More

    ಅಶಕ್ತರಿಗೆ ಸೇವಾ ಭಾರತಿ ಆಸರೆ

    ಧಾರವಾಡ: ಕರೊನಾ ಹಾವಳಿ ದಿನೇ ದಿನೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ಲಾಕ್​ಡೌನ್, ಜನತಾ ಕರ್ಫ್ಯೂನಿಂದ ಸಾಕಷ್ಟು ಕಷ್ಟಗಳು ಎದುರಾಗಿವೆ. ಹೀಗೆ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಜನಕ್ಕೆ ಸೇವಾ ಭಾರತಿ ಟ್ರಸ್ಟ್ ಆಸರೆಯಾಗಿದೆ.

    ಧಾರವಾಡ ನಗರವು ನಿವೃತ್ತಿ ಜನರ ಸ್ವರ್ಗ ಎಂದೇ ಹೆಸರುವಾಸಿ. ಸದ್ಯದ ಸ್ಥಿತಿಯಲ್ಲಿ ವಯೋವೃದ್ಧರು ಮನೆಯಿಂದ ಹೊರಹೋಗಿ ಅಗತ್ಯ ವಸ್ತು, ಔಷಧಗಳನ್ನು ತರುವುದು ಕಷ್ಟ. ಇನ್ನು ಮನೆಯಲ್ಲಿ ಯಾರೇ ಸತ್ತರೂ ಪಕ್ಕದ ಮನೆಯವರಿರಲಿ, ಸಂಬಂಧಿಕರೂ ಬರಲು ಹಿಂದೇಟು ಹಾಕುವಂತಾಗಿದೆ. ಇಂತಹ ಸಂಗತಿಗಳನ್ನು ಗಮನಿಸಿದ ಸೇವಾ ಭಾರತಿ ಟ್ರಸ್ಟ್ ಧಾರವಾಡ ಘಟಕದ ಪದಾಧಿಕಾರಿಗಳು ಜನರಿಗೆ ನರವಾಗಲು ಮುಂದಾಗಿದ್ದಾರೆ.

    ಸುಮಾರು 15 ಜನರನ್ನು ಒಳಗೊಂಡ ತಂಡ ಒಂದು ವಾರದಿಂದ ಸೇವೆ ಆರಂಭಿಸಿದೆ. ಯಾರೇ ಕರೆ ಮಾಡಿ ಯಾವುದೇ ಸೇವೆ ಬಯಸಿದರೂ ಕೂಡಲೇ ಕಾರ್ಯಪ್ರವೃತ್ತರಾಗಿ ಅವರಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ. ಈ ಸೇವೆಗೆ ಈಗಾಗಲೇ ಸಾಕಷ್ಟು ಜನ ಮನ್ನಣೆ ದೊರೆತಿದೆ.

    ಅಶಕ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಆದರೆ, ಸತ್ತವರ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ. ಈ ತಂಡ ಮಾತ್ರ ಯಾವುದೇ ಭಯವಿಲ್ಲದೆ ಈ ಕೆಲಸ ಮಾಡುತ್ತಿದೆ. ಸಾಮಾನ್ಯ ಸಾವು ಮಾತ್ರವಲ್ಲದೆ, ಕೋವಿಡ್​ನಿಂದ ಮೃತಪಟ್ಟವರಿಗೂ ಮುಕ್ತಿ ಕೊಡುವ ಕೆಲಸ ಮಾಡುತ್ತಿದೆ. ಹೀಗೆ ಒಂದು ವಾರದ ಹಿಂದೆ ಆರಂಭವಾದ ಸೇವೆಯಲ್ಲಿ ಈವರೆಗೆ 8 ಜನರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

    ಈ ನಿಸ್ವಾರ್ಥ ಸೇವೆ ನಡೆಸುತ್ತಿರುವ ತಂಡದ ಮೇಲುಸ್ತುವಾರಿಯನ್ನು ವೆಂಕಟೇಶ ಕರಿಕಲ್, ವಿಶಾಲ ಸಂಗಣ್ಣವರ, ಶ್ರೀಶ ಬಳ್ಳಾರಿ, ಸಂತೋಷ ಪೂಜಾರಿ ನೋಡಿಕೊಳ್ಳುತ್ತಿದ್ದಾರೆ. ಸಂಜಯ ಕಪಟಕರ, ವಿಷ್ಣು ಕೊರ್ಲಹಳ್ಳಿ, ಭಾಸು ಕುಲಕರ್ಣಿ, ಸುದರ್ಶನ ಬಾಳಿಗ, ಆನಂದ ಯಾವಗಲ್ ಸೇರಿ ಸುಮಾರು 15 ಜನರು ಇವರೊಂದಿಗೆ ಕೈಜೋಡಿಸಿದ್ದಾರೆ.

    ನೀವೂ ಸಂಪರ್ಕಿಸಬಹುದು

    ಮನೆಯಿಂದ ಹೊರಹೋಗದ ಸ್ಥಿತಿಯಲ್ಲಿರುವವರು ಇವರಿಗೆ ಕರೆ ಮಾಡಿ ಅಗತ್ಯ ನೆರವು ಪಡೆಯಬಹುದು. ಈ ತಂಡ ಕಿರಾಣಿ, ಔಷಧ ಹಾಗೂ ಅಂತ್ಯ ಸಂಸ್ಕಾರ ನೆರವೇರಿಸುವ ಕೆಲಸ ಮಾಡುತ್ತಿದೆ. ಈ ಸೇವೆ ಬಯಸುವವರು ಮೊ. 9845799027, 7899935709 ಅಥವಾ 7019285115 ಸಂರ್ಪಸಿ ಸೇವೆ ಪಡೆಯಬಹುದು.

    ಜನರ ಕಷ್ಟ ಅರಿತು ಸೇವೆ ನಡೆಸಲಾಗುತ್ತಿದೆ. ಮಕ್ಕಳು ಹೊರ ದೇಶದಲ್ಲಿದ್ದು ವೃದ್ಧರು ಮಾತ್ರ ಮನೆಯಲ್ಲಿರುತ್ತಾರೆ. ಅಂತಹವರಿಗೆ ಔಷಧ, ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ಇನ್ನು ಸಾಮಾನ್ಯವಾಗಿ ನಿಧನ ಹೊಂದಿದರೂ ಸಂಬಂಧಿಕರು, ಅಕ್ಕಪಕ್ಕದವರು ಬರದ ಸ್ಥಿತಿಯನ್ನು ಕರೊನಾ ತಂದಿಟ್ಟಿದೆ. ಹೀಗಾಗಿ, ಅಂತ್ಯ ಸಂಸ್ಕಾರ ನೆರವೇರಿಸುವ ಕೆಲಸವನ್ನೂ ನಮ್ಮ ತಂಡ ಮಾಡುತ್ತಿದೆ.

    | ಸಂತೋಷ ಪೂಜಾರಿ, ಸೇವಾ ಭಾರತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts