More

    ಶರಾವತಿ ಸಂತ್ರಸ್ತರ ನೋವು: ಸಂಸತ್‌ನಲ್ಲಿ ಪ್ರಸ್ತಾಪ

    ಶಿವಮೊಗ್ಗ: ಶರಾವತಿ ಸಂತ್ರಸ್ತರ ಭೂಮಿ ಹಕ್ಕು ಸಮಸ್ಯೆಯನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಲೋಕಸಭೆ ಪ್ರಸ್ತಾಪಿಸಿದ್ದಾರೆ. ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿ ಅವರು, ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡಲು ಇರುವ ತೊಂದರೆಗಳನ್ನು ವಿವರಿಸಿದ ಕೇಂದ್ರ ಸರ್ಕಾರ ಜಮೀನು ಡಿನೋಟಿಫೈಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
    ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿನ ವಿವಿಧ 31 ಪ್ರದೇಶಗಳಲ್ಲಿ ಶರಾವತಿ ಯೋಜನೆಯ ಸಂತ್ರಸ್ತರು ನೆಲೆ ಕಂಡುಕೊಂಡಿದ್ದಾರೆ. ಶರಾವತಿ ಜಲವಿದ್ಯುತ್ ಯೋಜನೆಗಾಗಿ ಭೂಮಿ ನೀಡಿದ ಈ ಮಂದಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಭೂಮಿ ಹಕ್ಕು ಕೊಡಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂದರು.
    1959ರಿಂದ ಕಂದಾಯ ದಾಖಲೆಗಳಲ್ಲಿ ರೈತರ ಹೆಸರು ನಮೂದಾಗಿಲ್ಲ. ಮಲೆನಾಡು ಪ್ರಾಂತ್ಯವಾದ ಶಿವಮೊಗ್ಗ ಜಿಲ್ಲೆಯ ಈ ಭಾಗದ ರೈತರಲ್ಲಿ ಈಡಿಗ, ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅರಣ್ಯ ಕಾಯ್ದೆಗಳಲ್ಲಿ ಕಗ್ಗಂಟಿನಿಂದಾಗಿ ಇವರು ನ್ಯಾಯಯುತ ಹಕ್ಕು ಪಡೆಯದಂತಾಗಿದೆ ಎಂದು ಹೇಳಿದರು.
    ಪ್ರಸ್ತುತ ಅಸ್ತಿತ್ವದಲ್ಲಿರುವ ಅರಣ್ಯ ಸಂರಕ್ಷಣಾ ಕಾಯ್ದೆ-1980 ಜಾರಿಗೆ ಬರುವ ಮೊದಲೇ ಭೂಮಿ ಡಿನೋಟಿಫೈ ಮಾಡಿದ್ದರೆ ಈ ರೈತರಿಗೆ ಭೂಮಿ ಹಕ್ಕು ನೀಡಲು ಅವಕಾಶವಿತ್ತು. ಅಂದಿನ ಸರ್ಕಾರ ತೋರಿದ ನಿರಾಸಕ್ತಿಯಿಂದ ಈ ರೈತರಿಗೆ ಸರ್ಕಾರದ ಅನೇಕ ಸೌಲಭ್ಯಗಳು ಸಿಗದಂತಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯೂ ಇವರ ಕೈ ಸೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಪ್ರಕಾರ ಅರಣ್ಯ ಭೂಮಿ ಡಿನೋಟಿಫೈ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸಿಕ್ಕಿದೆ. ಕರ್ನಾಟಕ ಸರ್ಕಾರದಿಂದ ಬರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪ್ರಧಾನಿ ನರೇಂದ್ರ ಮೋದಿ ಹಾಗೂ ಪರಿಸರ ಮತ್ತು ಅರಣ್ಯ ಸಚಿವ ಭೂಪೆಂದರ್ ಸಿಂಗ್ ಅವರು ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರು ದಶಕಗಳ ಬಳಿಕವಾದರೂ ಅವರಿಗೆ ನ್ಯಾಯ ಒದಗಿಸಬೇಕು. ಎಲ್ಲ ನಿರಾಶ್ರಿತ ಕುಟುಂಬಗಳಿಗೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಸಹಕರಿಸಬೇಕೆಂದು ಮನವಿ ಮಾಡಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts