More

    ರಾತ್ರೋರಾತ್ರಿ ಮಸಣದಲ್ಲಿ ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ! ಕಾರಣ ನಿಗೂಢ…

     ದೊಡ್ಡಬಳ್ಳಾಪುರ: ಆ ಗ್ರಾಮಸ್ಥರೆಲ್ಲ ಇಷ್ಟು ದಿನ ತಾವಾಯಿತು ತಮ್ಮ ಕೆಲಸವಾಯಿತು ಅಂತ ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ನೆಮ್ಮದಿಯಾಗಿದ್ದ ಆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಅದೊಂದು ಗ್ಯಾಂಗ್ ಮಧ್ಯರಾತ್ರಿ ಮಾಡುತ್ತಿರುವ ಕೆಲಸದಿಂದ ಇದೀಗ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದ್ದು, ಊರಿಂದ ಹೊರಗಡೆ ಬರುವುದಕ್ಕೂ ಭಯ ಪಡುತ್ತಿದ್ದಾರೆ.

    ಸುತ್ತಲೂ ಅರಿಶಿನ ಕುಂಕುಮ. ಜತೆಗೆ ರಂಗೋಲಿ. ಮತ್ತೊಂದಡೆ ತೆಂಗಿನಕಾಯಿ, ಎಲೆ, ಅಡಿಕೆ, ಕಡ್ಡಿ, ಕರ್ಪೂರ. ಪಕ್ಕದಲ್ಲೇ ಬರೆದಿರುವ ವಿವಿಧ ಬರಹಗಳು. ಅಷ್ಟೇ ಅಲ್ಲ, ಅಲ್ಲೊಂದು ಸುಂದರ ಯುವತಿಯ ಪೋಟೋ ಕೂಡ ಇಟ್ಟಿದ್ದಾರೆ. ಯಾರು ಪೂಜೆ ಮಾಡಿದ್ದಾರೆ ಅಂತ ಸಮೀಪಕ್ಕೆ ಹೋಗಿ ನೋಡಿದ ಗ್ರಾಮಸ್ಥರಿಗೆ ಸುಂದರ ಯುವತಿಯ ಫೋಟೋ ಕಾಣಿಸಿದೆ. ಅದನ್ನು ನೋಡಿ ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. 

    ಅಂದ ಹಾಗೆ ಈ ರೀತಿ ಸುಂದರ ಯುವತಿಯ ಫೋಟೋವೊಂದನ್ನು ಇಟ್ಟು ವಶೀಕರಣದ ವಾಮಾಚಾರ ಮಾಡಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಫುರ ತಾಲೂಕಿನ ಎಸ್ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ. ಎರಡು ದಿನಗಳ ಹಿಂದೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಕೆಲ ಖದೀಮರು ಹೊರವಲಯದಲ್ಲಿರುವ ಸ್ಮಶಾನದ ಬಳಿ ಹೀಗೆ ವಾಮಾಚಾರ ಮಾಡಿ ಹೋಗಿದ್ದಾರೆ. ಬೆಳಗ್ಗೆ ಎಂದಿನಂತೆ ಕುರಿಗಾಹಿಗಳು ಕುರಿ ಮೇಯಿಸಲು ಹೋದಾಗ ಅರಿಶಿನ, ಕುಂಕುಮವಿಟ್ಟು ವಾಮಾಚಾರ ಮಾಡಿರುವುದು ಗೊತ್ತಾಗಿದೆ. ಸಮೀಪ ಹೋಗಿ ನೋಡಿದಾಗ ವಾಮಾಚಾರದ ಬಳಿ ಸುಂದರ ಯುವತಿಯ ಫೋಟೊ ಕಂಡಿದೆ. ಆ ಯುವತಿ ಯಾರು ಅಂತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಳಿದಾಗ ಎಲ್ಲಿಯೂ ಆಕೆಯ ಬಗ್ಗೆ ತಿಳಿದಿಲ್ಲ. ಕಿಡಿಗೇಡಿಗಳು ವಾಮಾಚಾರ ಮಾಡಿರುವ ಸ್ಥಳದಲ್ಲಿ ವಶೀಕರಣ ಅಂತ ಬರಹಗಳನ್ನು ಬರೆದಿದ್ದು ರಂಗೋಲಿ ಹಾಕಿದ್ದಾರೆ. 

    ಇದೇ ಗ್ರಾಮದ ಮಂಜುನಾಥ್ ಎಂಬುವವರ ಮನೆಯಲ್ಲಿ ಮೂರು ತಿಂಗಳಲ್ಲಿ ಮೂವರು ಸಾವನ್ನಪ್ಪಿದ್ದು ಇತ್ತೀಚೆಗಷ್ಟೆ ಮೃತಪಟ್ಟಿದ್ದವರ ಸಮಾಧಿ ಬಳಿ ಈ ವಾಮಾಚಾರ ನಡೆದಿದೆ. ಹೀಗಾಗಿ ಕುಟುಂಬಸ್ಥರಿಗೆ ಈ ವಾಮಾಚಾರದ ಬಗ್ಗೆ ಭಯ ಶುರುವಾಗಿದೆ. ಯುವತಿಯ ಫೋಟೋ ಇಟ್ಟಿದ್ದ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗ್ರಾಮದ ಹೆಣ್ಣು ಮಕ್ಕಳು ಮತ್ತು ಪೋಷಕರಲ್ಲಿಯೂ ಆತಂಕ ಮನೆ ಮಾಡಿದೆ. ಈ ಬಗ್ಗೆ ತನಿಖೆ ನಡೆಸುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts