ಬೆಂಗಳೂರು: ಸಮಾಜಕ್ಕೆ ಸರಿದಾರಿ ತೋರುವ ವಚನಗಳ ಪ್ರಸಾರ ಅಗತ್ಯವಾಗಿದ್ದು, ಬಸವತತ್ವಕ್ಕೆ ಮೀಸಲಾಗಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಪರಿಷತ್ತಿನ ಗೌರವ ಸಲಹೆಗಾರರಾದ ಗೊ.ರು.ಚನ್ನಬಸಪ್ಪ ಹೇಳಿದರು.
ಜಯನಗರದ ಸುತ್ತೂರು ಸದನದಲ್ಲಿ ಗುರುವಾರ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಮೌಢ್ಯ ಹೊಡೆದೋಡಿಸುವ ಭ್ರಮೆ ಬೇಡ. ಆದರೆ ಶರಣ ಸಾಹಿತ್ಯಗಳ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗುವ ಕೆಲಸ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಬಸವ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ತು ಎರಡೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ.ಸಿ.ಸೋಮಶೇಖರ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡುತ್ತೇವೆ. ಒಂದು ವೇಳೆ ವಚನ ಸಾಹಿತ್ಯ ಇಲ್ಲದೆ ಇದ್ದರೆ ಕನ್ನಡ ಸಾಹಿತ್ಯ ಲೋಕ ಬಡವಾಗಿರುತ್ತಿತ್ತು. ಶರಣ ಸಾಹಿತ್ಯಕ್ಕೆ ದುಡಿದವರ ದೇಹಕ್ಕೆ ವಯಸ್ಸಾಗುತ್ತದೆ ವಿನಃ ಮನಸ್ಸಿಗೆ ವಯಸ್ಸಾಗುವುದಿಲ್ಲ. ನನ್ನನ್ನು ಕೈ ಹಿಡಿದು ನಡೆಸಿದ ವಚನ ಸಾಹಿತ್ಯವನ್ನು ಎಲ್ಲರ ಜೊತೆಗೂಡಿ ಪ್ರಸಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪರಿಷತ್ತು ಮಾಜಿ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಇತರರು ಇದ್ದರು.