More

    ಧಾರಾವಾಹಿಗಳು ಮುಂದುವರಿಯಲಿವೆ; ತಿಂಗಳಿಂದ ನಿಂತಿದ್ದ ಚಿತ್ರೀಕರಣ ಮತ್ತೆ ಶುರು

    ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಕನ್ನಡ ಸೀರಿಯಲ್​ಗಳ ಚಿತ್ರೀಕರಣವೀಗ ಮತ್ತೆ ಆರಂಭವಾಗಿದೆ. ಬಂದ್ ಆಗಿದ್ದ ಕ್ಯಾಮರಾ ಮತ್ತೆ ಆನ್ ಆಗಿದೆ. ಹಾಗಾಗಿ, ನಿಧಾನಗತಿಯಲ್ಲಿ ಸಾಗುತ್ತಿದ್ದ ಸಂಚಿಕೆಗಳು ಇನ್ನೇನು ಸೋಮವಾರದಿಂದ ಮುಂಚಿನ ವೇಗ ಪಡೆದುಕೊಳ್ಳಲಿವೆ!

    ಕರ್ನಾಟಕದಲ್ಲಿ ಲಾಕ್​ಡೌನ್ ಜಾರಿಯಲ್ಲಿರುವಾಗ ಶೂಟಿಂಗ್ ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಕರ್ನಾಟಕದಲ್ಲಿ ಅನುಮತಿ ಇಲ್ಲದಿದ್ದರೂ, ಪಕ್ಕದ ಹೈದರಾಬಾದ್​ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರುವುದರಿಂದ ಕನ್ನಡದ ಮನರಂಜನಾ ವಾಹಿನಿಗಳ ಕೆಲವು ಜನಪ್ರಿಯ ಧಾರಾವಾಹಿಗಳ ತಂಡಗಳು ಹೈದರಾಬಾದ್​ನಲ್ಲಿ ಬಿಡಾರ ಹೂಡಿವೆ. ಕಳೆದೊಂದು ವಾರದಿಂದ ಸದ್ದಿಲ್ಲದೆ ಶೂಟಿಂಗ್​ನಲ್ಲಿಯೂ ತೊಡಗಿಸಿಕೊಂಡಿವೆ. ‘ನನ್ನರಸಿ ರಾಧೆ’, ‘ಜೊತೆ ಜೊತೆಯಲಿ’, ‘ಕನ್ನಡತಿ’, ‘ನಮ್ಮನೆ ಯುವರಾಣಿ’, ‘ಸತ್ಯ’ ಹೀಗೆ ಇನ್ನೂ ಹಲವು ಧಾರಾವಾಹಿಗಳು ಶೂಟಿಂಗ್ ಸದ್ದಿಲ್ಲದೆ ನಡೆಯುತ್ತಿದೆ.

    ಇನ್ನೂ ಕೆಲವು ತಂಡಗಳು ಶೀಘ್ರದಲ್ಲೇ ಹೈದರಾಬಾದ್​ನ ವಿಮಾನ ಏರಲಿವೆ. ಕಲರ್ಸ್ ಕನ್ನಡದ ‘ಕನ್ನಡತಿ’ ಸೀರಿಯಲ್ ನಾಯಕಿ ರಂಜನಿ ರಾಘವನ್ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ‘ಮುಂದಿನ 10 ದಿನಗಳ ಕಾಲ ಹೈದರಾಬಾದ್​ನಲ್ಲಿ ಶೂಟಿಂಗ್ ನಡೆಯಲಿದೆ. ಚಿತ್ರೀಕರಣಕ್ಕೆ ಅವಶ್ಯಕವಿರುವ ಕಲಾವಿದರಷ್ಟೇ ಇಲ್ಲಿಗೆ ಬಂದಿದ್ದೇವೆ.

    ನಮ್ಮ ವಾಹಿನಿಯ ಬೇರೆಬೇರೆ ಧಾರಾವಾಹಿ ತಂಡಗಳು ಸಹ ಇಲ್ಲಿವೆ. ಎಲ್ಲರೂ ಪ್ರತ್ಯೇಕವಾಗಿ ಚಿತ್ರೀಕರಿಸುತ್ತಿದ್ದಾರೆ. ಬೆಂಗಳೂರು ಸಹಜ ಸ್ಥಿತಿಗೆ ಬಂದ ಬಳಿಕವಷ್ಟೇ ಅಲ್ಲಿ ಚಿತ್ರೀಕರಣ ಮುಂದುವರೆಯಲಿದೆ’ ಎಂಬುದು ಅವರ ಮಾತು. ಈ ಬಗ್ಗೆ ಮಾಹಿತಿ ನೀಡುವ ‘ಜೊತೆ ಜೊತೆಯಲಿ’ ಖ್ಯಾತಿಯ ಅನಿರುದ್ಧ, ‘ಬೆಂಗಳೂರಿನಲ್ಲಿ ಶೂಟ್ ಮಾಡಿದ್ದ ಎಪಿಸೋಡ್​ಗಳ ಬ್ಯಾಂಕಿಂಗ್ ಬಹುತೇಕ ಮುಗಿಯುತ್ತಾ ಬಂದಿರುವುದರಿಂದ, ನಾವು ಹೈದರಾಬಾದ್​ಗೆ ಬಂದಿದ್ದೇವೆ. ಇಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರುವುದರಿಂದ, ಇಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ನಾನು ಮತ್ತು ಧಾರಾವಾಹಿ ನಾಯಕಿ ಮೇಘ ಶೆಟ್ಟಿ ಇಬ್ಬರಷ್ಟೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇವೆ. ಸೀಮಿತ ಜನರನ್ನಿಟ್ಟುಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts