More

    ಆಶ್ರಯ ಮನೆ ತೊರೆದ ಜನತೆ

    ಬೆಳಗಾವಿ: ಆಶ್ರಯ ಯೋಜನೆಯಡಿ ಮನೆ ಪಡೆದುಕೊಂಡಿದ್ದ ನೂರಾರು ಕುಟುಂಬಗಳ ಜನರು ಕರೊನಾ ವೈರಸ್ ಭೀತಿ ಹಾಗೂ ಲಾಕ್‌ಡೌನ್ ವಿಸ್ತರಣೆ ಮಾಡಿದ್ದರಿಂದ ಆಶ್ರಯ ಮನೆಗಳನ್ನು ತೊರೆದು ತಮ್ಮ ಊರಿನಲ್ಲಿರುವ ಸ್ವಂತ ಮನೆಗಳಿಗೆ ತೆರಳಿದ್ದಾರೆ.

    ಸ್ವಂತ ಮನೆಯಿದ್ದರೂ ಇವರೆಲ್ಲ ಹೇಗೆ ಆಶ್ರಯ ಯೋಜನೆಯ ಮನೆ ಪಡೆದರು ಎಂಬ ವಿಚಾರದ ಹಿಂದೆ ಈಗ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ.

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿರುವ ಬಡವರು, ಕಾರ್ಮಿಕರಿಗಾಗಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಕಣಬರ್ಗಿಯ ಸಾಗರ ನಗರದಲ್ಲಿ 250, ಶ್ರೀನಗರದಲ್ಲಿ 150 ಆಶ್ರಯ ಮನೆ ನಿರ್ಮಿಸಿತ್ತು. ಇವುಗಳನ್ನು ಮನೆ ಇಲ್ಲದಿರುವ ನಿರ್ಗತಿಕರೆಂದು ಪರಿಗಣಿಸಿ 2019ರಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದರು. ಆದರೆ, ಇದೀಗ ಕರೊನಾ ಭೀತಿ ಹಾಗೂ ಲಾಕ್‌ಡೌನ್ ಮೇ 3ರ ವರೆಗೆ ವಿಸ್ತರಣೆಯಾಗುತ್ತಿದ್ದಂತೆ ಅವರೆಲ್ಲರೂ ಆಶ್ರಯ ಮನೆ ತೊರೆದು ತಮ್ಮ ಊರುಗಳಲ್ಲಿರುವ ಮನೆಗಳಿಗೆ ತೆರಳಿದ್ದಾರೆ. ಸವದತ್ತಿ, ರಾಮದುರ್ಗ, ಬೆಳಗಾವಿ, ಖಾನಾಪುರ, ರಾಯಬಾಗ ತಾಲೂಕು ಹಾಗೂ ಕಲಬುರ್ಗಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಿಂದ ನಗರಕ್ಕೆ ಬಂದಿರುವ ದಿನಗೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಟ್ರಾೃಕ್ಟರ್ ಚಾಲಕರು ಇದ್ದಾರೆ. ಇವರೆಲ್ಲರೂ ಸ್ವಂತ ಕಾರು, ಟ್ರಾೃಕ್ಟರ್, ಊರುಗಳಲ್ಲಿ ಸ್ವಂತ ಮನೆ, ಆಸ್ತಿ ಹೊಂದಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಹಣ ಕೊಟ್ಟವರಿಗೆ ಮಾತ್ರ ಅಧಿಕಾರಿಗಳು ಆಶ್ರಯ ಮನೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ವಸತಿ ಯೋಜನೆಯಲ್ಲಿ ಅವ್ಯವಹಾರ ಆರೋಪ

    ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿರುವ ಮನೆಗಳ ಹಂಚಿಕೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. 10 ವರ್ಷದಿಂದ ಅರ್ಜಿ ಸಲ್ಲಿಸುತ್ತಿದ್ದೇವೆ. ಆದರೂ ನಮಗೆ ಮನೆ ನೀಡಿಲ್ಲ. ಆದರೆ, ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಅಧಿಕಾರಿಗಳು ಮನೆ ಹಂಚಿಕೆ ಮಾಡಿದ್ದಾರೆ ಎಂದು ನಗರದ ವಿವಿಧ ಕಡೆ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಅರ್ಹ ನಿವಾಸಿಗಳು ಆರೋಪಿಸಿದ್ದಾರೆ.

    ಲಾಕ್‌ಡೌನ್‌ನಿಂದಾಗಿ ನಗರದ ವಿವಿಧ ಜನತಾ ಕಾಲನಿಯ ಮನೆಗಳಲ್ಲಿ ವಾಸಿಸುವವರು ಮನೆ ಬಿಟ್ಟು ಹೋಗಿದ್ದರೆ ಅಥವಾ ಅವರು ಬೇರೆ ಕಡೆ ಸ್ವಂತ ಮನೆಗಳನ್ನು ಹೊಂದಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು.
    | ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts