More

    ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ

    ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ, ನಾಗರಿಕ ಹಕ್ಕು ರಕ್ಷಣಾ ಸಮಿತಿ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಯಿತು.

    ರೈತ ಸಂಘ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು. ಸದನದಲ್ಲಿ ಚರ್ಚೆ ನಡೆಸದೆ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತಂದಿರುವುದು ಖಂಡನೀಯ. ರೈತರ ಭೂಮಿಯನ್ನು ಕಸಿಯಲು ಅವಕಾಶ ಮಾಡಿಕೊಟ್ಟಿರುವ ಈ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ತಿದ್ದುಪಡಿ ಕಾಯ್ದೆಯಿಂದ ಬಂಡವಾಳಶಾಹಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ರೈತರು ದೊಡ್ಡ ಪ್ರಮಾಣದಲ್ಲಿ ಭೂಮಿ ಕಳೆದುಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂದೆ ಆಹಾರದ ಕೊರತೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ರೈತ ಮುಖಂಡರು ಕಳವಳವ್ಯಕ್ತಪಡಿಸಿದರು.

    ಕಾಯ್ದೆಗೆ ತಿದ್ದುಪಡಿ ತರಬಾರದೆಂದು ಒತ್ತಾಯಿಸಿ ಕರೊನಾ ಸಂಕಷ್ಟದ ಸಂದರ್ಭದಲ್ಲೂ ರೈತರು ಹೋರಾಟ ನಡೆಸಿದ್ದರು. ಆದರೆ, ಯಾವುದೇ ಹೋರಾಟಗಳನ್ನು ಪರಿಗಣಿಸದೆ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಸುಗ್ರಿವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತಂದಿರುವುದು ಖಂಡನೀಯ. ಇದರ ವಿರುದ್ಧ ಮುಂದೆ ಹಂತ ಹಂತವಾಗಿ ತೀವ್ರ ತರದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಇದೇ ವೇಳೆ ಕಾಯ್ದೆ ಕುರಿತು ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಪ್ರತಿಯನ್ನು ರೈತರು ಸುಟ್ಟು ಹಾಕಿದರು. ರೈತ ಮುಖಂಡರಾದ ವಿದ್ಯಾಸಾಗರ್, ರಾಮೇಗೌಡ, ಎಸ್.ರಘು ಹಿಮ್ಮಾವು, ಮಂಜುಕಿರಣ್, ಕಳ್ಳಿಪುರ ಮಹದೇವಸ್ವಾಮಿ ಇತರರು ಪಾಲ್ಗೊಂಡಿದ್ದರು.

    ದಾಳಿಗೆ ಖಂಡನೆ: ಮುಂಬೈನ ಅಂಬೇಡ್ಕರ್ ನಿವಾಸದ ಮೇಲೆ ನಡೆದ ದಾಳಿ ಖಂಡಿಸಿ ಹಾಗೂ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣಕ್ಕೆ ಗುರುತಿಸಿರುವ ಜಾಗದಲ್ಲಿ ಬುದ್ಧನ ವಿಗ್ರಹ ದೊರೆತಿರುವ ಹಿನ್ನೆಲೆಯಲ್ಲಿ ಬುದ್ಧ ಮಂದಿರ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ನಾಗರಿಕ ಹಕ್ಕು ರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿತು.

    ಮಹಾಮಾನವತಾವಾದಿಯಾದ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಇಂದು ದೇಶ ಉತ್ತಮವಾಗಿ ಮುನ್ನಡೆಯುತ್ತಿದೆ. ಅಂಥ ಶ್ರೇಷ್ಠ ವ್ಯಕ್ತಿತ್ವದ ಮನೆಯ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಆರೋಪಿಗಳನ್ನು ಪತ್ತೆ ಹಚ್ಚಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು. ಅಂಬೇಡ್ಕರ್ ಕುಟುಂಬಕ್ಕೆ ರಕ್ಷಣೆಗೆ ಒದಗಿಸಬೇಕೆಂದು ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
    ಆಯೋಧ್ಯೆಯಲ್ಲಿ ಬುದ್ಧನ ಮಂದಿರ ಇತ್ತು ಎಂಬುದಕ್ಕೆ ಸಾಕ್ಷಿಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬುದ್ಧ ಮಂದಿರ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ಸಮಿತಿ ಪದಾಧಿಕಾರಿಗಳಾದ ಗೋವಿಂದರಾಜು, ತಾ.ರಾ.ಕೃಷ್ಣಮೂರ್ತಿ, ಕೆ.ಎಲ್.ಕೃಷ್ಣಕುಮಾರ್, ವಿ.ಮಣಿಯಮ್ಮ, ರವಿಕುಮಾರ್, ಪುಟ್ಟಮಾದು, ಪಾರ್ವತಮ್ಮ , ಕೃಷ್ಣಾಬಾಯಿ, ಇಂದ್ರಮ್ಮ ಇತರರು ಪಾಲ್ಗೊಂಡಿದ್ದರು.

    ಸೇವಾ ಭದ್ರತೆ ನೀಡಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ರದ್ದುಗೊಳಿಸಬೇಕು, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಹಾಗೂ ಲಾಕ್‌ಡೌನ್ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಿ ಪೂರ್ಣ ಪ್ರಮಾಣದ ವೇತನ ನೀಡಬೇಕೆಂದು ಒತ್ತಾಯಿಸಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
    ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಾವು ಸರ್ಕಾರದ ಪಾಲಿಗೆ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿದ್ದೇವೆ. ಹಲವಾರು ಅತಿಥಿ ಉಪನ್ಯಾಸಕರು 15 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರಿಗೆ ಬೇರೆ ಉದ್ಯೋಗಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಸೇವಾ ಭದ್ರತೆ ಕೂಡ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ನಮ್ಮ ಸಮಸ್ಯೆಗಳನ್ನು ಆಲಿಸಬೇಕೆಂದು ಅತಿಥಿ ಉಪನ್ಯಾಕರು ಒತ್ತಾಯಿಸಿದರು.

    ಜಿಲ್ಲಾಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷೆ ಡಾ.ಸುಮಿತ್ರಾ, ಪದಾಧಿಕಾರಿಗಳಾದ ಡಾ.ಎನ್.ಮಹೇಶ್, ನಾಗಾರ್ಜುನ್, ಹನುಮಂತೇಶ್, ಡಾ.ಕೆ.ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts