More

    VIDEO | ನಾನು ಮೊದಲ ಶತಕ ಸಿಡಿಸಿದಾಗ ನೀನಿನ್ನೂ ಹುಟ್ಟಿರಲಿಲ್ಲ, ಲಂಕಾ ಲೀಗ್‌ನಲ್ಲಿ ಅಫ್ರಿದಿ ಗರಂ!

    ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ಹಿರಿಯ ಮತ್ತು ಕಿರಿಯ ಕ್ರಿಕೆಟಿಗರ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಅಫ್ಘಾನಿಸ್ತಾನದ ಯುವ ಆಟಗಾರ ನವೀನ್ ಉಲ್ ಹಕ್ ವಿರುದ್ಧ ಕಿಡಿ ಕಾರಿದ್ದಾರೆ. ಜತೆಗೆ ಕಿರಿಯ ಕ್ರಿಕೆಟಿಗರು ಮೈದಾನದಲ್ಲಿ ತೋರಬೇಕಾದ ಕ್ರೀಡಾಸ್ಫೂರ್ತಿಯ ವರ್ತನೆಯ ಬಗ್ಗೆ ಪಾಠ ಮಾಡಿದ್ದಾರೆ.

    ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಂಡಿ ಟಸ್ಕರ್ಸ್‌ ಮತ್ತು ಗಾಲೆ ಗ್ಲಾಡಿಯೇಟರ್ಸ್‌ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಈ ಮಾತಿನ ಚಕಮಕಿಯ ವೇಳೆ 40 ವರ್ಷದ ಅಫ್ರಿದಿ, ‘ಮಗನೇ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದಾಗ ನೀನಿನ್ನೂ ಹುಟ್ಟಿರಲಿಲ್ಲ’ ಎಂದು ನವೀನ್ ಉಲ್ ಹಕ್‌ಗೆ ಹೇಳಿದ್ದಾರೆ ಎನ್ನಲಾಗಿದೆ.

    ಪಂದ್ಯದ ವೇಳೆ ಕ್ಯಾಂಡಿ ಟಸ್ಕರ್ಸ್‌ ತಂಡದ ನವೀನ್ ಉಲ್ ಹಕ್ ಪಾಕಿಸ್ತಾನದ ಮತ್ತೋರ್ವ ಆಟಗಾರ ಮೊಹಮದ್ ಆಮೀರ್‌ರನ್ನು ನಿಂದಿಸಿದ್ದರು ಎನ್ನಲಾಗಿದೆ. ಈ ವೇಳೆ ಗಾಲೆ ಗ್ಲಾಡಿಯೇಟರ್ಸ್‌ ತಂಡದ ನಾಯಕ ಶಾಹಿದ್ ಅಫ್ರಿದಿ ಕೂಡ ನವೀನ್ ಉಲ್ ಹಕ್ ಜತೆಗೆ ಮಾತಿನ ಚಕಮಕಿ ನಡೆಸಿದ್ದಾರೆ.

    ಪಂದ್ಯದ 18ನೇ ಓವರ್‌ನಲ್ಲಿ ನವೀನ್ ಉಲ್ ಹಕ್ ಎಸೆತದಲ್ಲಿ ಆಮೀರ್ ಬೌಂಡರಿ ಬಾರಿಸಿದ್ದರು. ಅದರ ಮರು ಎಸೆತದಲ್ಲಿ ನವೀನ್ ಯಾವುದೇ ರನ್ ಬಿಟ್ಟುಕೊಟ್ಟಿರಲಿಲ್ಲ. ಈ ವೇಳೆ ನವೀನ್, ಆಮೀರ್‌ರನ್ನು ನಿಂದಿಸಿದ್ದರು. 20ನೇ ಓವರ್ ಮುಗಿದ ಬಳಿಕ ಅಫ್ರಿದಿ ಕೂಡ ನವೀನ್ ಉಲ್ ಹಕ್ ಜತೆಗೆ ಮಾತಿನ ಚಕಮಕಿ ನಡೆಸಿದ್ದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಂದ್ಯದ ಬಳಿಕ ಅಫ್ರಿದಿ ಎಲ್ಲರೊಂದಿಗೆ ನಗುತ್ತಲೇ ಮಾತನಾಡಿದ್ದರೂ, ನವೀನ್ ಉಲ್ ಹಕ್ ಹತ್ತಿರ ಬಂದಾಗ ಗರಂ ಆಗಿದ್ದರು. ಈ ವೇಳೆ ಅಫ್ರಿದಿ, ನಾನು ಮೊದಲ ಶತಕ ಸಿಡಿಸಿದಾಗ ನೀನಿನ್ನೂ ಹುಟ್ಟಿರಲಿಲ್ಲ ಎಂದು 21 ವರ್ಷದ ನವೀನ್ ಉಲ್ ಹಕ್‌ಗೆ ಎಚ್ಚರಿಸಿದ್ದರು ಎನ್ನಲಾಗಿದೆ.

    ಬಳಿಕ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಅಫ್ರಿದಿ, ‘ಯುವ ಆಟಗಾರರಿಗೆ ನನ್ನ ಸಲಹೆ ಸರಳವಾಗಿದೆ. ನಿಮ್ಮ ಆಟವನ್ನು ನೀವು ಆಡಿ, ನಿಂದನೆಯ ಮೂಲಕ ಆಟವನ್ನು ಕೆಡಿಸಬೇಡಿ. ಅಫ್ಘಾನಿಸ್ತಾನ ತಂಡದಲ್ಲಿ ನನಗೂ ಗೆಳೆಯರಿದ್ದಾರೆ. ಅವರೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿರುವೆ. ಸಹ-ಆಟಗಾರರನ್ನು ಮತ್ತು ಎದುರಾಳಿಗಳನ್ನು ಗೌರವಿಸುವುದು ಆಟದ ಮೂಲ ಕ್ರೀಡಾಸ್ಫೂರ್ತಿಯಾಗಿದೆ’ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts