More

    ನಗರದಲ್ಲಿ ಪ್ರತಿಭಟನೆಗಳ ಸರಣಿ

    ಮೈಸೂರು: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಗಳ ಶುಕ್ರವಾರ ಪ್ರತಿಭಟನೆಗಳಿಂದ ಗಿಜಿಗುಡುಗುತ್ತಿತ್ತು. ವಿರಳ ಜನರ ಓಡಾಟದಿಂದಾಗಿ ಪ್ರಶಾಂತವಾಗಿರುತ್ತಿದ್ದ ಡಿಸಿ ಕಚೇರಿಯ ಎಡಭಾಗದ ರಸ್ತೆಯಲ್ಲಿ ಘೋಷಣೆಗಳು, ಆಕ್ರೋಶ ಮೊಳಗಿತು. ಹೀಗಾಗಿ, ಮಾಗಿ ಚಳಿಯಲ್ಲೂ ಹರತಾಳದ ಬಿಸಿ ಜೋರಾಗಿತ್ತು.
    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 5 ಪ್ರತಿಭಟನೆಗಳು ಪ್ರತ್ಯೇಕವಾಗಿ ನಡೆದವು. ಈ ಪೈಕಿ ನಾಲ್ಕು ಡಿಸಿ ಕಚೇರಿ ಬಳಿಯೇ ಜರುಗಿದವು.

    ಸರ್ಕಾರದ ವಿರುದ್ಧ ಬುಡಕಟ್ಟು ಸಮುದಾಯದ ಆಕ್ರೋಶ: ಆದಿವಾಸಿ ಕುಟುಂಬಗಳಿಗೆ ತಕ್ಷಣವೇ ಪಡಿತರ ಸಾಮಗ್ರಿ ವಿತರಣೆಗೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ನೇತೃತ್ವದಲ್ಲಿ ಬುಡಕಟ್ಟು ಸಮುದಾಯದವರು ಪ್ರತಿಭಟನೆ ನಡೆಸಿದರು.

    ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ರ‌್ಯಾಲಿ ಡಿಸಿ ಕಚೇರಿ ಬಳಿ ಸಮಾವೇಶಗೊಂಡಿತು. ಆದಿವಾಸಿ ಕುಟುಂಬಗಳ ಅಪೌಷ್ಟಿಕತೆ ನಿವಾರಣೆಗಾಗಿ ಸಮಗ್ರ ಆದಿವಾಸಿ ಅಭಿವೃದ್ಧಿ ಯೋಜನೆ (ಐಟಿಡಿಪಿ) ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ವರ್ಷದಲ್ಲಿ 6 ತಿಂಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಇವರಿಗೆ ಹೆಚ್ಚುವರಿ ಆಹಾರ ಧ್ಯಾನಗಳು ಮತ್ತು ಆಹಾರ ಪದಾರ್ಥ ನೀಡಲಾಗುತ್ತಿತ್ತು. ಆದರೆ, 4 ತಿಂಗಳಿಂದ ಟೆಂಡರ್ ಸಮಸ್ಯೆಯಿಂದಾಗಿ ಈ ಸಾಮಗ್ರಿಯನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆದಿವಾಸಿ ಕುಟುಂಬಗಳು ಪ್ರತ್ಯೇಕಗೊಂಡರೂ ಅವರಿಗೆ ಪಡಿತರ ನೀಡುತ್ತಿಲ್ಲ. ಕೇರಳ, ಕೊಡಗಿನಲ್ಲಿ ಎರಡು ವರ್ಷದಿಂದ ಸುರಿದ ವಿಪರೀತ ಮಳೆಯಿಂದ ಈ ಸಲ ಇಲ್ಲಿ ಕಾಫಿ ಕೊಯ್ಲಿನ ಕೂಲಿಯ ಅವಶ್ಯಕತೆಯೂ ಕಡಿಮೆಯಾಗಿದೆ. ಒಂದೆಡೆ ಕೆಲಸವೂ ಇಲ್ಲ, ಇನ್ನೊಂದೆಡೆ, ಪಡಿತರ ಸಾಮಗ್ರಿಯನ್ನೂ ನೀಡುತ್ತಿಲ್ಲ. ಇದರಿಂದ ಆದಿವಾಸಿ ಜನತೆ ಕಂಗಾಲಾಗಿದ್ದಾರೆ. ಇವರ ಬದುಕು ಅತಂತ್ರವಾಗಿದೆ. ಅನಗತ್ಯವಾಗಿ ಕೋಟ್ಯಂತರ ರೂ. ಖರ್ಚು ಮಾಡುವ ಸರ್ಕಾರ ಅರಣ್ಯವಾಸಿಗಳಿಗೆ ಆಹಾರ ಸಾಮಗ್ರಿ ಕಡಿತಗೊಳಿಸಿರುವುದು ಅಮಾನವೀಯ ಎಂದು ದೂರಿದರು.
    ಆದಿವಾಸಿಗಳಿಗೆ ಪಡಿತರ ವ್ಯವಸ್ಥೆಯ ಮೂಲಕ ಹಿಂದಿನಂತೆ ಹೆಚ್ಚುವರಿ ಆಹಾರ ಸಾಮಗ್ರಿ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಡಿಸಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆಗೆ ತೆರೆ ಎಳೆಯಲಾಯಿತು. ಸಂಘಟನೆ ಮುಖಂಡರಾದ ಬಿ.ರವಿ, ಎಂ.ಉಮಾದೇವಿ, ಚಂದ್ರಶೇಖರ್ ಮೇಟಿ, ಸುನಿಲ್, ಯಶೋಧಾ, ಸುಮಾ, ಆದಿವಾಸಿಗಳಾದ ಶಿವಮ್ಮ, ರೇವಮ್ಮ, ರೋಜಮ್ಮ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

    ನಿವೇಶನಕ್ಕಾಗಿ ಆಗ್ರಹ: ನಿವೇಶನ ನೀಡದೆ ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘ ವಂಚಿಸಿದೆ ಎಂದು ಆರೋಪಿಸಿ ನಿವೇಶನದಾರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ನಿವೇಶನ ವಂಚಿತರ ಹಿತರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾಕಾರರು, ಮೋಸ ಮಾಡಿರುವ ಸಂಘದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಕಲ್ಪಿಸಬೇಕು ಎಂದು ಘೋಷಣೆ ಕೂಗಿದರು.
    ಬನ್ನೂರು ರಸ್ತೆಯ ಎಚ್.ಡಿ.ದೇವೇಗೌಡ ವೃತ್ತದ ಬಳಿ ನಿವೇಶನ ನೀಡುವುದಾಗಿ ನಂಬಿಸಿ ಅಂದಾಜು 1200 ಸದಸ್ಯರಿಂದ ಸುಮಾರು 80 ಕೋಟಿ ರೂ. ಹಣ ಸಂಗ್ರಹಿಸಿ 8 ವರ್ಷವಾಗಿದೆ. ಈವರೆಗೂ ಒಬ್ಬರಿಗೂ ನಿವೇಶನ ನೀಡಿಲ್ಲ. ನಿರ್ದೇಶಕರ ಹುದ್ದೆಗಳಿಗೆ ಕ್ರಮಬದ್ಧವಾಗಿ ಚುನಾವಣೆ ನಡೆಸಿಲ್ಲ. ಆಡಿಟ್ ಮಾಡಿ ಲೆಕ್ಕಪತ್ರವನ್ನು ನೀಡಿಲ್ಲ. ವಾರ್ಷಿಕ ಸಭೆಯನ್ನೂ ಸರಿಯಾಗಿ ನಡೆಸಿಲ್ಲ. ದುಂಬಾಲು ಬಿದ್ದರೂ ಸದಸ್ಯರಿಗೆ ಹಣವನ್ನೂ ವಾಪಸ್ ನೀಡುತ್ತಿಲ್ಲ ಎಂದು ಆರೋಪಿಸಿದರು.

    ಅಲ್ಲದೆ, ಚೆಕ್ ಬೌನ್ಸ್ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿವೆ. ಸಂಘದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಬೇರೆ ಕಡೆಗೆ ಹೂಡಿಕೆ ಮಾಡಿದ್ದಾರೆ. ಇಷ್ಟೆಲ್ಲ ವಿಷಯ ತಿಳಿದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಆಕ್ಷೇಪಿಸಿದರು.
    ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಸರ್ಕಾರದಿಂದ ಆಡಳಿತಾಧಿಕಾರಿ ನೇಮಿಸಬೇಕು. ನಿವೇಶನ ಹಂಚಿಕೆ ಮಾಡಬೇಕು. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಡಿಸಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು. ಸಂಘದ ಮುಖಂಡರಾದ ಆಲೂರು ಬಸವರಾಜು, ರುದ್ರಪ್ಪ, ಮಂಜುನಾಥ್, ಮಹೇಶ್ ಬಸಪ್ಪ, ಕಲಾವತಿ, ಪ್ರಕಾಶ್, ಅರುಣ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts