More

    ಬಾಕಿ ಪಾವತಿ, ಎಥೆನಾಲ್ ಲಾಭ ಬೋನಸ್; ಸಾಫ್ಟ್​ವೇರ್, ಹೆಲ್ಪ್​ಲೈನ್​ಗೆ ಶೀಘ್ರ ಚಾಲನೆ ಸಚಿವ ಮುನೇನಕೊಪ್ಪ ಮಾಹಿತಿ

    ಶ್ರೀಕಾಂತ್ ಶೇಷಾದ್ರಿ
    ಬೆಳಗಾವಿ: ಒಂದೆಡೆ ವಿವಿಧ ಬೇಡಿಕೆ ಮುಂದಿಟ್ಟು ಕಬ್ಬು ಬೆಳೆಗಾರರ ಒಂದು ಗುಂಪು ಹೋರಾಟ ಮುಂದುವರಿಸಿರುವ ಹೊತ್ತಿನಲ್ಲೇ ಕಬ್ಬು ಬೆಳೆಗಾರರಿಗೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತಿದೆ ಮತ್ತು ಹೊಸ ವರ್ಷದಲ್ಲಿ ಸಿಹಿ ಅನುಭವ ನೀಡಲು ಸಿದ್ಧತೆ ನಡೆಸಿರುವ ಸಂಗತಿಯನ್ನು ಬಹಿರಂಗಮಾಡಿದೆ.

    ವಿಜಯವಾಣಿಯೊಂದಿಗೆ ಮಾತನಾಡಿದ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ದೇಶದ ವಿವಿಧ ರಾಜ್ಯಗಳಲ್ಲಿ ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದರೆ ಕರ್ನಾಟದಲ್ಲಿ ಒಂದೇ ಒಂದು ರೂಪಾಯಿ ಬಾಕಿ ಉಳಿಸಿಕೊಂಡಿಲ್ಲ ಎಂದರು.

    2020-21ರಲ್ಲಿ 3,519 ಕೋಟಿ ರೂ. ಹಾಗೂ 2021-22ರಲ್ಲಿ 20,632 ಕೋಟಿ ರೂಪಾಯಿ ಕಾರ್ಖಾನೆಗಳಿಂದ ರೈತರಿಗೆ ಪಾವತಿಯಾಗಬೇಕಿತ್ತು. ಅಷ್ಟೂ ಹಣ ಪಾವತಿಯಾಗಿದೆ. ಈ ಮೂಲಕ ರೈತರ ಬಹು ಮುಖ್ಯ ಬೇಡಿಕೆ ಈಡೇರಿದೆ ಎಂದರು. ಈ ಹಿಂದೆ ಬೆಳೆಗಾರರಿಗೆ ಬಾಕಿ ಉಳಿಯುವ ಮತ್ತು ಬೆಳೆಗಾರರಿಂದ ಬೇಡಿಕೆ ಇರುತ್ತಿತ್ತು, ಹೋರಾಟ ಕೂಡ ನಡೆಯುತ್ತಿತ್ತು. ಆದರೆ ನಮ್ಮ ಸರ್ಕಾರ ಕಾರ್ಖಾನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರಂತರ ಫಾಲೋಅಪ್​ನಿಂದ ಬಾಕಿ ಉಳಿದಂತೆ ಮಾಡಲಾಗಿದೆ ಎಂದು ವಿವರಿಸಿದರು.

    ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ಮಾಹಿತಿ ಹಂಚಿಕೊಂಡ ಸಚಿವರು, ಎಫ್​ಆರ್​ಪಿ ದರವನ್ನು ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ನಿಗದಿ ಮಾಡುತ್ತದೆ. ಬೆಳೆಗೆ ಆಗುವ ಖರ್ಚನ್ನು ಲೆಕ್ಕ ಹಾಕಿ ಬೆಲೆ ನಿಗದಿ ಮಾಡಲಾಗುತ್ತದೆ. ಇಳುವರಿ ಆಧಾರದಲ್ಲಿ ಕಾರ್ಖಾನೆಗಳು ಬೆಲೆ ಪಾವತಿಸುತ್ತವೆ. ಈ ಸಾಲಿನಲ್ಲಿ ಇಳುವರಿ ಇರುವ ಪ್ರತಿ ಟನ್ ಕಬ್ಬಿಗೆ 3600-3800 ರೂ.ವರೆಗೂ ಸಿಕ್ಕಿದೆ. ಇಳುವರಿ ಕಡಿಮೆ ಇರುವ ಕಡೆ ಕಡಿಮೆಯಾಗಿದೆ ಎಂದರು.

    204.47 ಕೋಟಿ ರೂ.: ಸಕ್ಕರೆ ಉದ್ಯಮದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಈ ವರ್ಷದಲ್ಲಿ ಎಫ್​ಆರ್​ಪಿ ದರದ ಮೇಲೆ ಹೆಚ್ಚುವರಿಯಾಗಿ ಕಬ್ಬಿನ ಬಿಲ್ಲನ್ನು ಪಾವತಿಸಲು ಅನುಕೂಲವಾಗುವಂತೆ ಉಪ ಉತ್ಪನ್ನದ ಎಥನಾಲ್ ಅನ್ನು ಪರಿಗಣಿಸಲಾಗಿದೆ. ಅದರಂತೆ ಪ್ರಥಮ ಕಂತಿನಲ್ಲಿ ಎಫ್​ಆರ್​ಪಿ ಜತೆಗೆ ಪ್ರತಿ ಮೆಟ್ರಿಕ್ ಟನ್ ಒಂದಕ್ಕೆ 50 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಸಂಬಂಧಿಸಿದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ. ತಜ್ಞರ ವರದಿ ಪಡೆದು ಲಾಭದ ಪಾಲು ನಿಶ್ಚಯಿಸಲಾಗಿದೆ. ಇದರಿಂದ ರಾಜ್ಯದ ರೈತರಿಗೆ 204.47 ಕೋಟಿ ರೂ.ಗಳಷ್ಟು ಹೆಚ್ಚುವರಿ ದರ ಸಿಗಲಿದೆ ಎಂದು ಸಚಿವರು ತಿಳಿಸಿದರು.

    ಅಲ್ಲದೇ 41 ಎಥೆನಾಲ್ ಉತ್ಪಾದನಾ ಘಟಕ ಆರಂಭಿಸಲು ಅವಕಾಶ ಕೋರಿ ಅರ್ಜಿ ಬಂದಿವೆ. ಇವುಗಳಿಗೆ ಶೀಘ್ರವೇ ಪರಿಶೀಲಿಸಿ ಒಪ್ಪಿಗೆ ನೀಡಲಾಗುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದರು.

    ಬಾಕಿ ಪಾವತಿ, ಎಥೆನಾಲ್ ಲಾಭ ಬೋನಸ್; ಸಾಫ್ಟ್​ವೇರ್, ಹೆಲ್ಪ್​ಲೈನ್​ಗೆ ಶೀಘ್ರ ಚಾಲನೆ ಸಚಿವ ಮುನೇನಕೊಪ್ಪ ಮಾಹಿತಿ

    ಜನವರಿಯಲ್ಲಿ ಚಾಲನೆ: ಸಕ್ಕರೆ ಕಾರ್ಖಾನೆಗಳು ಅರೆಯುವ ಕಬ್ಬಿನ ಪ್ರಮಾಣ, ಸಕ್ಕರೆ ಉತ್ಪಾದನೆ, ಇಳುವರಿ, ರೈತರ ಕಬ್ಬು ಬಿಲ್ಲು ಪಾವತಿ, ಬಾಕಿ ಪಾವತಿ, ಸಕ್ಕರೆ ಮತ್ತು ಕಾಕಂಬಿ ದಾಸ್ತಾನು, ಸಕ್ಕರೆ ಹಾಗೂ ಇತರೆ ಉಪ ಉತ್ಪನ್ನಗಳಿಂದ ಬರುವ ಆದಾಯದ ಲೆಕ್ಕಾಚಾರ ಹಾಕಲು ಸಾಫ್ಟ್​ವೇರ್ ಅಭಿವೃದ್ಧಿಪಡಿಸಲಾಗಿದೆ. ಕಾರ್ಖಾನೆಗಳಿಂದ ತ್ರೈಮಾಸಿಕ, ಪಾಕ್ಷಿಕ ವರದಿಗಳನ್ನು ನಿಖರವಾಗಿ ಹಾಗೂ ತ್ವರಿತವಾಗಿ ಪಡೆಯಲು ಅನುಕೂಲವಾಗುವಂತೆ ಸಾಫ್ಟ್​ವೇರ್ ಬಳಸಿಕೊಳ್ಳಲಾಗುತ್ತದೆ. ಈ ಹಿಂದೆ ಕಾರ್ಖಾನೆಗಳಿಂದ ಮಾನ್ಯುಯಲ್ ರೂಪದಲ್ಲಿ ವರದಿ ಪಡೆಯುವಾಗ ಸಾಕಷ್ಟು ತಿದ್ದುಪಡಿಗೆ ಅವಕಾಶ ಇತ್ತು. ಮಾಹಿತಿ ದಾಖಲೀಕರಣ ಆನ್​ಲೈನ್ ಮಾಡಿದಾಗ ತಿದ್ದುಪಡಿಗೆ ಅವಕಾಶ ಇಲ್ಲ. ಹಾಗೂ ಮೊಬೈಲ್ ಆಪ್ ಕೂಡ ಸಿದ್ಧಪಡಿಸುತ್ತಿದ್ದು, ಇದು ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಸಚಿವರು ಹೇಳಿದ್ದಾರೆ. ತಮ್ಮ ಗ್ರಾಮದಲ್ಲಿ ಕಬ್ಬು ಕಟಾವಿನ ಜ್ಯೇಷ್ಠತೆಯನ್ನೂ ಅರಿಯಲು ಸಾಧ್ಯವಾಗುವಷ್ಟು ಪಾರದರ್ಶಕತೆ ತರಲಾಗುತ್ತಿದೆ.

    ಕಬ್ಬು ಬೆಳೆಗಾರರಿಗೆ ಸ್ಪಂದಿಸಲು ಹೆಲ್ಪ್​ಲೈನ್ ಆರಂಭಿಸುತ್ತಿದ್ದು, ರೈತರು ದೂರು ಕೊಡಲು, ಮಾಹಿತಿ ಪಡೆಯಲು ಅನುಕೂಲವಾಗಲಿದೆ. ರೈತರ ದೂರು ಪರಿಹಾರವಾಗದೇ ಇದ್ದರೆ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೂ ಬರಲಿದೆ. ಈ ಎರಡೂ ಸೇವೆ ಜನವರಿಯಲ್ಲಿ ಚಾಲನೆ ಸಿಗಲಿದೆ ಎಂದು ಮುನೇನಕೊಪ್ಪ ವಿವರಿಸಿದರು.

    ದಾಳಿ ಮುಂದುವರಿಕೆ: ಕಬ್ಬಿನ ಇಳುವರಿ ಹಾಗೂ ತೂಕದ ವಿಷಯದಲ್ಲಿ ವಂಚನೆಯಾಗುತ್ತಿದೆ ಎಂಬ ರೈತರ ಕೂಗಿಗೆ ಸ್ಪಂದಿಸಿದ ಸರ್ಕಾರ ಕೆಲವು ವಾರಗಳ ಹಿಂದಷ್ಟೇ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಇದೇ ರೀತಿ ದಾಳಿಯನ್ನು ಮುಂದಿನ ನಾಲ್ಕು ತಿಂಗಳು ಮುಂದುವರಿಸಲು ಸಹ ನಿರ್ಧರಿಸಿದೆ.

    ಕಾರ್ಖಾನೆಗಳಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಆದರೆ, ರೈತರಿಗೆ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ. ಈಗಾಗಲೆ ದಾಳಿ ನಡೆದ ಕಾರ್ಖಾನೆಗಳ ಪೈಕಿ ಕೆಲವು ಕಡೆ ಮಹತ್ವದ ಅಂಶಪತ್ತೆಯಾಗಿದೆ. ಅದನ್ನು ಗೌಪ್ಯವಾಗಿಡಲಾಗಿದೆ. ದಾಳಿ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದರು.

    ಸರ್ಕಾರಗಳು ಕಾರ್ಖಾನೆ ಲಾಭಿಗೆ ಮಣಿಯುತ್ತವೆ ಎಂಬ ಭಾವನೆ ರೈತರಲ್ಲಿ ಇತ್ತು. ಆದರೆ, ನಾವು ಸಿಎಂ ಬೊಮ್ಮಾಯಿ ಮಾರ್ಗದರ್ಶನದಲ್ಲಿ ರೈತರ ಕೂಗಿಗೆ ಸ್ಪಂದಿಸಿದ್ದೇವೆ ಎಂದರು.

    ಕೇಂದ್ರ ಸರ್ಕಾರವು 2022-23ನೇ ಸಾಲಿನ ಸಕ್ಕರೆ ಹಂಗಾಮಿಗೆ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಗೊಳಿ ಸಿದ್ದು, ಶೇ.10.25 ಸಕ್ಕರೆ ಇಳುವರಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3050 ದರ ನಿಗದಿಪಡಿಸಿದ್ದು, ಕಳೆದ ಸಾಲಿನದ್ದು ರೈತರಿಗೆ ಶೇ.100 ಬಾಕಿ ಪಾವತಿಯಾಗಿದೆ.

    | ಶಂಕರ್ ಪಾಟೀಲ್ ಮುನೇನಕೊಪ್ಪ
    ಸಕ್ಕರೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts