More

  ಫ್ರೂಟ್ಸ್ ಐಡಿ ಲಿಂಕಿಂಗ್‌ಗೆ ಸರ್ವರ್ ಪ್ರಾಬ್ಲಂ

  ಶೃಂಗೇರಿ: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಬ್ಯಾಂಕ್‌ಗಳಲ್ಲಿ ಕಂತು ಕಟ್ಟಲು ಜು.31 ಅಂತಿಮ ಗಡುವು ನೀಡಲಾಗಿದೆ. ಆದರೆ ಮಳೆ ತೀವ್ರವಾಗಿರುವುದರಿಂದ ಫ್ರೂಟ್ಸ್ ಐಡಿ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ರೈತರು ತಿಳಿದುಕೊಳ್ಳಲು ಸರ್ವರ್ ಸಮಸ್ಯೆ ಎದುರಾಗಿದೆ.

  ಈ ವರ್ಷದ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ವ್ಯಾಪ್ತಿಗೆ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಒಳಪಡಿಸಲಾಗಿದೆ. ವಿಮಾ ಯೋಜನೆಗೆ ಬೆಳೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಾದ ಅಡಕೆ, ಕಾಳುಮೆಣಸು ಬೆಳೆಗಳಿಗೆ ಬ್ಯಾಂಕ್‌ಗಳಲ್ಲಿ ವಿಮಾ ಯೋಜನೆಯಡಿ ಅರ್ಜಿ ಸಲ್ಲಿಸಲು ಜು.31 ಅಂತಿಮ ದಿನ. ಆದರೆ ಪ್ರಸ್ತಕ ಸಾಲಿನಲ್ಲಿ ಫ್ರೂಟ್ಸ್ ಐಡಿ ಕಡ್ಡಾಯ.
  ತಾಲೂಕಿನಲ್ಲಿ ಕಸಬಾ ಹಾಗೂ ಕಿಗ್ಗಾ ಹೋಬಳಿಗಳಲ್ಲಿ ಪ್ರತಿ ಹೆಕ್ಟೇರ್ ಕಾಳುಮೆಣಸಿಗೆ 2,350 ಹಾಗೂ ಅಡಕೆ ಬೆಳೆಗೆ 6,400 ರೂ. ವಿಮಾ ಕಂತು ಕಟ್ಟಬೇಕಿದೆ. 2023ರಲ್ಲಿ ವಿಮಾ ಮೊತ್ತ ಪಾವತಿ ಜು.19ರಿಂದ ಆರಂಭವಾಗಿದ್ದು, ಜು.31ರವರೆಗೆ ಕಾಲಾವಕಾಶ ನೀಡಲಾಗಿದೆ. ಹವಾಮಾನ ಆಧಾರಿತ ಬೆಳೆ ವಿಮೆ-2023ರಲ್ಲಿ ತೋಟಗಾರಿಕೆ ಬೆಳೆಗಳಿಗೆ ವಿಮಾಕಂತು ಪಾವತಿಸಲು ಈ ಬಾರಿ ಐಡಿ ಸಂಖ್ಯೆ ಕಡ್ಡಾಯ ಮಾಡಲಾಗಿದೆ. ಫ್ರೂಟ್ಸ್ ಐಡಿ ಲಿಂಕ್ ಮಾಡಿಸಲು ಸಮಯ ಬೇಕಿದೆ. ಅಲ್ಲದೆ ನಿಗದಿ ಮಾಡಿರುವ ಗಡುವು ಕೂಡ ಸಮೀಪಿಸುತ್ತಿದೆ. ಬೆಳೆಗಳ ವಿಮಾ ಕಂತು ಕಟ್ಟಲು ಕಾಲಾವಕಾಶ ಬೇಕಿದೆ ಎಂದು ಕೃಷಿಕರು ಒತ್ತಾಯಿಸುತ್ತಿದ್ದಾರೆ.
  ನೆಟ್‌ವರ್ಕ್ ಸಮಸ್ಯೆ: ತಾಲೂಕಿನಲ್ಲಿ ಜೂನ್ ಕಳೆದರೂ ಮಳೆಯ ಸುಳಿವಿರಲಿಲ್ಲ. ಆದರೆ ದಿಢೀರ್ ಆರೇಳು ದಿನಗಳಿಂದ ಸುರಿದ ಮಳೆಗೆ ತಾಲೂಕಿನಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ. ತಾಲೂಕಿನ ಹಲವು ರೈತರು ಫ್ರೂಟ್ಸ್ ಐಡಿ ಮಾಡಿಸಿದ್ದಾರೆ. ಆದರೆ ಅದರ ಸಂಖ್ಯೆ ಇಲ್ಲದಿದ್ದರೆ ವಿಮಾ ಕಂತು ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ರೈತರು ಐಡಿ ಸಂಖ್ಯೆ ಕ್ರಿಯೇಟ್ ಆಗಿರುವ ಕುರಿತು ಖಾತ್ರಿಪಡಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಆನ್‌ಲೈನ್ ಪೋರ್ಟಲ್‌ನಲ್ಲಿ ರೈತರ ಐಡಿ ಸಂಖ್ಯೆ ಇದೆಯೇ? ಇಲ್ಲವೇ? ಎಂದು ಪರಿಶೀಲಿಸಲು ಸರ್ವರ್ ಸಮಸ್ಯೆ ಎದುರಾಗಿದೆ. ಒಟ್ಟಾರೆ ವಿಮಾ ಕಂತು ಕಟ್ಟಲು ತಾಲೂಕಿನ ರೈತರು ಗುರುತಿನ ಸಂಖ್ಯೆ ಪಡೆಯಲು ಪರದಾಡುವ ಸ್ಥಿತಿ ಉಂಟಾಗಿದೆ.
  ಮೃತರ ಹೆಸರಲ್ಲಿ ಪರಿಹಾರ!: ಈ ಹಿಂದೆ ರೈತರ ಬ್ಯಾಂಕ್ ಸಂಖ್ಯೆ, ಆಧಾರ್ ಸಂಖ್ಯೆ, ಪಹಣಿ ದಾಖಲಿಸಿ ವಿಮೆ ಕಂತು ತುಂಬಬಹುದಿತ್ತು. ಪಹಣಿ ಜಂಟಿ ಹೆಸರಿನಲ್ಲಿ ಇದ್ದರೂ ಒಪ್ಪಿಗೆ ಪತ್ರದ ಜತೆಗೆ ವಿಮಾ ಕಂತು ಪಾವತಿಸಬಹುದಿತ್ತು. ಬೆಳೆ ವಿಮೆಯನ್ನು ಜಂಟಿದಾರರಲ್ಲಿ ಒಬ್ಬರು ತುಂಬಿ ತಾವೇ ಹಣ ಪಡೆಯುತ್ತಿದ್ದರು. ಅಥವಾ ಮೃತರ ಹೆಸರಿನಲ್ಲಿ ಜಮೀನು ಇದ್ದು ಅವರ ವಾರಸುದಾರರಲ್ಲಿ ಒಬ್ಬರು ತಮ್ಮಲ್ಲಿರುವ ದಾಖಲೆ ಸಲ್ಲಿಸಿ ಬೆಳೆ ವಿಮೆ ಪರಿಹಾರ ಪಡೆದಿದ್ದಾರೆ. ಈ ರೀತಿಯ ವ್ಯವಸ್ಥೆ ಮತ್ತೆ ಮರುಕಳಿಸಬಾರದೆಂಬ ದೃಷ್ಟಿಯಿಂದ ರಾಜ್ಯದ್ಯಾಂತ ಫ್ರೂಟ್ಸ್ ಐಡಿ ಕಡ್ಡಾಯ ಮಾಡಲಾಗಿದೆ.
  ಏನಿದು ಫ್ರೂಟ್ಸ್ ಐಡಿ?: ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮಾದರಿಯಲ್ಲಿ ರೈತರಿಗೆ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲಾಗುತ್ತಿದೆ. ತಂತ್ರಾಂಶದಲ್ಲಿ ಹೆಸರು ನೋಂದಣಿಯಾದ ರೈತರಿಗೆ ಯೂನಿಕ್ ನಂಬರ್ ಇರುವ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಇದನ್ನು ಫ್ರೂಟ್ಸ್ ಐಡಿ ಎಂದು ಕರೆಯಲಾಗುತ್ತದೆ. ಇದು ರೈತರಿಗೆ ಶಾಶ್ವತವಾದ ಸಂಖ್ಯೆ. ಪ್ರಸ್ತಕ ಸಾಲಿನಲ್ಲಿ ಎನ್‌ಐಸಿ ನಿರ್ವಹಿಸುವ ಬೆಳೆ ವಿಮೆ ತಂತ್ರಾಂಶದಲ್ಲಿ ಫ್ರೂಟ್ಸ್ ಐ.ಡಿ ನೋಂದಣಿ ಸಕ್ರಿಯವಾದರೆ ಮಾತ್ರ ವಿಮಾ ಕಂತು ತುಂಬಲು ಅವಕಾಶವಿದೆ. ಇಲಾಖೆಯ ಎಲ್ಲ ಸೌಲಭ್ಯ ಪಡೆಯಲು ಫ್ರೂಟ್ಸ್ ಐ.ಡಿ ಅನಿವಾರ್ಯ. ರೈತರು ಗುರುತಿನ ಕಾರ್ಡ್ ಸಂಖ್ಯೆಯಲ್ಲಿ ತಮ್ಮ ಜಮೀನಿನ ಸರ್ವೇ ನಂಬರ್ ಸೇರ್ಪಡೆಯಾಗಿರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ಒಂದು ವೇಳೆ ಐಡಿ ಇಲ್ಲದಿದ್ದರೆ ಇಲಾಖೆಯಿಂದ ಸಬ್ಸಿಡಿ, ಬೆಂಬಲ ಬೆಲೆಯಲ್ಲಿ ಬೆಳೆ ಮಾರಾಟ ಮಾಡಲು ಹಾಗೂ ಸರ್ಕಾರ ನೀಡುವ ಸೌಲಭ್ಯಗಳಿಂದ ಕೃಷಿಕರು ವಂಚಿತರಾಗುವ ಸಾಧ್ಯತೆ ಇದೆ.
  ಬ್ಯಾಂಕ್‌ಗೆ ಅಲೆದಾಟ: ಮರು ವಿನ್ಯಾಸಗೊಂಡ ಹವಾಮಾನ ಆಧಾರಿತ ವಿಮಾ ಯೋಜನೆ ಅನುಷ್ಠಾನ 2020-21ನೇ ಸಾಲಿನಲ್ಲಿ ಮೂರು ವರ್ಷಕ್ಕೆ ಕರೆಯಲಾಗಿದ್ದು, ಟೆಂಡರ್ ಅವಧಿ 2022-23ನೇ ಆರ್ಥಿಕ ವರ್ಷಕ್ಕೆ ಮುಕ್ತಾಯಗೊಂಡಿದೆ. 2023-24ರ ಹೊಸ ಟೆಂಡರ್ ಆದ ಬಳಿಕ ಸಹಕಾರ ಸಂಘ, ಬ್ಯಾಂಕ್‌ಗಳಲ್ಲೂ ವಿಮಾ ಕಂತು ಕಟ್ಟಿಸಿಕೊಳ್ಳಲಾಗುತ್ತಿದೆ. ಈ ಹಿಂದೆ ಕೃಷಿಕರು ಸಾಲ ಪಡೆಯುವ ಸಮಯದಲ್ಲಿ ವಿಮಾ ಕಂತನ್ನು ಜೂನ್ ಕೊನೆಯಲ್ಲಿ ಪಾವತಿಸುತ್ತಿದ್ದರು. ಇದರಿಂದ ರೈತರು ಹಾಗೂ ಬ್ಯಾಂಕ್ ಸಿಬ್ಬಂದಿಗೂ ಅನುಕೂಲವಾಗುತ್ತಿತ್ತು. ಕಳೆದ ವರ್ಷ ಸಾಲ ಪಡೆದವರ, ವಿಮೆ ಕಟ್ಟಿದವರ ಫ್ರೂಟ್ಸ್ ಐಡಿ ಇದ್ದೇ ಇರುತ್ತದೆ. ಆದರೆ ಐಡಿ ನೋಂವಣಿ ಆಗಿದೆಯೇ ಎಂದು ತಿಳಿದುಕೊಳ್ಳಲು ಬ್ಯಾಂಕ್ ಅಲೆದಾಡಬೇಕಿದೆ.
  ಅಡಕೆ ಮತ್ತು ಕಾಳುಮೆಣಸು ಬೆಳೆಗೆ ವಿಮಾ ಕಂತು ಪಾವತಿಗೆ ಈ ಬಾರಿ ರೈತರ ಐಡಿ ಸಂಖ್ಯೆ ಕಡ್ಡಾಯ ಮಾಡಲಾಗಿದೆ. ಜು.31ರೊಳಗೆ ಪಾವತಿಸಬೇಕಿದೆ. ಹಾಗಾಗಿ ಬೆಳೆ ವಿಮೆ ಪಾವತಿಸಲು ಇಚ್ಛಿಸುವ ಕೃಷಿಕರು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಭೇಟಿ ನೀಡಿ ತಮ್ಮ ಐಡಿ ಸಂಖ್ಯೆ ಲಿಂಕ್ ಆಗಿರುವ ಕುರಿತು ಖಾತ್ರಿಪಡಿಸಿಕೊಳ್ಳಬೇಕು. ತಾಲೂಕಿನ ರೈತರು ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶೃಂಗೇರಿ ತಾಲೂಕು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ ತಿಳಿಸಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts