More

    ಲಿಂಗಾನುಪಾತ ಏರುಗತಿಯಲ್ಲಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಮಕ್ಕಳ ಜನನದ ಖ್ಯಾತಿ ಸುಳ್ಯ ತಾಲೂಕಿನ ಕಳಂಜ ಗ್ರಾಮ ಪಂಚಾಯಿತಿ ಪಾಲಾಗಿದೆ. ಪುತ್ತೂರು ತಾಲೂಕಿನ ಬೆಳಂದೂರು, ಬಂಟ್ವಾಳ ತಾಲೂಕಿನ ಮಣಿನಾಲ್ಕೂರು, ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮ ಪಂಚಾಯಿತಿ ನಂತರದ ಸ್ಥಾನ ಪಡೆದಿವೆ.
    ಕೇಂದ್ರ ಸರ್ಕಾರದ ಬೇಟಿ ಬಚಾವೋ-ಬೇಟಿ ಪಢಾವೋ ಕಾರ್ಯಕ್ರಮದ ಭಾಗವಾಗಿ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಜನನ ಅನುಪಾತದಲ್ಲಿ ಕಳಂಜ ಗ್ರಾಮ ಮೊದಲ ಸ್ಥಾನ ಪಡೆದಿದೆ. 2018-19ನೇ ಸಾಲಿನಲ್ಲಿ ಕಳಂಜ ಗ್ರಾಮದಲ್ಲಿ 27 ಹೆಣ್ಣುಮಕ್ಕಳು ಮತ್ತು 13 ಗಂಡು ಮಕ್ಕಳ ಜನನವಾಗಿದೆ. ಗ್ರಾಮದ ಲಿಂಗಾನುಪಾತ ಸಾವಿರಕ್ಕೆ 2077 ಆಗಿದ್ದು, ಇದು ಜಿಲ್ಲೆಯಲ್ಲೇ ಅತ್ಯಧಿಕವಾಗಿದೆ.
    ಪುತ್ತೂರಿನ ಬೆಳಂದೂರು ಗ್ರಾಮದಲ್ಲಿ 63 ಹೆಣ್ಣು ಮಕ್ಕಳು, 36 ಗಂಡು ಮಕ್ಕಳ ಜನನವಾಗಿದ್ದು, ಇಲ್ಲಿನ ಲಿಂಗಾನುಪಾತ 1750. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಪಂಚಾಯಿತಿಯಲ್ಲಿ 29 ಹೆಣ್ಣು ಮಕ್ಕಳು, 17 ಗಂಡು ಮಕ್ಕಳ ಜನನವಾಗಿದ್ದು, ಮಕ್ಕಳ ಲಿಂಗಾನುಪಾತ 1706. ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ 51 ಹೆಣ್ಮಕ್ಕಳು, 30 ಗಂಡು ಮಕ್ಕಳ ಜನನವಾಗಿದ್ದು, ಇಲ್ಲಿನ ಲಿಂಗಾನುಪಾತ 1700. ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಹೆಣ್ಮಕ್ಕಳಿಗೆ ಎದುರಾಗಿ 13 ಗಂಡುಮಕ್ಕಳ ಜನನವಾಗಿದ್ದು, ಗ್ರಾಮದ ಲಿಂಗಾನುಪಾತ 1692 ಆಗಿದೆ.

    950ರಿಂದ 955ಕ್ಕೆ ಹೆಚ್ಚಳ: ಜಿಲ್ಲೆಯಲ್ಲಿ 2018ರಿಂದ ಮಗಳನ್ನು ಉಳಿಸಿ ಮಗಳನ್ನು ಓದಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. 2001ರಲ್ಲಿ ಸಾವಿರ ಗಂಡು ಮಕ್ಕಳಿಗೆ 952 ಹೆಣ್ಣು ಮಕ್ಕಳಿದ್ದರು, 2011ರಲ್ಲಿ ಈ ಪ್ರಮಾಣ 948ಕ್ಕೆ ಕುಸಿದಿತ್ತು. 2017-18ನೇ ಸಾಲಿನಲ್ಲಿ 1000 ಗಂಡು ಮಕ್ಕಳಿಗೆ 950 ಹೆಣ್ಮಕ್ಕಳ ಜನನವಾಗಿತ್ತು. ಬಿಬಿಬಿಪಿ ಯೋಜನೆ ಅನುಷ್ಠಾನದ ನಂತರ 2018-19ರಲ್ಲಿ ಲಿಂಗಾನುಪಾತ ಪ್ರಮಾಣ ಸುಧಾರಣೆಯಾಗಿದ್ದು, 955ಕ್ಕೆ ಏರಿಕೆಯಾಗಿದೆ ಎನ್ನುತ್ತದೆ ಇಲಾಖೆಯ ಅಂಕಿ ಅಂಶ.

    20 ಸಾವಿರ ರೂ. ನಗದು: ಹೆಣ್ಮಕ್ಕಳ ಅನುಪಾತದಲ್ಲಿ ಮೊದಲ 5 ಸ್ಥಾನ ಪಡೆದ ಪಂಚಾಯಿತಿಗಳಿಗೆ ತಲಾ 20 ಸಾವಿರ ರೂ. ಬಹುಮಾನವಾಗಿ ನೀಡಲಾಗಿದೆ. ಈ ಮೊತ್ತವನ್ನು ಯೋಜನೆಗೆ ಪೂರಕವಾಗಿ ಬಳಸುವಂತೆ ಸೂಚನೆ ನೀಡಲಾಗಿದೆ. ಹೆಣ್ಮಕ್ಕಳನ್ನು ರಕ್ಷಿಸುವ ಕುರಿತು ಅಂಗನವಾಡಿಗಳಲ್ಲಿ ಗೋಡೆ ಬರಹಗಳನ್ನು ಬರೆಯುವುದು, ಗ್ರಾಮಮಟ್ಟದಲ್ಲಿ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಗ್ರಾಮದಲ್ಲಿ ಯಾವ ರೀತಿಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿದೆಯೋ ಅವುಗಳನ್ನು ಪಂಚಾಯಿತಿ ವತಿಯಿಂದ ನಡೆಸಬಹುದಾಗಿದೆ. ಗ್ರಾಮ ಪಂಚಾಯಿತಿಗಳನ್ನು ಗೌರವಿಸುವುದರಿಂದ ಇತರ ಪಂಚಾಯಿತಿಯವರಿಗೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎನ್ನುವ ಉತ್ಸಾಹ ಮೂಡುತ್ತದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಉಸ್ಮಾನ್.

    ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೆಣ್ಮಕ್ಕಳು ಅಧಿಕ ಜನಿಸಿದ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಅಭಿನಂದಿಸಲಾಗಿದೆ. ಅದೇ ರೀತಿ ಹೆಣ್ಮಕ್ಕಳ ಅನುಪಾತ ಕಡಿಮೆ ಇರುವ ಗ್ರಾಮಗಳನ್ನೂ ಗುರುತಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಈ ಕಾರ್ಯಕ್ರಮ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯಲಿದೆ.
    – ಎ.ಉಸ್ಮಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts