More

    ಜಾತ್ರೆ ಬಂತಣ್ಣಾ.., ಕುರಿ-ಕೋಳಿ ಕೊಡಿಸಣ್ಣಾ!; ಲೋಕಸಭೆ ಆಕಾಂಕ್ಷಿಗಳಿಗೆ ದುಂಬಾಲು

    ನವೀನ ಎಂ.ಬಿ. ದಾವಣಗೆರೆ /ಪಂಕಜ ಕೆ.ಎಂ. ಬೆಂಗಳೂರು
    ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಜತೆಜತೆಗೆ ಜಾತ್ರೆಗಳ ಸೀಸನ್ ಕೂಡ ಆರಂಭವಾಗಿದೆ. ಜಾತ್ರೆ ಎಂದ ಮೇಲೆ ಸುಮ್ನೇ ಆದೀತೆ? ಮಾರುಕಟ್ಟೆಯಲ್ಲಿ ಕುರಿ-ಕೋಳಿ ಕೊಂಡು ತರಬೇಕು. ಖರ್ಚಿಗೆ ಹಣವೂ ಬೇಕು. ಇದೀಗ ಈ ಖರ್ಚು-ವೆಚ್ಚ ಅಭ್ಯರ್ಥಿಗಳ ಹಾಗೂ ಆಕಾಂಕ್ಷಿಗಳ ಹೆಗಲೇರಿದೆ.

    ಚುನಾವಣೆಯಲ್ಲಿ ಸಾರ್ವಜನಿಕರಿಗೆ ಉಡುಗೊರೆ, ನಗದು ಸೇರಿ ಯಾವುದೇ ರೀತಿಯ ಆಮಿಷ ನೀಡದಂತೆ ಚುನಾವಣಾ ಆಯೋಗ ನಿರ್ಬಂಧ ಹೇರುತ್ತದೆ. ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯುಕ್ತರು ಸೂಚಿಸಿದ್ದಾರೆ. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಒಂದೆಡೆ ಅಭ್ಯರ್ಥಿಗಳು ಮತದಾರರಿಗೆ ಸೆಳೆಯಲು ಕಸರತ್ತು ಆರಂಭಿಸಿದ್ದಾರೆ. ಮತ್ತೊಂದೆಡೆ ಮತದಾರರೇ ಅಭ್ಯರ್ಥಿಗಳಿಗೆ ಕುರಿ-ಕೋಳಿ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಚುನಾವಣೆ ಹೊತ್ತಲ್ಲಿ ಕುರಿ-ಕೋಳಿ ಕೊಡಿಸಲ್ಲ ಎಂದು ನಿರಾಕರಿಸುವ ಧೈರ್ಯವೂ ಅಭ್ಯರ್ಥಿಗಳಿಗೆ ಇಲ್ಲ.

    Gifts '

    ಏಕೆಂದರೆ ಮುಂದೈತೆ ಮಾರಿಹಬ್ಬ ಎಂದು ಮತದಾರ ಅಂದು ಬಿಟ್ಟರೆ ಎಂಬ ಭಯ! ಹೋಗ್ಲಿ ಬಿಡಿ ಎಂದು ಯಾರಿಗೋ ಕುರಿ ಕೊಡಿಸಿದರೆನ್ನಿ, ಮರುದಿನವೇ ಪಕ್ಕದ ಓಣಿ ಜನರು ಬಂದು ಕ್ಯೂ ನಿಲ್ಲುತ್ತಾರೆ ಎಂಬ ತಲೆನೋವು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗ ಜಾತ್ರೆಗಳು ಕಳೆಗಟ್ಟುತ್ತಿವೆ. ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಶುರು ಆಗಿದೆ. ಬುಧವಾರದಿಂದ ಮುಂದಿನ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ದಾವಣಗೆರೆಗೆ ಬಂದು ಹೋಗುವ ಜನರ ಸಂಖ್ಯೆ 3-4 ಲಕ್ಷ ದಾಟುತ್ತದೆ. ನಿಮಗೆ ಅಚ್ಚರಿ ಆಗಬಹುದು. ಜಾತ್ರೆ ನೆಪದಲ್ಲಿ ಕಡಿಮೆ ಎಂದರೂ 50 ಸಾವಿರಕ್ಕೂ ಅಧಿಕ ಕುರಿಗಳು ಬಾಡೂಟಕ್ಕೆ ಕೊರಳೊಡ್ಡುತ್ತವೆ. ಮತ ಸೆಳೆಯಲು ಕೆಲವರಿಗೆ ಇದು ಸುಲಭ ಮಾರ್ಗವಾದರೆ ಕೆಲವರಿಗೆ ಹೊರೆ.

    ಇತರ ಉಡುಗೊರೆ ವಿತರಣೆ ಜೋರು: ಬೆಂಗಳೂರು ಗ್ರಾಮಾಂತರ ಸೇರಿ ಕೆಲ ಕ್ಷೇತ್ರಗಳಲ್ಲಿ ಈಗಾಗಲೆ ಮಿಕ್ಸಿ, ಕುಕ್ಕರ್, ಫ್ಯಾನ್, ನಾನ್​ಸ್ಟಿಕ್ ತವಾದಂತಹ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತಿದೆ. ಪ್ರತಿ ಮತಕ್ಕೆ 4-5 ಸಾವಿರ ರೂ. ಕೊಡುವ ಭರವಸೆ ಸಹ ನೀಡಲಾಗಿದೆ. ಮೊದಲಿಗೆ ಅಭ್ಯರ್ಥಿಗಳು ಮಹಿಳಾ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಹೀಗಾಗಿ ಕೆಲ ಕ್ಷೇತ್ರಗಳಲ್ಲಿ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಲೋಡ್​ಗಟ್ಟಲೆ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿಟ್ಟು ಕೊಂಡಿದ್ದು, ದಿನಾಂಕ ನಿಗದಿಯಾಗುತ್ತಿದ್ದಂತೆ ವಿತರಣೆ ಕಾರ್ಯ ಆರಂಭಿಸಿದ್ದಾರೆ. ಧಾರ್ವಿುಕ ಪ್ರವಾಸ: ಇದಲ್ಲದೆ, ಜನರ ಭಕ್ತಿಯೂ ಸಹ ಅಭ್ಯರ್ಥಿಗಳಿಗೆ ಟ್ರಂಪ್​ಕಾರ್ಡ್ ಆಗಿದ್ದು, ಇದರ ಲಾಭ ಪಡೆದುಕೊಳ್ಳಲು ಪುಣ್ಯಕ್ಷೇತ್ರಗಳಿಗೆ ಹೋಗ ಬಯಸುವ ಮತದಾರರನ್ನು ಈಗಾಗಲೇ ಧಾರ್ವಿುಕ ಸ್ಥಳಗಳಿಗೆ ಪ್ರವಾಸ ಸಹ ಕಳುಹಿಸಿದ್ದಾರೆ.

    ಬೇಡ ಎಂದರೂ ಎರಡು ಪಕ್ಷದವರು ಉಡುಗೊರೆ ಕೊಟ್ಟವರೆ, ಹಣ ಕೊಡುವುದಾಗಿಯೂ ಹೇಳಿದ್ದಾರೆ. ಅವರ ಋಣ ನಮಗೆ ಬೇಡ. ಅದಕ್ಕೆ ನಮ್ಮ ಮನೆಯಲ್ಲಿನ ನಾಲ್ಕು ವೋಟುಗಳಲ್ಲಿ ಇಬ್ಬರು ಒಂದು ಪಕ್ಷಕ್ಕೆ, ಮತ್ತಿಬ್ಬರು ಇನ್ನೊಂದು ಪಕ್ಷಕ್ಕೆ ಹಾಕಲು ನಿರ್ಧರಿಸಿದ್ದೇವೆ.

    | ಉಡುಗೊರೆ ಪಡೆದ ಮತದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts