More

    ನ.28ಕ್ಕೆ ಮಲೆನಾಡ ಜನಾಕ್ರೋಶ ರ‌್ಯಾಲಿ: ಮಧು ಬಂಗಾರಪ್ಪ

    ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಮತ್ತು ಮಲೆನಾಡಿನ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಮತ್ತು ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತ ಸಮಿತಿ ನೇತೃತ್ವದಲ್ಲಿ ನ.28ರಂದು ನಗರದಲ್ಲಿ ಮಲೆನಾಡ ಜನಾಕ್ರೋಶ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು.
    ನಾಡಿಗೆ ಬೆಳಕು ಕೊಟ್ಟವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9ಕ್ಕೆ ಆಯನೂರಿನಿಂದ ಸಾವಿರಾರು ಸಂತ್ರಸ್ತರೊಂದಿಗೆ ಪಾದಯಾತ್ರೆ ಹೊರಟು ಸಂಜೆ 4ಕ್ಕೆ ಎನ್‌ಇಎಸ್ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಳುಗಡೆ ಸಂತ್ರಸ್ತರ ಧ್ವನಿಯಾಗಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮುಳುಗಡೆ ಸಂತ್ರಸ್ತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಅವರಿಗೆ ಹಕ್ಕುಪತ್ರ ನೀಡುವ ಮೂಲಕ ಬದುಕಲು ಅವಕಾಶ ನೀಡಬೇಕು. ಕಾಂಗ್ರೆಸ್ ಸರ್ಕಾರ 2015ರಲ್ಲಿ ತೆಗೆದುಕೊಂಡ ತೀರ್ಮಾನದಂತೆ ಅರಣ್ಯ ಇಲಾಖೆ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್ ಸಮಿತಿ ಮಾಡಿರುವ 55 ಡಿನೋಟಿಫಿಕೇಶನ್ ಅಧಿಸೂಚನೆಗಳನ್ನು ರದ್ದು ಮಾಡಿರುವುದನ್ನು ಹಿಂಪಡೆದು ಪ್ರಕ್ರಿಯೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
    ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ 1.93 ಲಕ್ಷ ಅರ್ಜಿಗಳ ಪೈಕಿ 73 ಸಾವಿರ ಅರ್ಜಿಗಳನ್ನು ವಿಚಾರಣೆ ಇಲ್ಲದೇ ತಿರಸ್ಕೃತಗೊಳಿಸಲಾಗಿದೆ. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ಹಕ್ಕುಪತ್ರ ವಿತರಣೆ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಸರಿಯಾಗಿದ್ದ ವ್ಯವಸ್ಥೆಯನ್ನೂ ಹಾಳು ಮಾಡಿದೆ. ಇದರಿಂದ ಮಲೆನಾಡು ಭಾಗದ ಜನರು ಬೀದಿ ಪಾಲಾಗುವಂತೆ ಮಾಡಿದ್ದಾರೆ. ಜನಪರ ಕಾನೂನು ಜಾರಿಗೆ ತರುವ ಬದಲು ಜನರನ್ನು ಶೋಷಿಸುವಂತಹ ಕಾನೂನು, ಕಾಯ್ದೆಗಳನ್ನು ತರುತ್ತಿದ್ದಾರೆ ಎಂದು ಕಿಡಿಕಾರಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ.ಪ್ರಸನ್ನ ಕುಮಾರ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಮಾಜಿ ಎಂಎಲ್ಸಿ ಆರ್.ಪ್ರಸನ್ನಕುಮಾರ್, ಮುಖಂಡರಾದ ಎಸ್.ಪಿ.ದಿನೇಶ್, ಇಸ್ಮಾಯಿಲ್ ಖಾನ್, ಕಲಗೋಡು ರತ್ನಾಕರ್, ಬಲದೇವಕೃಷ್ಣ, ರಮೇಶ್ ಇಕ್ಕೇರಿ, ರವಿಕುಮಾರ್, ಎನ್.ರಮೇಶ್, ದೀಪಕ್ ಸಿಂಗ್, ಜಿ.ಡಿ.ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts