More

    ಭಂಗಿ ರಸ್ತೆ ಕಂಡವರ ಪಾಲು!

    ರಾಣೆಬೆನ್ನೂರ: ನಗರದಲ್ಲಿ ಹಲವು ದಶಕಗಳಿಂದ ಪಾಳು ಬಿದ್ದಿರುವ ಭಂಗಿ ರಸ್ತೆಗಳು ಇದೀಗ ಸಾರ್ವಜನಿಕರ ಬಳಕೆಗೆ ಮುಕ್ತವಾಗದೆ, ಉಳ್ಳವರು ಮನೆ ನಿರ್ವಿುಸಿಕೊಳ್ಳಲು ಹಾಗೂ ಕಸ ಎಸೆಯುವ ತೊಟ್ಟಿಗಳಾಗಿ ಪರಿವರ್ತನೆಯಾಗುತ್ತಿವೆ.

    ಇಲ್ಲಿಯ ಅಶೋಕ ನಗರ, ಹೊಸ ನಗರ, ಮೇಡ್ಲೇರಿ ರಸ್ತೆ, ಸಿದ್ಧೇಶ್ವರ ನಗರ, ಚರ್ಚ್ ರಸ್ತೆ ಹಾಗೂ ವಿವಿಧ ಬಡಾವಣೆ ಸೇರಿ ನಗರದಲ್ಲಿ 20 ಕಿಮೀಗೂ ಅಧಿಕ ಭಂಗಿ ರಸ್ತೆಗಳಿವೆ. ಕೆಲವೆಡೆ ಆಯಾ ವಾರ್ಡ್​ನ ನಗರಸಭೆ ಸದಸ್ಯರ ಮುತುವರ್ಜಿಯಿಂದ ಭಂಗಿ ರಸ್ತೆಗಳು ಡಾಂಬರೀಕರಣ ಕಂಡಿವೆ. ಆದರೆ, ಬಹುತೇಕ ಕಡೆಗಳಲ್ಲಿ ಹಾಗೆಯೇ ಉಳಿದಿದ್ದು, ಉಳ್ಳವರಿಂದ ಒತ್ತುವರಿಯಾಗುತ್ತಿವೆ.

    ಹಾಳುಬಿದ್ದ ರಸ್ತೆಗಳು: ಹಲವು ದಶಕಗಳ ಹಿಂದೆ ಸಾರ್ವಜನಿಕರು ಮಲಮೂತ್ರ ವಿಸರ್ಜನೆಗಾಗಿ ಭಂಗಿ ರಸ್ತೆ ಬಳಸುತ್ತಿದ್ದರು. ದಿನ ಕಳೆದಂತೆ ಒಳಚರಂಡಿ ಸಂಪರ್ಕ ಕಲ್ಪಿಸಿದ ಬಳಿಕ ಭಂಗಿ ರಸ್ತೆ ಬಳಕೆ ಸ್ಥಗಿತ ಮಾಡಲಾಯಿತು. ಇದಾದ ಬಳಿಕ ಸ್ಥಳೀಯ ನಗರಸಭೆ ಅಧಿಕಾರಿಗಳು ಭಂಗಿ ರಸ್ತೆಗಳನ್ನು ಡಾಂಬರೀಕರಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿತ್ತು. ಆದರೆ, ಈವರೆಗೆ ಭಂಗಿ ರಸ್ತೆಗಳ ಅಭಿವೃದ್ಧಿ ಕುರಿತು ಸ್ಥಳೀಯ ಶಾಸಕರು ಅಥವಾ ನಗರಸಭೆ ಅಧಿಕಾರಿಗಳು ಮುಂದಾಗಿಲ್ಲ. ಸಾರ್ವಜನಿಕರು ಸದ್ಯ ಈ ರಸ್ತೆಗಳಲ್ಲಿ ಕಸ ಹಾಕುತ್ತಿದ್ದಾರೆ.

    ಅತಿಕ್ರಮಣ ತೆರವುಗೊಳಿಸಿ: ಬಹುತೇಕ ಕಡೆಗಳಲ್ಲಿ ಭಂಗಿ ರಸ್ತೆಗಳನ್ನು ಅತಿಕ್ರಮಣ ಮಾಡಲಾಗಿದೆ. ರಸ್ತೆಯಲ್ಲಿ ವಾಣಿಜ್ಯ ಕಟ್ಟಡ, ಮನೆ ನಿರ್ವಿುಸಿಕೊಳ್ಳಲಾಗಿದೆ. ಹೀಗಾಗಿ ಈ ಭಾಗದಲ್ಲಿ ಭಂಗಿ ರಸ್ತೆಗಳು ಇದ್ದವೋ, ಇಲ್ಲವೋ ಎಂಬ ಮಾಹಿತಿ ತಿಳಿಯದಂತಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅತಿಕ್ರಮಣವಾಗಿರುವ ಭಂಗಿ ರಸ್ತೆಗಳನ್ನು ತೆರವುಗೊಳಿಸಬೇಕು ಎಂಬುದು ನಗರದ ಜನತೆಯ ಆಗ್ರಹವಾಗಿದೆ.

    ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಿ: ರಾಣೆಬೆನ್ನೂರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ, ಕಿರಿದಾದ ರಸ್ತೆಗಳಿರುವ ಮತ್ತು ವಾಣಿಜ್ಯ ಕಟ್ಟಡಗಳಿಗೆ ರ್ಪಾಂಗ್ ವ್ಯವಸ್ಥೆಯಿಲ್ಲದ ಕಾರಣ ಸಾರ್ವಜನಿಕರ ಓಡಾಟಕ್ಕೆ, ವಾಹನಗಳ ರ್ಪಾಂಗ್​ಗೆ ಸಾಕಷ್ಟು ತೊಂದರೆಯಾಗಿದೆ. ಆದರೆ, ಸಾರ್ವಜನಿಕರು ಓಡಾಡುವ ರಸ್ತೆ ಪಕ್ಕದಲ್ಲಿಯೇ ಇರುವ ಭಂಗಿ ರಸ್ತೆಗಳು ಪಾಳು ಬಿದ್ದಿವೆ. ಭಂಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರ ವಾಹನ ಓಡಾಟ, ರ್ಪಾಂಗ್​ಗೆ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಈ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಸ್ಥಳೀಯ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

    ನಗರದಲ್ಲಿ ಭಂಗಿ ರಸ್ತೆಗಳು ಒತ್ತುವರಿ ಆಗಿರುವ ಹಾಗೂ ನಿರುಪಯುಕ್ತವಾಗಿರುವ ಮಾಹಿತಿ ಇದೆ. ಈ ಕುರಿತು ಸಮಗ್ರ ಮಾಹಿತಿ ಕಲೆಹಾಕಿ, ಒತ್ತುವರಿ ತೆರವುಗೊಳಿಸಲಾಗುವುದು. ಬಳಿಕ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ.

    | ಡಾ. ಎನ್. ಮಹಾಂತೇಶ

    ನಗರಸಭೆ ಆಯುಕ್ತ

    ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಂದ ಭಂಗಿ ರಸ್ತೆಗಳು ಕಂಡವರ ಪಾಲಾಗುತ್ತಿವೆ. ಆದ್ದರಿಂದ ಶಾಸಕರು, ನಗರಸಭೆ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಭಂಗಿ ರಸ್ತೆಗಳನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಬೇಕು.

    | ಸಂತೋಷ ಎಂ., ಸ್ಥಳೀಯ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts