More

    ರಂಗೇರುತ್ತಿದೆ ಡಿಸಿಸಿಬಿ ಚುನಾವಣೆ

    ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ನ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಸೆ.29ರಂದು ಚುನಾವಣೆ ನಿಗದಿಯಾಗಿದೆ. ಒಂದೆಡೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮುಖಂಡರು ಡಿಸಿಸಿ ಬ್ಯಾಂಕ್ ಅನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಹವಣಿಸುತ್ತಿದ್ದರೆ, ಇನ್ನೊಂದೆಡೆ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿರುವ ಜೆಡಿಎಸ್ ಹಾಗೂ ಕಾಂಗ್ರೆಸ್​ಗೂ ಪ್ರತಿಷ್ಠೆಯಾಗಿ ಪರಿಣಮಿಸಿದೆ.

    ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಕಾರಣಕ್ಕೆ ಕಳೆದ ಬಾರಿ ಅತೀ ಹೆಚ್ಚು 7 ಸ್ಥಾನಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಬೆಂಬಲಿತರು ಜೆಡಿಎಸ್​ನ ಎಸ್.ಎಲ್.ಧಮೇಗೌಡ ಅವರನ್ನು ಬೆಂಬಲಿಸಿತ್ತು. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ದಿನೇಶ್ ಹೆಗ್ಡೆ ಆಯ್ಕೆಯಾಗಿದ್ದರು.

    ತೀವ್ರ ಹಣಾಹಣಿಯ ಕಣ: ಜೆಡಿಎಸ್ ಬೆಂಬಲಿತರು ಅಧಿಕಾರ ಹಿಡಿಯಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದರೆ, ಕಾಂಗ್ರೆಸ್​ನಲ್ಲಿ ಚುನಾವಣೆಗೆ ಸಂಬಂಧಿಸಿ ಚಟುವಟಿಕೆಗಳೇ ನಡೆಯುತ್ತಿಲ್ಲ. 13 ನಿರ್ದೇಶಕರ ಚುನಾವಣೆಗೆ ಸಂಬಂಧಿಸಿ ಈಗಾಗಲೇ ಬೆಂಬಲಿತರ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಅತೃಪ್ತರ ಮನವೊಲಿಸಲು ಬಿಜೆಪಿ ಹಾಗೂ ಜೆಡಿಎಸ್ ಸಾಕಷ್ಟು ಪ್ರಯತ್ನ ನಡೆಸುತ್ತಿವೆ.

    ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲ ರಣತಂತ್ರ ನಡೆಸುತ್ತಿದ್ದರೆ. ಇತ್ತ ಜೆಡಿಎಸ್ ಸಹ ಪ್ರತಿತಂತ್ರ ರೂಪಿಸುತ್ತಿದೆ. ಹೋರಾಟದ ಕಣ ರಂಗೇರುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಅನಾಯಾಸ ಗೆಲುವು ನಿರೀಕ್ಷಿಸಿರುವ ಜೆಡಿಎಸ್​ನ ಎಸ್.ಎಲ್.ಧಮೇಗೌಡ ಹಾಗೂ ಎಸ್.ಎಲ್.ಬೋಜೇಗೌಡ ಸಹೋದರರಿಗೆ ಬಿಜೆಪಿ ಒಡ್ಡಿರುವ ಪ್ರಬಲ ಸ್ಪರ್ಧೆ ಸವಾಲಾಗಿ ಪರಿಣಮಿಸಿದೆ.

    ಸಂಘದ ಸದಸ್ಯನ ಅಪಹರಣ?: ಆಲ್ದೂರು ಸಹಕಾರ ಸಂಘದ ಸದಸ್ಯರೊಬ್ಬರು ಬಿಜೆಪಿ ಕಡೆ ಒಲವು ಹೊಂದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಜೆಡಿಎಸ್​ನ ಕೆಲವರು ಅವರನ್ನು ರಾತ್ರೋರಾತ್ರಿ ಅಪಹರಿಸಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಅಲ್ಲದೆ ಕೊಪ್ಪ ತಾಲೂಕು ಹಾಲ್ಮತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿ ಆಯ್ಕೆ ನಿರ್ಣಯ ಪ್ರತಿಯನ್ನು ಚುನಾವಣಾಧಿಕಾರಿಗೆ ಸಲ್ಲಿಸಲು ಬಂದಾಗ ಬಿಜೆಪಿ ಕಾರ್ಯಕರ್ತರು ಡಿಸಿಸಿ ಬ್ಯಾಂಕ್ ದ್ವಾರದಲ್ಲೇ ತಡೆದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ವಾಗ್ಯುದ್ಧವೇ ನಡೆದಿತ್ತು.

    247 ಸಂಘದ ಪ್ರತಿನಿಧಿಗಳಿಗೆ ಮತದಾನದ ಅವಕಾಶ: ಚುನಾವಣೆಯಲ್ಲಿ ಒಟ್ಟು 449 ಸಹಕಾರ ಸಂಘಗಳಲ್ಲಿ 247 ಸಂಘದ ಪ್ರತಿನಿಧಿಗಳಿಗೆ ಮಾತ್ರ ಮತ ಚಲಾಯಿಸುವ ಅಧಿಕಾರ ಲಭ್ಯವಿದೆ. ಉಳಿದ ಸಂಘಗಳಲ್ಲಿ ಸುಸ್ತಿದಾರರಾಗಿರುವ ಕಾರಣ ಹಾಗೂ ಸತತ ಮೂರು ವಾರ್ಷಿಕ ಮಹಾಸಭೆಗಳಿಗೆ ಹಾಜರಾಗದ ಹಿನ್ನೆಲೆಯಲ್ಲಿ ಹಲವು ಸಂಘಗಳು ಚುನಾವಣೆಯಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿವೆ. ಈ ನಡುವೆ ಕೆಲವು ಸಂಘಗಳು ನ್ಯಾಯಾಲಯದ ಮೊರೆ ಹೋಗಿದ್ದು, ಇನ್ನು ಕೆಲವು ಸಂಘಗಳಿಗೆ ಮತ ಚಲಾಯಿಸುವ ಅಧಿಕಾರ ಕೊನೇ ಕ್ಷಣದಲ್ಲಿ ಲಭ್ಯವಾದರೂ ಅಚ್ಚರಿ ಇಲ್ಲ.

    ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಸಹಕಾರ ಸಂಘದಿಂದ ತಲಾ ಇಬ್ಬರು, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಮೂಡಿಗೆರೆಯಿಂದ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಜತೆಗೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಇಬ್ಬರು, ಇತರ ಸಹಕಾರ ಸಂಘಗಳಿಂದ ಒಬ್ಬರು ಪ್ರತಿನಿಧಿಗಳು ಆಯ್ಕೆಗೊಂಡಿದ್ದಾರೆ. ಇನ್ನಿಬ್ಬರು ಸರ್ಕಾರದಿಂದ ನೇಮಕಗೊಂಡ ಉಪ ನಿಬಂಧಕರು ಹಾಗೂ ಅಪೆಕ್ಸ್ ಬ್ಯಾಂಕ್​ನ ಪ್ರತಿನಿಧಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. ಆದರೆ ಮತದಾನದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ.

    ಈ ಬಾರಿ ಗೆಲುವು ಯಾರಿಗೆ?: ತರೀಕೆರೆ ತಾಲೂಕಿನ 25 ಸಹಕಾರ ಸಂಘಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಘಗಳ ಪ್ರತಿನಿಧಿಗಳು ಕ್ಷೇತ್ರದ ಶಾಸಕರ ಜತೆ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಜೆಡಿಎಸ್ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಕಡೂರು ತಾಲೂಕಿನ 31 ಸಂಘಗಳಲ್ಲಿ ಅನೇಕ ಪ್ರತಿನಿಧಿಗಳು ಶಾಸಕರ ಜತೆಗಿದ್ದಾರೆ ಎಂದು ಒಂದು ಗುಂಪು ಹೇಳಿಕೊಳ್ಳುತ್ತಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ಹೆಚ್ಚು ಪ್ರತಿನಿಧಿಗಳ ಬೆಂಬಲ ಪಡೆಯಲಿದೆ ಎಂದು ಇನ್ನೊಂದು ಗುಂಪು ಹೇಳಿಕೊಳ್ಳುತ್ತಿದೆ.

    ಮೂಡಿಗೆರೆ ತಾಲೂಕಿನಲ್ಲಿ 14 ಪ್ರತಿನಿಧಿಗಳಲ್ಲಿ ಹೆಚ್ಚು ಮಂದಿ ತಮ್ಮ ಕಡೆಗಿದ್ದಾರೆ ಎಂದು ಬಿಜೆಪಿ ವಿಶ್ವಾಸದಲ್ಲಿದ್ದರೆ, ಉಳಿದವರು ಜೆಡಿಎಸ್, ಕಾಂಗ್ರೆಸ್ ಜತೆಗಿದ್ದಾರೆನ್ನಲಾಗಿದೆ. ಎನ್.ಆರ್.ಪುರದಲ್ಲಿ ಸಹ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಹೇಳಲಾಗುತ್ತಿದೆ.

    ಕೊಪ್ಪದಲ್ಲಿ 12 ಸ್ಥಾನಗಳ ಪೈಕಿ ಬಿಜೆಪಿ ಪರವಾಗಿ 6 ಹಾಗೂ ಕಾಂಗ್ರೆಸ್, ಜೆಡಿಎಸ್ ಪರವಾಗಿ 6 ಮಂದಿ ಗುರುತಿಸಿಕೊಂಡಿದ್ದಾರೆ. ಅಂತಿಮ ಕ್ಷಣದಲ್ಲಿ ಕಾಂಗ್ರೆಸ್, ಜೆಡಿಎಸ್ ಜತೆಗಿರುವ ಒಬ್ಬಿಬ್ಬರು ತನ್ನತ್ತ ಒಲವು ತೋರಬಹುದು ಎಂದು ಬಿಜೆಪಿ ನಿರೀಕ್ಷೆಯಲ್ಲಿದೆ. ಅದು ಸಾಧ್ಯವಾಗದಿದ್ದಲ್ಲಿ ಲಾಟರಿ ಮೊರೆ ಹೋಗಬೇಕಾಗಬಹುದು. ಶೃಂಗೇರಿಯಲ್ಲಿ ಸಹ ಇದೇ ಪರಿಸ್ಥಿತಿ ಕಂಡುಬರುತ್ತಿದ್ದು, ಆರು ಪ್ರತಿನಿಧಿಗಳಲ್ಲಿ ಮೂವರು ಬಿಜೆಪಿ ಹಾಗೂ ಉಳಿದ ಮೂವರು ಕಾಂಗ್ರೆಸ್, ಜೆಡಿಎಸ್ ಜತೆ ಗುರುತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಚಿಕ್ಕಮಗಳೂರು ಮಾಹಿತಿ ಅಸ್ಪಷ್ಟ: ಚಿಕ್ಕಮಗಳೂರು ತಾಲೂಕಿನಲ್ಲಿ ಮಾತ್ರ ಸ್ಪಷ್ಟ ಬಹುಮತದ ಚಿತ್ರಣ ಲಭ್ಯವಾಗುತ್ತಿಲ್ಲ. 28 ಪ್ರತಿನಿಧಿಗಳಲ್ಲಿ ಜೆಡಿಎಸ್ ಒಂದೆರಡು ಮತಗಳ ಬೆಂಬಲದಿಂದ ಮುಂದಿದೆ ಎಂದರೆ ಜೆಡಿಎಸ್ 15 ಹಾಗೂ ಬಿಜೆಪಿ 13 ಮಂದಿ ಬೆಂಬಲ ಪಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಗೆಲುವಿಗೆ ಅಗತ್ಯವಿರುವ ಎರಡು-ಮೂರು ಮತಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮುಂದುವರಿಸಲಿದೆ ಎಂದು ಹೇಳಲಾಗುತ್ತಿದೆ. ಹಿಂದೆ ದಾಳ ಉರುಳಿಸಿ ಬಿಜೆಪಿ ಲಾಭ ಪಡೆಯುವ ಪ್ರಯತ್ನ ನಡೆಸಿದ್ದರೂ ಕೊನೇ ಕ್ಷಣದಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಜೆಡಿಎಸ್ ಸಾಕ್ಷಿಯಾದ ನಿದರ್ಶನ ಇರುವುದರಿಂದ ಒಟ್ಟು ಫಲಿತಾಂಶ ಅತ್ಯಂತ ಕುತೂಹಲ ಹುಟ್ಟು ಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts