More

    ಇ-ಕೆವೈಸಿಗೆ ಸರ್ವರ್ ಕಾಟ; ಗ್ಯಾಸ್ ಏಜೆನ್ಸಿಗಳ ಮುಂದೆ ಕರಗದ ಗ್ರಾಹಕರ ಸಾಲು

    ಕೆ.ಸತೀಶ್ ಮೈದೊಳಲು ಹೊಳೆಹೊನ್ನೂರು
    ಗೃಹಪಯೋಗಿ ಗ್ಯಾಸ್ ಸಿಲಿಂಡರ್‌ಗಳ ಇ-ಕೆವೈಸಿ ಮಾಡಿಸಲು ಸರ್ವರ್ ಕಾಟ ಇನ್ನಿಲ್ಲದಂತೆ ಕಾಡುತ್ತಿದ್ದು ಸಾರ್ವಜನಿಕರು ಗ್ಯಾಸ್ ಏಜೆನ್ಸಿಗಳ ಮುಂದೆ ಬೆಳಗ್ಗಿನಿಂದ ಸಂಜೆಯವರೆಗೂ ಸರದಿ ಸಾಲಿನಲ್ಲಿ ಚಾತಕ ಪಕ್ಷಿಗಳಂತೆ ಕಾದು ಸುಸ್ತಾಗುತ್ತಿದ್ದಾರೆ. ದಾಖಲೆ ಪರಿಶೀಲನೆಗೆ ಗ್ರಾಹಕರು ದಿನವಿಡೀ ಕಾಯುವ ಪರಿಸ್ಥಿತಿ ಎದುರಾಗಿದೆ.

    ಒಂದೆಡೆ ಸರ್ವರ್ ಪದೇಪದೆ ಕೈಕೊಡುತ್ತಿದ್ದರೆ, ಮತ್ತೊಂದೆಡೆ ವಯೋವೃದ್ಧ ಗ್ರಾಹಕರ ಹೆಬ್ಬೆರಳು ಹಾಗೂ ಕಣ್ಣಿನ ಗುರುತು ಪಡೆಯುವುದು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಅಡಕೆ ಸುಲಿಗೆ ಸೇರಿದಂತೆ ಕೈ ಒರಟಾಗುವ ಕೆಲಸ ಮಾಡುವ ರೈತಾಪಿಗಳ ಕೈ ರೇಖೆಗಳು ಯಂತ್ರದಲ್ಲಿ ನಮೂದಾಗದೆ ಗಂಟೆಗಟ್ಟಲೇ ಕಾಯಬೇಕಾಗಿ ಬಂದಿದೆ. ಇ-ಕೆವೈಸಿ ಮಾಡಿಸಲು ಸರದಿಗಾಗಿ ಗ್ರಾಹಕರು ಮುಂಜಾನೆಯಿಂದಲೆ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
    ಕೆಲ ಗ್ರಾಹಕರಿಗೆ ಮಾಹಿತಿ ಕೊರತೆ ಇದ್ದು ಇ-ಕೆವೈಸಿ ಮಾಡಿಸಲು ಆಧಾರ್‌ಕಾರ್ಡ್ ಬದಲು ರೇಷನ್ ಕಾರ್ಡ್‌ಗಳನ್ನು ತಂದು ಪೇಚಿಗೆ ಸಿಲುಕುತ್ತಿದ್ದಾರೆ. ಇತ್ತೀಚೆಗೆ ಹೊಸದಾಗಿ ಸಂಪರ್ಕ ಪಡೆದವರು ಇ-ಕೆವೈಸಿ ಮಾಡಿಸುವ ಪ್ರಮೇಯ ಬರುವುದಿಲ್ಲ. ಈಗಾಗಲೆ ಕೆಲ ಕಾರ್ಡ್‌ಗಳ ಅಪ್‌ಡೇಟ್ ಮಾಡಲಾಗಿದೆ.
    ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊಳೆಹೊನ್ನೂರಿನ ಇಂಡಿಯನ್ ಗ್ಯಾಸ್ ಕಚೇರಿ ಮುಂಭಾಗ ಕಿಮೀಗಟ್ಟಲೇ ಜನ ಹೆದ್ದಾರಿ ಪಕ್ಕ ಬಂದು ನಿಲ್ಲುತ್ತಿದ್ದಾರೆ. ವಾಹನ ದಟ್ಟಣೆ ಹೆಚ್ಚಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಇ-ಕೆವೈಸಿಗೆ ಈ ತಿಂಗಳು ಗಡುವು ಮುಗಿಯುತ್ತಿದೆ ಎನ್ನಲಾಗುತ್ತಿರುವುದರಿಂದ ಗ್ಯಾಸ್ ಕಚೇರಿಗೆ ಜನ ಒಂದೇ ಬಾರಿಗೆ ಮುಗ್ಗಿಬಿದ್ದಿರುವ ಕಾರಣ ಹೊಳೆಹೊನ್ನೂರು ಇಂಡಿಯನ್ ಗ್ಯಾಸ್ ಕಚೇರಿ ಮುಂಭಾಗ ಜನಜಂಗುಳಿ ಹೆಚ್ಚಾಗುತ್ತಿದೆ.
    ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ತಿಂದಿತ್ತ ಸಂಚರಿಸುವ ಜನರಿಂದ ವಾಹನ ಸವಾರರಿಗೆ ಕಿರಿಕಿರಿಯುಂಟಾಗುತ್ತಿದೆ. ಗ್ಯಾಸ್ ಕಚೇರಿಯಿಂದ ಅಂತರಘಟ್ಟಮ್ಮ ದೇವಾಲಯ ದ್ವಾರ ಬಾಗಿಲಿನವರೆಗೂ ಸಾಲು ಬೆಳೆಯುತ್ತದೆ. ಬೆಳಗ್ಗಿನಿಂದ ಸಂಜೆಯವರೆಗೂ ಜನ ಸರದಿಯಲ್ಲಿ ನಿಂತು ಇ-ಕೆವೈಸಿ ಮಾಡಿಸಲು ಮುಗಿ ಬೀಳುತ್ತಿದ್ದಾರೆ.
    ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಹಣ ಸಿಗುವುದಿಲ್ಲ ಎಂಬ ತಪ್ಪು ಮಾಹಿತಿಯಿಂದಾಗಿ ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಬೆರಳಚ್ಚು ನೀಡಲು ಸಾಧ್ಯವಾಗದ ಕೆಲ ಗ್ರಾಹಕರು ಎರಡ್ಮೂರು ದಿನಗಳಿಂದ ಚಳಿ-ಬಿಸಿಲೆನ್ನದೆ ಅಲೆದಾಡುತ್ತಿದ್ದಾರೆ. ಮಾಲೀಕರು ಸಿಬ್ಬಂದಿಯನ್ನು ತಂಡಗಳಾಗಿ ಮಾಡಿ ಏಜೆನ್ಸಿ ವ್ಯಾಪ್ತಿಯ ಹಳ್ಳಿಗಳಿಗೆ ಕಳುಹಿಸಿದರೆ ಸಮಸ್ಯೆ ಉದ್ಭವಿಸುತ್ತಿರಲ್ಲಿಲ್ಲ. ಜನ ಕೆಲಸ ಬಿಟ್ಟು ಇ-ಕೆವೈಸಿಗಾಗಿ ಕಾಯುವುದು ತಪ್ಪುತ್ತಿತ್ತು ಎನ್ನುತ್ತಾರೆ ಸ್ಥಳೀಯ ಗ್ರಾಹಕ ನಾಗರಾಜ್.

    ಗಡಿಬಿಡಿ ಮಾಡುವುದು ಬೇಡ
    ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿರುವುದಿಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದಾಗಿದ್ದು,ಸಾರ್ವಜನಿಕರು ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಆರ್.ಅವಿನ್ ತಿಳಿಸಿದ್ದಾರೆ. ಆದ್ದರಿಂದ ಅನವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಜತೆಗೆ ಸಿಲಿಂಡರ್‌ನ್ನು ಮನೆಗೆ ಡೆಲಿವರಿ ಪಡೆಯುವ ವೇಳೆಯಲ್ಲಿ ಕೂಡ ಇ-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ. ಅಲ್ಲದೇ ಹೆಲೋ ಬಿಪಿಸಿಎಲ್, ಇಂಡಿಯನ್ ಆಯಿಲ್ ಒನ್ ಮತ್ತು ವಿಟ್ರನ್ ಎಚ್‌ಪಿ ಗ್ಯಾಸ್ ಈ ಮೊಬೈಲ್ ಆ್ಯಪ್‌ಗಳ ಮೂಲಕ ಇ-ಕೆವೈಸಿ ಮಾಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts