More

    ಶೇನ್ ವ್ಯಾಟ್ಸನ್ ಐಪಿಎಲ್‌ಗೂ ವಿದಾಯ, ಚೆನ್ನೈ ಸೂಪರ್‌ಕಿಂಗ್ಸ್‌ಗೆ ಗುಡ್‌ಬೈ

    ಚೆನ್ನೈ: ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಆರಂಭಿಕ, ಮುಂದಿನ ಐಪಿಎಲ್‌ಗೆ ಅಲಭ್ಯರಾಗಿದ್ದಾರೆ. ಈಗಾಗಲೆ ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ 39 ವರ್ಷದ ವ್ಯಾಟ್ಸನ್, ಟಿ20 ಲೀಗ್‌ಗಳಲ್ಲಿ ಮಾತ್ರ ಆಡುತ್ತಿದ್ದರು.

    2018ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಸೇರಿದ್ದ ಶೇನ್ ವ್ಯಾಟ್ಸನ್, ಆ ವರ್ಷ ತಂಡದ ಪ್ರಶಸ್ತಿ ಗೆಲುವಿನಲ್ಲೂ ಗಮನಸೆಳೆದಿದ್ದರು. 2019ರ ಐಪಿಎಲ್‌ನಲ್ಲೂ ಅವರು ಸಿಎಸ್‌ಕೆ ಪರ ಫೈನಲ್ ಪಂದ್ಯದಲ್ಲಿ ದಿಟ್ಟ ಹೋರಾಟ ತೋರಿದ್ದರು. ಆದರೆ ಈ ವರ್ಷ ಸಿಎಸ್‌ಕೆ ಪರ ಉತ್ತಮ ನಿರ್ವಹಣೆ ತೋರಲು ವಿಫಲರಾಗಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಜೇಯ 83 ರನ್ ಗಳಿಸಿದ್ದು ಅವರ ಗರಿಷ್ಠ ಗಳಿಕೆಯಾಗಿತ್ತು.

    ಸಿಎಸ್‌ಕೆ ತಂಡ ಭಾನುವಾರ ಐಪಿಎಲ್-13ರ ಕೊನೇ ಪಂದ್ಯ ಆಡಿದ ಬಳಿಕ ವ್ಯಾಟ್ಸನ್ ಡ್ರೆಸ್ಸಿಂಗ್ ರೂಂನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು ಮತ್ತು ತಮ್ಮ ಜೀವನದ ಕೊನೇ ಪಂದ್ಯವನ್ನು ಆಡಿ ಆಗಿದೆ ಎಂದರು. ಸಿಎಸ್‌ಕೆ ತಂಡದ ಪರ ಆಡಿದ್ದು ತಮ್ಮ ಜೀವನದ ಭಾಗ್ಯ ಎಂದೂ ವ್ಯಾಟ್ಸನ್ ಭಾವುಕರಾಗಿ ನುಡಿದರು ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.

    ವ್ಯಾಟ್ಸನ್ ಈ ಮುನ್ನ ರಾಜಸ್ಥಾನ ರಾಯಲ್ಸ್ ಮತ್ತು ಆರ್‌ಸಿಬಿ ತಂಡದ ಪರವಾಗಿಯೂ ಐಪಿಎಲ್‌ನಲ್ಲಿ ಆಡಿದ್ದರು. 2008ರಲ್ಲಿ ರಾಜಸ್ಥಾನ ತಂಡ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸುವಲ್ಲಿ ವ್ಯಾಟ್ಸನ್ ಅವರ ಆಲ್ರೌಂಡ್ ನಿರ್ವಹಣೆ ಪ್ರಮುಖ ಪಾತ್ರವಹಿಸಿತ್ತು. ಅವರು ಆಸ್ಟ್ರೇಲಿಯಾ ಪರ 59 ಟೆಸ್ಟ್, 190 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದು, ಐಪಿಎಲ್‌ನಲ್ಲಿ ಒಟ್ಟಾರೆ 145 ಪಂದ್ಯ ಆಡಿದ್ದಾರೆ. ಈ ಪೈಕಿ 43 ಪಂದ್ಯಗಳನ್ನು ಸಿಎಸ್‌ಕೆ ಪರ ಆಡಿದ್ದಾರೆ. 2021ರ ಐಪಿಎಲ್‌ನಲ್ಲಿ ಅವರು ಸಿಎಸ್‌ಕೆ ತಂಡದ ತರಬೇತಿ ಸಿಬ್ಬಂದಿ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.

    VIDEO | ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಆಡುವುದಾಗಿ ಸ್ಪಷ್ಟಪಡಿಸಿದ ಧೋನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts