More

    ಲೋಕಾಯುಕ್ತ ಪೊಲೀಸರನ್ನು ಕಂಡು ಲಂಚದ ಹಣಕ್ಕೆ ಬೆಂಕಿ ಇಟ್ಟ ಪಟ್ಟಣ ಪಂಚಾಯಿತಿ ಸದಸ್ಯ! ಆದರೂ ತಪ್ಪಲಿಲ್ಲ ಸಂಕಷ್ಟ

    ಶಿವಮೊಗ್ಗ/ಸಾಗರ: ಮಾಂಸದಂಗಡಿ ಮಾಲೀಕನಿಂದ 50 ಸಾವಿರ ರೂ. ಲಂಚ ಪಡೆದ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯ ಲೋಕಾಯುಕ್ತ ಪೊಲೀಸರ ದಾಳಿ ಸುಳಿವು ಸಿಗುತ್ತಿದ್ದಂತೆ ಹಣವನ್ನು ಸುಟ್ಟು ನಾಶ ಮಾಡಿದ್ದಾರೆ. ಆದರೂ ಲಂಚ ಪಡೆದಿರುವುದು ಖಚಿತವಾಗಿದ್ದರಿಂದ ಲೋಕಾಯುಕ್ತ ಪೊಲೀಸರು ಪಪಂ ಸದಸ್ಯನನ್ನು ಬಂಧಿಸಿದ್ದಾರೆ.

    ಕಾರ್ಗಲ್ ಪಪಂ ಸದಸ್ಯ ಕೆ.ಸಿ.ಹರೀಶ್ ಗೌಡ ಜೋಗ್‌ಫಾಲ್ಸ್​ನ ಬಜಾರ್ ಲೈನ್‌ನ ಕೋಳಿ ಅಂಗಡಿ ಮಾಲೀಕ ಕೆ.ಅಹಮ್ಮದ್ ಅಬ್ದುಲ್ ಬ್ಯಾರಿ ಅವರಿಂದ ಮನೆಯಲ್ಲೇ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

    15 ವರ್ಷಗಳಿಂದ ಜೋಗದಲ್ಲಿ ಅಹಮ್ಮದ್ ಅಬ್ದುಲ್ ಬ್ಯಾರಿ ಪರವಾನಗಿ ಇಲ್ಲದೆ ಕೋಳಿ ಮಾಂಸದಂಗಡಿ ಇಟ್ಟುಕೊಂಡಿದ್ದು, ತ್ಯಾಜ್ಯವನ್ನು ಪಕ್ಕದ ಮೋರಿಗೆ ಎಸೆಯುತ್ತಿದ್ದ ಕಾರಣ ಸಾರ್ವಜನಿಕರಿಂದ ದೂರು ನೀಡಿದ್ದರು. ಈ ದೂರು ಆಧರಿಸಿ ಕೋಳಿ ಅಂಗಡಿಯನ್ನು ಮುಚ್ಚುವಂತೆ ನ.14ರಂದು ನೋಟಿಸ್ ನೀಡಿತ್ತು.

    ಕೋಳಿ ಅಂಗಡಿ ಮಾಲೀಕ ನಂತರ ಅದೇ ವಾರ್ಡ್‌ನ ಸದಸ್ಯ ಹರೀಶ್ ಅವರನ್ನು ಸಂಪರ್ಕಿಸಿದಾಗ ಪ್ರತಿ ತಿಂಗಳು ಮೂರು ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಪ್ರತಿ ತಿಂಗಳು ಹಣ ಕೊಡಲು ಆಗುವುದಿಲ್ಲ ಒಂದೇ ಬಾರಿ 50 ಸಾವಿರ ರೂ. ಕೊಡುತ್ತೇನೆ ಎಂದು ಕೋಳಿ ಅಂಗಡಿ ಮಾಲೀಕ ಹೇಳಿದ್ದರು ಎನ್ನಲಾಗಿದೆ. ಈ ಡೀಲ್‌ಗೆ ಒಪ್ಪಿಕೊಂಡ ಕೆ.ಸಿ.ಹರೀಶ್ ಮನೆಗೆ ಹಣ ತಂದು ಕೊಡುವಂತೆ ಹೇಳಿದ್ದರು. ನಂತರ ಅಹಮ್ಮದ್ ಅಬ್ದುಲ್ ಬ್ಯಾರಿ ಅವರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ದೂರು ನೀಡಿದ್ದರು. ಸೋಮವಾರ ಮಧ್ಯಾಹ್ನ ಹರೀಶ್ ಮನೆಗೆ ತೆರಳಿ ಲಂಚ ನೀಡುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

    ಲೋಕಾಯುಕ್ತ ಪೊಲೀಸರು ಮನೆ ಗೇಟ್ ತೆಗೆದು ಒಳ ಬರುತ್ತಿದ್ದಂತೆ ತಪ್ಪಿಸಿಕೊಳ್ಳಲು ಸದಸ್ಯ ಹರೀಶ್ ಮನೆಯೊಳಗಿದ್ದ ಗ್ಯಾಸ್‌ನಿಂದ 50 ಸಾವಿರ ರೂ. ಸುಟ್ಟು ಹಾಕಿದ್ದಾರೆ. ಲಂಚ ಪಡೆದಿರುವುದು ಖಚಿತಪಟ್ಟಿದ್ದರಿಂದ ಪೊಲೀಸರು ಹರೀಶ್​ರನ್ನು ಬಂಧಿಸಿದ್ದಾರೆ.

    ಚಿತ್ರದುರ್ಗದ ಎಸ್ಪಿ ಎನ್.ವಾಸುದೇವರಾಮ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷ ಎನ್.ಮೃತ್ಯುಂಜಯ್, ಪೊಲೀಸ್ ನಿರೀಕ್ಷಕರಾದ ಎಚ್.ಎಂ.ಜಗನ್ನಾಥ, ಸಿಬ್ಬಂದಿ ಪ್ರಸನ್ನ, ಬಿ.ಲೋಕೇಶಪ್ಪ, ಮಹಾಂತೇಶ್, ಬಿ.ಟಿ.ಚನ್ನೇಶ್, ಪ್ರಶಾಂತ್‌ಕುಮಾರ್, ಅರುಣ್‌ಕುಮಾರ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ, ತರುಣ್‌ಕುಮಾರ್, ಪ್ರದೀಪ್‌ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಣಬೆ ಪದಾರ್ಥ ತಿಂದು ತಂದೆ-ಮಗ ಸಾವು!? ರಾತ್ರಿಯಿಡೀ ನರಳಾಡಿ ಮನೆಯ ಅಂಗಳದಲ್ಲೇ ದುರಂತ ಅಂತ್ಯ

    ಶಂಕಿತ ಉಗ್ರನ ಟಾರ್ಗೆಟ್​ನಿಂದ ಸಿಎಂ ಜಸ್ಟ್​ ಮಿಸ್​! ಶಾರೀಕ್​ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ!

    ರಾತ್ರೋರಾತ್ರಿ ಮಸಣದಲ್ಲಿ ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ! ಕಾರಣ ನಿಗೂಢ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts