More

    ಕೊಳಚೆ ಗುಂಡಿಯಾದ ಕೆರೆ

    ಯರಗಟ್ಟಿ : ಕೆರೆ, ಬಾವಿ, ಹಳ್ಳ-ಕೊಳ್ಳ, ನದಿ-ಝರಿ.. ಹೀಗೆ ನೀರಿನ ಯಾವುದೇ ತಾಣವಿದ್ದರೂ ಅದನ್ನು ದೇವರಂತೆ ಪೂಜಿಸುತ್ತ ಬಂದವರು ನಾವು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಮೂಲ ಸ್ವರೂಪವನ್ನೇ ಮರೆತು ಜೀವಿಸಲು ಅಗತ್ಯವಿರುವ ಗಾಳಿ-ಬೆಳಕು, ನೀರಿನ ಸ್ವಚ್ಛತೆಯ ಕಡೆ ಗಮನ ಹರಿಸದೇ ನಮ್ಮ ಬದುಕನ್ನು ನಾವೇ ಅನೈರ್ಮಲ್ಯ ಮಾಡಿಕೊಳ್ಳುತ್ತಿದ್ದೇವೆ.

    ಇದಕ್ಕೆ ಸಾಕ್ಷಿಯಾಗಿದೆ ಇಲ್ಲಿನ ಗ್ರಾಮದ ಮಧ್ಯಭಾಗದಲ್ಲಿ ಹಾಗೂ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿಯೇ ಇರುವ ತುಂಬು ಕೆರೆಗೆ ಬಂದೊದಗಿರುವ ದುಸ್ಥಿತಿ. ಗ್ರಾಮದ ಕೊಳಚೆ ನೀರು ಕೆರೆಗೆ ಹರಿದು ಬಂದು ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಅಮೂಲ್ಯ ಜೀವ ಜಲ ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ಸಾರ್ವಜನಿಕರಲ್ಲಿ ರೋಗದ ಭೀತಿ ಉಂಟಾಗಿದೆ. ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ ನೀರಿನ ಬಳಕೆಯ ತಾಣವಾಗಿತ್ತು. ಬಳಿಕ ಬೋರ್‌ವೆಲ್ ನೀರಿನ ಹೆಚ್ಚಿನ ಬಳಕೆಯಿಂದ ಕೆರೆ ನೀರಿನ ಬಳಕೆ ಕಡಿಮೆಯಾಯಿತು. ಆದರೆ, ಮನೆ ಬಳಕೆಗೆ ಹಾಗೂ ದನಕರುಗಳಿಗೆ ಕುಡಿಯಲು ಉಪಯೋಗಿಸುತ್ತಿದ್ದರು. ಸದ್ಯ ಈ ಕೆರೆಯ ನೀರನ್ನು ಬಳಸಲು ಒತ್ತಟ್ಟಿಗಿರಲಿ ನೋಡಲೂ ಆಗದಂತಾಗಿದೆ. ಅಷ್ಟೊಂದು ಗಲೀಜಿನಿಂದ ಕೂಡಿದೆ. ಬಸ್ ನಿಲ್ದಾಣದ ಸುತ್ತಲಿನ ಹೋಟೆಲ್, ಖಾನಾವಳಿ, ವಿವಿಧ ಅಂಗಡಿಗಳ ತ್ಯಾಜ್ಯ ಮತ್ತು ಗ್ರಾಮದ ಮನೆಗಳ ಚರಂಡಿ ನೀರು ಹರಿದು ಬಂದು ಕೆರೆಯ ಕೋಡಿಯಲ್ಲಿ ಬಂದು ನಿಲ್ಲುತ್ತದೆ. ಅದರಲ್ಲಿ ಹಂದಿಗಳು ಉರುಳಾಡುತ್ತವೆ. ಈ ಗಲೀಜು ನೀರು ಹರಿದು ಕೆರೆ ಸೇರುತ್ತಿದೆ. ಇದರಿಂದ ನೀರೆಲ್ಲ ಹಸಿರು ಬಣ್ಣಕ್ಕೆ ತಿರುಗಿ ಗಬ್ಬೆದ್ದು ನಾರುತ್ತಿದೆ. ಜನರಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡು ಭೀತಿ ಉಂಟಾಗಿದೆ.

    ಹಿಂದೆ ಈ ಕೆರೆಗೆ ಬೆಳಗಾವಿ ರಸ್ತೆಯ ಎರೆ ಕವಲಿಯಿಂದ ಮಳೆಯ ನೀರು ಹರಿದು ಬರುತ್ತಿತ್ತು. ಅಲ್ಲಿ ಹೆದ್ದಾರಿ ಅಗಲೀಕರಣದಿಂದ ಅದು ಮುಚ್ಚಿ ಹೋಯಿತು. ಆದ್ದರಿಂದ ಕೆರೆಗೆ ನೀರು ಬರುವುದು ನಿಂತಿತು. ನಂತರದಲ್ಲಿ ಮಲಪ್ರಭಾ ಡ್ಯಾಂನಿಂದ ಮತ್ತು ಬೋರ್‌ವೆಲ್‌ಗಳ ಮೂಲಕ ಕೆರೆಗೆ ನೀರುವ ತುಂಬವ ಕೆಲಸ ಮಾಡಲಾಯಿತಾದರೂ ಅದು ಅಷ್ಟೊಂದು ಫಲಪ್ರದವಾಗಲಿಲ್ಲ. ಕೆರೆ ಖಾಲಿ ಇದ್ದರೂ ಅದರ ಸ್ವಚ್ಛತೆಗೆ ಗಮನ ಹರಿಸುವುದು ಅಗತ್ಯವಿದೆ. ಗಲೀಜು ನೀರು ಸೇರ್ಪಡೆಯಾಗುವುದು ನಿಲ್ಲಬೇಕಿದೆ. ಕೆರೆಯ ದುರ್ವಾಸನೆಗೆ ಸುತ್ತಲಿನ ಜನ ಬೇಸತ್ತಿದ್ದಾರೆ. ರೋಗ ಹರಡುವ ಆತಂಕ ಉಂಟಾಗಿದೆ. ಬಹು ಮುಖ್ಯವಾಗಿ ಕೆರೆಯ ದಡದಲ್ಲಿಯೇ ಶಾಲೆ ಇದೆ. ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಗಟಾರು ಮೂಲಕ ಕೆರೆಗೆ ಹರಿದು ಬರುತ್ತಿರುವ ಗಲೀಜು ನೀರನ್ನು ಸಂಪೂರ್ಣ ಬಂದ್ ಮಾಡಿ ಕೆರೆ ಸ್ವಚ್ಛತೆಯನ್ನು ಕಾಪಾಡಬೇಕಿದೆ.

    ಸ್ವಚ್ಛಗೊಳಿಸಲು ಒತ್ತಾಯ

    ಗ್ರಾಮದ ಚರಂಡಿ ನೀರು ಕೆರೆಗೆ ಹರಿದು ಬರುತ್ತಿದೆ. ಕೆರೆ ಸ್ವಚ್ಛತೆಗೆ ಯಾರೂ ಗಮನ ಹರಿಸುತ್ತಿಲ್ಲ. ತಕ್ಷಣವೇ ಈ ನೀರು ಹರಿದು ಬರುವುದನ್ನು ನಿಲ್ಲಿಸಿ, ಕೆರೆ ಸುರಕ್ಷತೆ ಹಾಗೂ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಯರಗಟ್ಟಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಕೆರೆಗೆ ಯರಗಟ್ಟಿ ಗ್ರಾಮದ ಗಲೀಜು ನೀರು ಸೇರುತ್ತಿರುವುದನ್ನು ನೋಡಿದ್ದೇವೆ. ಇದರಿಂದ ಕೆರೆ ಹಾಳಾಗುತ್ತಿದೆ. ಈ ಕುರಿತು ಈಗಾಗಲೇ ಪಿಡಬ್ಲುೃಡಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಕೆರೆ ಸುಧಾರಣೆಗೆ ಸಹಕಾರ ನೀಡಿದರೆ ನಾವು ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತೇವೆ.
    | ಬಿ.ಬಿ. ಅಮ್ಮಿನಭಾವಿ ಪಿಡಿಒ ಯರಗಟ್ಟಿ

    | ಸಿದ್ದು ಪೂಜಾರ ಯರಗಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts