಹಲವೆಡೆ ಹಾಗೂ ಹೊರ ಜಿಲ್ಲೆಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಹೈರಾಣಾದರು.

    ಬಹಳಷ್ಟು ಜನ ಖಾಸಗಿ ಬಸ್​ಗಳ ಮೊರೆ ಹೋದರೆ, ದಾವಣಗೆರೆ, ತುಮಕೂರು, ಹಾವೇರಿ, ಧಾರವಾಡ, ಉತ್ತರ ಕನ್ನಡ, ಗದಗ ಮತ್ತಿತರ ಜಿಲ್ಲೆಗಳಿಗೆ ಪ್ರಯಾಣಿಸುವವರು ದಿನವಿಡೀ ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಅದರಲ್ಲೂ ಆರ್ಥಿಕವಾಗಿ ಸದೃಢರಾಗಿದ್ದವರು ಖಾಸಗಿ ವಾಹನಗಳ ಮೂಲಕ ಪ್ರಯಾಣ ಮುಂದುವರಿಸಿದರು. ಲಗೇಜ್ ಸಮೇತ ಬಂದಿದ್ದ ವೃದ್ಧರು, ಮಹಿಳಯರು ಚಿಕ್ಕಮಕ್ಕಳೊಂದಿಗೆ ದಿನವಿಡೀ ಬಸ್ ನಿಲ್ದಾಣದಲ್ಲೇ ಕಾಲ ಕಳೆದರು.

    ಬೆಳಗ್ಗೆ 8ರವರೆಗೆ ಬಸ್ ಸಂಚಾರ: ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ರಾಜ್ಯ ಕಾರ್ವಿುಕ ಸಂಘಟನೆಗಳು ಕರೆ ನೀಡಿದ್ದವು. ಗುರುವಾರ ರಾಜಧಾನಿ ಬೆಂಗಳೂರಿನಲ್ಲಿ ಹೋರಾಟಗಾರರು, ಕಾರ್ವಿುಕರನ್ನು ಪೊಲೀಸರು ಬಂಧಿಸಿದ ಪರಿಣಾಮ ಕೆರಳಿದ ನೌಕರರು ಶುಕ್ರವಾರ ಮುಷ್ಕರ ಮುಂದುವರಿಸಿದರು. ನಗರದಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆವರೆಗೂ ಕೆಎಸ್​ಆರ್​ಟಿಸಿ ಬಸ್ ಸಂಚಾರ ಯಥಾಸ್ಥಿತಿ ಮುಂದುವರಿದಿತ್ತು. ಆದರೆ ರಾಜ್ಯ ಸಂಘಟನೆ ಸೂಚನೆ ಮೇರೆಗೆ ಹೊರ ಜಿಲ್ಲೆಗಳಿಗೆ ಎಲ್ಲ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಿದರು. ಇದರಿಂದ ಬಸ್ ಏರಿ ಕುಳಿತಿದ್ದ ಹಲವು ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಅಸಮಾಧಾನಗೊಂಡು ಲಗೇಜ್ ಸಮೇತ ಕೆಳಗಿಳಿದರು.

    ಮಾಚೇನಹಳ್ಳಿಯಲ್ಲಿ ಬಸ್​ಗೆ ಕಲ್ಲು ತೂರಾಟ: ಮುಷ್ಕರದ ನಡುವೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ, ಶಿವಮೊಗ್ಗ-ತೀರ್ಥಹಳ್ಳಿ ನಡುವೆ ಮಿನಿ ಬಸ್ ಸಂಚಾರ ಯಥಾ ಸ್ಥಿತಿಯಲ್ಲಿತ್ತು. ಆದರೆ ಶಿವಮೊಗ್ಗದಿಂದ ಭದ್ರಾವತಿಗೆ ತೆರಳುತ್ತಿದ್ದ ಬಸ್​ನ್ನು ಮಾಚೇನಹಳ್ಳಿ ಬಳಿ ಬೈಕ್​ನಲ್ಲಿ ಅಡ್ಡ ಹಾಕಿದ ದುಷ್ಕರ್ವಿುಗಳು ಕಲ್ಲು ತೂರಾಟ ನಡೆಸಿ ಪರಾರಿಯಾದರು.

    ಬಸ್ಸಿನ ಗಾಜುಗಳು ಜಖಂಗೊಂಡಿದ್ದು ಉಭಯ ನಗರಗಳ ನಡುವೆ ಸಂಚರಿಸುತ್ತಿದ್ದ ಸಾರಿಗೆಯನ್ನು ಸ್ಥಗಿತಗೊಳಿಸಲಾಯಿತು. ಇದೇ ವೇಳೆ ಶಿವಮೊಗ್ಗ-ತೀರ್ಥಹಳ್ಳಿ ನಡುವಿನ ಬಸ್ ಸಂಚಾರವನ್ನು ಸಿಬ್ಬಂದಿ ಸ್ಥಗಿತಗೊಳಿಸಿದರು. ಘಟನೆ ಬೆನ್ನಲ್ಲೇ ಬಸ್ ನಿಲ್ದಾಣಕ್ಕೆ ಎಸ್ಪಿ ಕೆ.ಎಂ.ಶಾಂತರಾಜು, ಸಿಪಿಐ ರಾಘವೇಂದ್ರ ಕಾಂಡಿಕೆ, ತುಂಗಾನಗರ ಪಿಎಸ್​ಐ ತಿರುಮಲೇಶ್ ಭೇಟಿ ನೀಡಿ ಪರಿಶೀಲಿಸಿದರು. ಬಸ್​ಗಳಿಗೆ ಹಾನಿಯಾದರೆ ಚಾಲಕ ಮತ್ತು ನಿರ್ವಾಹಕರೇ ಜವಾಬ್ದಾರಿ ಹೊರಬೇಕಿದೆ ಎಂದು ಸಂಚಾರವನ್ನು ಸ್ಥಗಿತಗೊಳಿಸಿ ನಿಲ್ದಾಣದಲ್ಲೇ ಬಸ್ ನಿಲ್ಲಿಸಿ ಪ್ರತಿಭಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts