More

    ವಿದೇಶಿ ವ್ಯಾಮೋಹ ಬಿಡಿ, ಸ್ವದೇಶದಲ್ಲೇ ಸೇವೆ ಮಾಡಿ

    ಯಲ್ಲಾಪುರ: ಎಷ್ಟೇ ಉನ್ನತ ಶಿಕ್ಷಣ ಪಡೆದರೂ ವಿದೇಶಕ್ಕೆ ಹೋಗಿ ನೆಲೆಸಬೇಡಿ. ನಮ್ಮ ಕೆಲಸ, ಸೇವೆ ಏನೇ ಇದ್ದರೂ ಅದು ನಮ್ಮ ದೇಶಕ್ಕೆ ಬಳಕೆಯಾಗುವಂತಾಗಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ 2023-24ನೇ ಸಾಲಿನ ‘ಕಲಿಕಾ ಪ್ರಾರಂಭೋತ್ಸವ’ ಉದ್ಘಾಟಿಸಿ, ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರ‌್ಯಾಂಕ್ ಗಳಿಕೆಯೊಂದೇ ಸಾಧನೆಯಲ್ಲ. ನಾನು ಕೂಡ ಹಿಂದಿನ ಬೆಂಚ್ ವಿದ್ಯಾರ್ಥಿ. ಎಸ್ಸೆಸ್ಸೆಲ್ಸಿ ಫೇಲ್ ಆಗಿ, ನಂತರ ಮತ್ತೆ ಪ್ರಯತ್ನಿಸಿ ಉತ್ತೀರ್ಣನಾಗಿ ಬಿ.ಕಾಂ. ಓದಿದೆ. ದೈವ ಭಕ್ತಿ, ಶ್ರದ್ಧೆ, ಎಲ್ಲ ಕೆಲಸಗಳನ್ನು ಮಾಡುವ ಉತ್ಸಾಹ, ಆಸಕ್ತಿ, ಶ್ರಮ ನನ್ನ ಸಾಧನೆಗೆ ಕಾರಣವಾಯಿತು. ಕೇವಲ ಪುಸ್ತಕದ ಹುಳುವಾದರೆ ಯಶಸ್ವಿಯಾಗಲು ಸಾಧ್ಯವಿಲ್ಲ. ದೊಡ್ಡದು, ಸಣ್ಣದು ಎಂಬ ಬೇಸರ ಮಾಡದೇ ಎಲ್ಲ ಕೆಲಸಗಳನ್ನು ಕಲಿಯುವ ಮನಸ್ಥಿತಿ ನಮ್ಮದಾಗಬೇಕು ಎಂದರು.

    ಪಾಲಕರು ಮಕ್ಕಳ ಮೇಲೆ ಅತಿಯಾದ ನಿಯಂತ್ರಣ ಹೇರಬಾರದು. ಪಠ್ಯದೊಂದಿಗೆ ಆಟ, ಇತರ ಚಟುವಟಿಕೆಯಲ್ಲಿ ತೊಡಗಲು ಅವಕಾಶ ನೀಡಬೇಕು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದರು.

    58 ವರ್ಷಗಳಿಂದ ರಜೆ ಇಲ್ಲದೇ ದುಡಿಯುತ್ತಿದ್ದೇನೆ. ಜೀವನದ ಪ್ರತಿ ಕ್ಷಣವೂ ಅಮೂಲ್ಯ. ಸಮಯ ಪೋಲು ಮಾಡಬಾರದು. ಜೀವನದ ಕೊನೆಯ ಕ್ಷಣದವರೆಗೂ ಕಾಯಕದಲ್ಲಿ ತೊಡಗಿರಬೇಕು ಎಂಬುದು ನನ್ನ ಸಂಕಲ್ಪ ಎಂದು ಹೇಳಿದರು.

    ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಬಿ. ಗುಡಸಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ವಿಫಲವಾಗದಂತೆ ನೋಡಿಕೊಳ್ಳುವ ಹೊಣೆ ಶಿಕ್ಷಕರ ಮೇಲಿದೆ ಎಂದರು.

    ಬೈಂದೂರು ಶಾಸಕ ಹಾಗೂ ಸಂಸ್ಥೆಯ ನಿರ್ದೇಶಕ ಗುರುರಾಜ ಗಂಟಿಹೊಳೆ ಮಾತನಾಡಿ, ತಾಲೂಕಿನಲ್ಲಿ ವಿಶ್ವದರ್ಶನ ಹೊಸತನಕ್ಕೆ ಹೆಸರಾಗಿದೆ. ಉತ್ತಮ ಸಮಾಜ ನಿರ್ಮಾಣದ ಉದ್ದೇಶದಿಂದ ಸಂಸ್ಥೆ ನಡೆಯುತ್ತಿದೆ ಎಂದರು.

    ಸಂಸ್ಥೆಯ ಅಧ್ಯಕ್ಷ, ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಈ ಬಾರಿ ಸಂಸ್ಥೆಯಲ್ಲಿ ಬಿಸಿಎ ಹಾಗೂ ಪತ್ರಿಕೋದ್ಯಮ ಶಿಕ್ಷಣ ಆರಂಭಿಸಲಿದ್ದೇವೆ. 600 ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಹಾಸ್ಟೆಲ್ ನಿರ್ಮಿಸುತ್ತಿದ್ದೇವೆ. ರ‌್ಯಾಂಕ್ ಗಳಿಕೆಗಿಂತ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವುದು ನಮ್ಮ ಉದ್ದೇಶ’ ಎಂದರು.

    ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಇದ್ದರು. ಹರ್ಷಿತಾ ಪ್ರಾರ್ಥಿಸಿದರು. ಡಾ. ಡಿ.ಕೆ. ಗಾಂವ್ಕರ, ಆಸ್ಮಾ ಶೇಖ್, ಮಹಾದೇವಿ ಭಟ್ ನಿರ್ವಹಿಸಿದರು.

    ನಮಗೆ ನಾವೇ ಸ್ಫೂರ್ತಿ

    ಡಾ. ವಿಜಯ ಸಂಕೇಶ್ವರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಜೀವನದಲ್ಲಿ ಇನ್ನೊಬ್ಬರಂತೆ ನಾವಾಗಬೇಕು ಎಂದು ಮುನ್ನಡೆದರೆ ನಾವು ಕೇವಲ ಕಾರ್ಬನ್ ಕಾಪಿ ಆಗಬಹುದಷ್ಟೇ. ನಮಗೆ ನಾವೇ ಸ್ಫೂರ್ತಿಯಾಗಬೇಕು. ನಮಗೆ ನಾವೇ ಗುರುವಾಗಬೇಕು. ನಾನು ಸಾರಿಗೆ ಉದ್ಯಮ ಆರಂಭಿಸುವಾಗ ನನ್ನ ಸಂಸ್ಥೆ ದೇಶದ ಅತಿ ಸಣ್ಣ ಸಂಸ್ಥೆಯಾಗಿತ್ತು. ಬೇರೆ ಸಂಸ್ಥೆಗಳನ್ನು ಮಾದರಿ ಎಂದುಕೊಳ್ಳದೇ, ನನ್ನದೇ ಆದ ದಾರಿಯಲ್ಲಿ ಸಾಗಿದೆ. ಇಂದು ನಮ್ಮ ಸಂಸ್ಥೆ ದೇಶದ ಅತಿದೊಡ್ಡ ಸಾರಿಗೆ ಸಂಸ್ಥೆಯಾಗಿ ಬೆಳೆದು ನಿಂತಿದೆ. ಗುಣಮಟ್ಟ ಹಾಗೂ ವಿಭಿನ್ನ ಪತ್ರಿಕೋದ್ಯಮವನ್ನು ನಾವು ಆರಂಭಿಸಿದ ಮೇಲೆ, ಇತರ ಪತ್ರಿಕೆಗಳೂ ಗುಣಮಟ್ಟ ಹೆಚ್ಚಿಸಿಕೊಳ್ಳಲು ಕಾರಣವಾಯಿತು ಎಂದರು.

    ಸಾರಿಗೆ, ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ

    ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಲಾಭದ ಉದ್ದೇಶಕ್ಕಾಗಿ ಅಲ್ಲದೇ, ಬದುಕಿನ ಸಾರ್ಥಕತೆಗಾಗಿ ಉದ್ಯಮ ನಡೆಸಿ ಮಾದರಿಯಾದವರು ಡಾ. ವಿಜಯ ಸಂಕೇಶ್ವರ. ಛಲ, ಆತ್ಮವಿಶ್ವಾಸದಿಂದ ಪ್ರವಾಹದ ವಿರುದ್ಧ ಈಜಿ ಸಾಧಕರಾದವರು. ಸಾವಿರಾರು ಕುಟುಂಬಗಳಿಗೆ, ಅನ್ನ, ಆಶ್ರಯ ನೀಡಿದ್ದಾರೆ. ಸಂಸ್ಕೃತಿಯ ಉಳಿವು, ದೇಶ ಕಟ್ಟುವ ಆದರ್ಶಗಳನ್ನು ಇಟ್ಟುಕೊಂಡು ಸಾರಿಗೆ, ಮಾಧ್ಯಮ ಕ್ಷೇತ್ರಗಳಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಪತ್ರಿಕೋದ್ಯಮಕ್ಕೆ ಗೌರವ ಬರುವಂತಹ ಕಾರ್ಯ ಡಾ. ಸಂಕೇಶ್ವರ ಅವರಿಂದಾಗಿದೆ. ನನ್ನಂತಹ ಅನೇಕ ಪತ್ರಕರ್ತರು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಶಿಸ್ತು, ಪ್ರಾಮಾಣಿಕತೆ, ನಿರ್ದಿಷ್ಟ ಗುರಿಯೊಂದಿಗೆ ಶ್ರಮಪಟ್ಟರೆ ಸಾಧಕರಾಗಲು ಸಾಧ್ಯ ಎಂಬುದಕ್ಕೆ ಡಾ. ವಿಜಯ ಸಂಕೇಶ್ವರ ಅವರ ಬದುಕು, ಸಾಧನೆ ನಿದರ್ಶನವಾಗಿದೆ. ಅವರ ಸಾಧನೆಯ ಪ್ರೇರಣೆಯಿಂದ ಡಾ. ವಿಜಯ ಸಂಕೇಶ್ವರ ಪತ್ರಿಕೋದ್ಯಮ ವಿಭಾಗ ಆರಂಭಿಸುತ್ತಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts