More

    ಪುತ್ತೂರಿನಲ್ಲಿ ಕೊಳಚೆ ಸಂಸ್ಕರಣೆ

    ಶ್ರವಣ್ ಕುಮಾರ್ ನಾಳ ಪುತ್ತೂರು

    ಜಿಲ್ಲಾ ಕೇಂದ್ರವಾಗುವ ಹೊಸ್ತಿಲಲ್ಲಿರುವ ಪುತ್ತೂರು ನಗರಕ್ಕೆ ಸಮಗ್ರ ಒಳಚರಂಡಿ ಯೋಜನೆ ನಿರ್ಮಿಸುವ ಬಗ್ಗೆ ಡಿಪಿಆರ್ ರಚಿಸಿದ್ದರೂ ತಾಂತ್ರಿಕ ಕಾರಣದಿಂದ ಸರ್ಕಾರ ಅದನ್ನು ತಿರಸ್ಕರಿಸಿ ಫೀಕಲ್ ಸ್ಲಡ್ಜ್ ಸೆಪ್ಟೇಜ್ ಮ್ಯಾನೇಜ್‌ಮೆಂಟ್ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ.

    ರಾಜ್ಯದ ಬಹುತೇಕ ಕಡೆ ಒಳಚರಂಡಿ ಯೋಜನೆ ಸಮರ್ಪಕವಾಗಿ ಕಾರ್ಯಗತಗೊಳ್ಳದ ಕಾರಣ ಯುಜಿಡಿ ಯೋಜನೆ ಕೈಬಿಟ್ಟು 75 ಪೌರಾಡಳಿತ ಸಂಸ್ಥೆಗಳಲ್ಲಿ ಫೀಕಲ್ ಸ್ಲಡ್ಜ್ ಸೆಪ್ಟೇಜ್ ಮ್ಯಾನೇಜ್‌ಮೆಂಟ್ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ. ಈಗಾಗಲೇ ಪುತ್ತೂರಿನಲ್ಲಿ ಶೌಚ ಕೊಳಚೆ ಸಂಸ್ಕರಣಾ ಯೋಜನೆ ಜಾರಿಗೊಳಿಸಲು ಐದು ಎಕರೆ ಜಾಗ ಗುರುತಿಸಿದ್ದು ಸರ್ಕಾರದಿಂದ 3.32 ಕೋಟಿ ರೂ. ಮಂಜೂರಾಗಿದೆ.

    ಏನಿದು ಯೋಜನೆ?: ಶೌಚ ಗುಂಡಿಯ ಕೊಳಚೆಯೂ ಸೇರಿದಂತೆ ಮನೆಮನೆಯ ಕೊಳಚೆಯನ್ನು ಸಕ್ ಮಾಡಿ ಸಂಗ್ರಹಿಸಿ ಟ್ಯಾಂಕ್‌ಗಳ ಮೂಲಕ ಕೊಂಡೊಯ್ದು ಸಂಸ್ಕರಣಾ ಘಟಕಕ್ಕೆ ತುಂಬಿ ಅಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆಗೆ ಒಳಪಡಿಸಿ ಅದರಿಂದ ಗ್ಯಾಸ್ ಮತ್ತು ಗೊಬ್ಬರ ತಯಾರಿಸುವುದೇ ಈ ಯೋಜನೆಯ ಸರಳ ಸಾರಾಂಶ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೈಲಟ್ ಯೋಜನೆಯಾಗಿ ಪುತ್ತೂರನ್ನು ಆರಿಸಲಾಗಿದೆ. ಮುಂದಿನ ಹಂತದಲ್ಲಿ ವಿಟ್ಲ ಪಟ್ಟಣ ಪಂಚಾಯಿತಿಯಲ್ಲೂ ಕಾರ್ಯರೂಪಕ್ಕೆ ತರಲು ಉದ್ದೇಶಿಸಲಾಗಿದೆ. ಯೋಜನೆಯ ಅಡಿಯಲ್ಲಿ ಶೌಚ, ಕಲ್ಮಶ ಕೊಳಚೆಯನ್ನು ಸಕ್ ಮಾಡಿ ತೆಗೆಯಲು ಯಂತ್ರ ಮತ್ತು ಪೈಪ್ ಖರೀದಿಸಲಾಗುತ್ತದೆ. ಟ್ಯಾಂಕ್‌ಗಳಲ್ಲಿ ಕೊಂಡೊಯ್ದ ಬಳಿಕ ಅದನ್ನು ಸಂಸ್ಕರಿಸಲು ಉನ್ನತ ತಾಂತ್ರಿಕತೆಯ ಘಟಕ ನಿರ್ಮಿಸಲಾಗುತ್ತದೆ. ಅಲ್ಲಿ ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಲಾಗುತ್ತದೆ.

    ಯುಜಿಡಿ ಯೋಜನೆ ಕೈಬಿಟ್ಟದ್ದೇಕೆ?: ಪುತ್ತೂರಿನಲ್ಲಿ ಸಮಗ್ರ ಒಳಚರಂಡಿ ಯೋಜನೆ ನಿರ್ಮಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ. ಆದರೆ ಪುತ್ತೂರು ನಗರದ ಭೌಗೋಳಿಕತೆ ಒಳಚರಂಡಿ ನಿರ್ಮಿಸಲು ಪೂರಕವಾಗಿಲ್ಲ ಎಂಬ ತಾಂತ್ರಿಕ ಸಂಶೋಧನಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಪುತ್ತೂರು ಸಮತಟ್ಟಾದ ನಗರವಲ್ಲ. ಇಲ್ಲಿ ಏರು ತಗ್ಗು, ಬೆಟ್ಟ, ತಗ್ಗು ಪ್ರದೇಶಗಳಿವೆ. ಇಂಥ ನಗರದಲ್ಲಿ ಒಳಚರಂಡಿ ನಿರ್ಮಿಸಿದರೆ ಅದರಲ್ಲಿ ಕೊಳಚೆ ಹಾಗೂ ಕಲ್ಮಶ ನೀರು ಕೊಂಡೊಯ್ಯಲು ಕಷ್ಟ ಎಂದು ಭಾವಿಸಲಾಗಿದೆ. ಹೀಗಾಗಿ ಅದನ್ನು ಕೈಬಿಟ್ಟು ಫೀಕಲ್ ಸ್ಲಡ್ಜ್ ಸೆಪ್ಟೇಜ್ ಮ್ಯಾನೇಜ್‌ಮೆಂಟ್ ಯೋಜನೆ (ಎಫ್‌ಎಸ್‌ಎಸ್‌ಎಂ) ಜಾರಿಗೊಳಿಸಲು ನಿರ್ಧರಿಸಲಾಗಿದೆ.

    ಪುತ್ತೂರಿನಲ್ಲಿ ಫೀಕಲ್ ಸ್ಲಡ್ಜ್ ಸೆಪ್ಟೇಜ್ ಮ್ಯಾನೇಜ್‌ಮೆಂಟ್ ಯೋಜನೆಗಾಗಿ ಐದು ಎಕರೆ ಜಾಗ ಗುರುತಿಸಲಾಗಿದೆ. ಪರಿಸರ ಸ್ನೇಹಿ ಮಾನದಂಡ ಅನುಸರಿಸಿಕೊಂಡು ಘಟಕ ನಿರ್ಮಾಣವಾಗಲಿದೆ. ಇದಕ್ಕೆ ರಾಜ್ಯಮಟ್ಟದ ಟೆಂಡರ್ ಪ್ರಕಟವಾಗಲಿದೆ. ಯೋಜನೆಯ ಪೂರ್ಣ ಚಿತ್ರಣ ಇರುವ ಡಿಪಿಆರ್ ಸಿದ್ಧವಾಗಿದ್ದು, ಇದನ್ನು ಜಿಲ್ಲಾಮಟ್ಟದಲ್ಲಿ ಪರಿಶೀಲಿಸಲಾಗಿದೆ. ಮುಂದಿನ ಹಂತದಲ್ಲಿ ನಗರಸಭೆ ಸದಸ್ಯರಿಗೆ ಇದರ ಚಿತ್ರಣ ನೀಡಲಾಗುತ್ತದೆ.
    -ಮಧು ಎಸ್.ಮನೋಹರ್
    ಪುತ್ತೂರು ನಗರಸಭಾ ಪೌರಾಯುಕ್ತ

    ಭವಿಷ್ಯದಲ್ಲಿ ನಿರ್ಮಾಣವಾಗಲಿರುವ ಮನೆಗಳಿಗೆ ಶೌಚ ಗುಂಡಿ (ಸೆಪ್ಟಿಕ್ ಟ್ಯಾಂಕ್) ನಿರ್ಮಿಸಲು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಲಾಗುತ್ತದೆ. ಇದರಿಂದ ಕೊಳಚೆ ಸಕ್ ಮಾಡಿ ತೆಗೆಯಲು ಅನುಕೂಲವಾಗುತ್ತದೆ. ಘಟಕದಲ್ಲಿ ತಯಾರಿಸಲಾದ ಬಯೋಗ್ಯಾಸ್ ಅನ್ನು ಮಾರಾಟ ಮಾಡಿ ನಗರಸಭೆಗೆ ಆದಾಯ ಗಳಿಸಬಹುದು. ಅದೇ ರೀತಿ ಇಲ್ಲಿ ಉತ್ಪಾದಿಸಲಾದ ಗೊಬ್ಬರವನ್ನು ಕೃಷಿಕರಿಗೆ ಮಾರಾಟ ಮಾಡಬಹುದು.
    -ಜೀವಂಧರ ಜೈನ್
    ಪುತ್ತೂರು ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts