More

    ಬೊಮ್ಮಾಯಿ ಜತೆ ವಿಜಯೇಂದ್ರ ಹೆಸರೂ ಹೋಗಿದೆ; ಹೊಸ ಬಾಣ ಬಿಟ್ಟ ಬೇವಿನಮರದ

    ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎಂಬುದೇ ಇನ್ನೂ ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ವಿಜಯೇಂದ್ರರ ಹೆಸರೂ ಹೈಕಮಾಂಡ್‌ಗೆ ಹೋಗಿದೆ. ಸಿಎಂ ಅವರದ್ದೇ ಟಿಕೆಟ್ ಈವರೆಗೆ ಅಂತಿಮವಾಗಿಲ್ಲ. ಹೀಗಿರುವಾಗ ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಸವಾಲು ಹಾಕುತ್ತಾರೆ. ಮೊದಲು ಸಿಎಂ ಟಿಕೆಟ್ ತೆಗೆದುಕೊಂಡು ಬರಲಿ. ಅವರನ್ನು ಸೋಲಿಸಿ ಮನೆಗೆ ಕಳುಹಿಸುತ್ತೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹೊಸ ಬಾಣ ಬಿಟ್ಟರು.
    ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರಿಗೆ ಯಾವ ವಿಷಯ ಎಲ್ಲಿ ಮಾತನಾಡಬೇಕು ಎಂಬ ಸಾಮಾನ್ಯ ಜ್ಞಾನ. ನಮ್ಮ ನಾಯಕರಿಗೆ ಸವಾಲು ಹಾಕಿದ್ದಾರೆ. ‘ಕುಸ್ತಿ ಆಡೋಕೆ ಬರ‌್ರಿ’ ಅಂತಾ. ಕಣದೊಳಗೆ ಅವರದ್ದೇ ಗ್ಯಾರಂಟಿ ಇಲ್ಲ. ನಮ್ಮದು ಈಗಾಗಲೇ ಎರಡು ಪಟ್ಟಿ ಬಿಡುಗಡೆಯಾಗಿದೆ. ಅವರದ್ದು ಒಂದೂ ಬಿಡುಗಡೆಯಾಗಿಲ್ಲ ಎಂದರು.
    ಸಿಎಂ ಹೇಡಿಯಂತೆ ಮಾತನಾಡುತ್ತಾರೆ. ದೀಪ ಆರುವ ಮುಂಚೆ ಜೋರಾಗಿ ಪ್ರಜ್ವಲಿಸುತ್ತದೆ. ಸಿಎಂಗೆ ಧಮ್ಮು, ತಾಕತ್ತು ಇದ್ದರೆ ಸವಣೂರಿನ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಬರೆದ ಪತ್ರಕ್ಕೆ ಉತ್ತರಿಸಲಿ. ರಸ್ತೆಗಳು ಹಾಳಾಗಿದ್ದರಿಂದ ಸರ್ಕಾರಿ ಬಸ್ ಬಿಡುವುದಿಲ್ಲ ಎಂದು ಪತ್ರ ಬರೆದಿದ್ದರು. ಶಿಗ್ಗಾಂವಿ, ಹುಲಗೂರಲ್ಲಿ ಗೋಲಿಬಾರ್ ಆಗಿತ್ತು. ಶಿಗ್ಗಾಂವಿಯಲ್ಲಿ ಹಾಡಹಗಲೇ ದರೋಡೆ ನಡೆದಿತ್ತು. ಈ ಬಗ್ಗೆ ಸಿಎಂ ಉತ್ತರಿಸಲಿ ಎಂದು ಸವಾಲು ಹಾಕಿದರು.
    ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಸೆಡ್ಡು ಹೊಡೆದು ನಿಲ್ಲುತ್ತೇನೆ ಎಂದು ಸಿಎಂ ಸೋಲಿನ ಭೀತಿಯಿಂದ ಹತಾಶರಾಗಿ ನುಡಿದಿದ್ದಾರೆ. ಅವರು ಹಿಂಬಾಗಿಲಿನಿಂದ ಸಿಎಂ ಆದವರು. ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ವಿರುದ್ಧ ಸೋತು ಬೆಂಗಳೂರು ಸುತ್ತಿ ಬಂದು ಶಿಗ್ಗಾಂವಿ ಮುಗ್ದ ಜನರ ದಾರಿ ತಪ್ಪಿಸಿ, ಮೋಸ ಮಾಡಿ, ಒಳ ಒಪ್ಪಂದ ಮಾಡಿಕೊಂಡು ಶಾಸಕರಾದವರು. ಅಭಿವೃದ್ಧಿ ಹರಿಕಾರ ಎನ್ನುತ್ತ ಅವರು ಮಾತ್ರ ಅಭಿವೃದ್ಧಿ ಆಗಿದ್ದಾರೆ. ಇಂಥವರನ್ನು ಮನೆಗೆ ಕಳುಹಿಸಲು ಜನ ಸಿದ್ಧರಾಗಿದ್ದಾರೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಶಶಿಧರ ಯಲಿಗಾರ, ಷಣ್ಮುಖ ಶಿವಳ್ಳಿ, ರಾಜೇಶ್ವರಿ ಪಾಟೀಲ, ಸಂಜೀವ ನೀರಲಗಿ, ಯಾಸೀರ್‌ಖಾನ್ ಪಠಾಣ, ಶಿಗ್ಗಾಂವಿ ತಾಲೂಕು ಕಾಂಗ್ರಸ್ ಅಧ್ಯಕ್ಷ ಶಂಭು ಆಜೂರ, ಸವಣೂರ ತಾಲೂಕು ಅಧ್ಯಕ್ಷ ಎಂ.ಜಿ. ಮುಲ್ಲಾ, ಎಸ್.ವಿ.ಪಾಟೀಲ, ಇತರರಿದ್ದರು.

    ಕೋಟ್
    ಬಸವರಾಜ ಬೊಮ್ಮಾಯಿ ನೀರಾವರಿ ಸಚಿವ ಆಗಿದ್ದು, ಸಿಎಂ ಆಗಿದ್ದು ತಮ್ಮ ಸ್ವಾರ್ಥಕ್ಕೆ. ತಮ್ಮ ಬೆಂಬಲಿಗರಾದ ಶ್ರೀಕಾಂತ ದುಂಡಿಗೌಡ್ರ ಸೇರಿದಂತೆ ಇತರರಿಗೆ ಸಾವಿರಾರು ಕೋಟಿ ರೂ. ಗುತ್ತಿಗೆ ಕೆಲಸ ಕೊಡಿಸಿದ್ದಾರೆ. ಶಿಗ್ಗಾಂವಿ ಬಿಜೆಪಿ ಕಾರ್ಯಕ್ರಮಕ್ಕೆ ಹಣ ಹಂಚಿ ಜನರನ್ನು ಕರೆತಂದಿದ್ದಾರೆ. ಅವರಿಗೆ ನಾಚಿಕೆ ಆಗಬೇಕು.
    ಮಂಜುನಾಥ ಕುನ್ನೂರ, ಮಾಜಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts