More

    ಕೊಲೆ ಕೇಸಲ್ಲಿ ಇಬ್ಬರಿಗೆ ಜೀವಾವಧಿ, ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ, ಸತ್ರ ನ್ಯಾಯಾಲಯ ತೀರ್ಪು

    ಮಂಗಳೂರು: ಪಣಂಬೂರಿನಲ್ಲಿ 2016ರಲ್ಲಿ ನಡೆದಿದ್ದ ರೇಖಪ್ಪ ಲಮಾಣಿ ಎಂಬವರ ಕೊಲೆ ಪ್ರಕರಣದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ದೇವರಗುಡ್ಡದ ನಿವಾಸಿ ನಾಗರಾಜ ಗೋವಿಂದಪ್ಪ ಲಮಾಣಿ(28) ಮತ್ತು ರಾಣೆಬೆನ್ನೂರು ಹನುಮಾಪುರದ ವೀರೇಶ್ ಶಿವಪ್ಪ ಲಮಾಣಿ(32) ಎಂಬುವವರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ರೇಖಪ್ಪ ಲಮಾಣಿ ಕೂಡ ರಾಣೆಬೆನ್ನೂರಿನವರಾಗಿದ್ದು ನಾಗರಾಜ ಗೋವಿಂದಪ್ಪ ಲಮಾಣಿಯ ಪತ್ನಿಯ ಅಕ್ಕನ ಪತಿ.

    ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಹೊಸಂಗಡಿಯಲ್ಲಿ ವಾಸವಾಗಿದ್ದ ನಾಗರಾಜ ಕೂಲಿ ಕಾರ್ಮಿಕನಾಗಿದ್ದ. ಆತ ತನ್ನ ಪತ್ನಿಯ ಅಕ್ಕನ ಪತಿ ರೇಖಪ್ಪ ಲಮಾಣಿಯನ್ನೂ ಕೆಲಸಕ್ಕಾಗಿ ಹೊಸಂಗಡಿಗೆ ಕರೆಸಿಕೊಂಡಿದ್ದ. ನಾಗರಾಜ, ರೇಖಪ್ಪ ಲಮಾಣಿಯ ಪತ್ನಿ ಪಾಪಿ ಆಲಿಯಾಸ್ ಸಾವಿತ್ರಿನ್ನು ಇಷ್ಟಪಟ್ಟಿದ್ದ. ಇದು ರೇಖಪ್ಪ ಲಮಾಣಿಗೆ ತಿಳಿದು 2016ರ ಸೆ.4ರಂದು ಊರಿಗೆ ತೆರಳಲು ಸಿದ್ಧನಾಗಿದ್ದ. ಇದರನ್ನರಿತ ನಾಗರಾಜ ತನ್ನ ಸ್ನೇಹಿತ ವೀರೇಶ್ ಜತೆ ಸೇರಿ ರೇಖಪ್ಪನ್ನು ಮಂಗಳೂರಿಗೆ ಕರೆದುಕೊಂಡು ಬಂದು, ಬಾರ್‌ನಲ್ಲಿ ಮದ್ಯ ಕುಡಿಸಿ, ಆಟೋದಲ್ಲಿ ಪಣಂಬೂರಿಗೆ ಕರೆದುಕೊಂಡು ಹೋಗಿ ಅಲ್ಲಿನ ಸರ್ವೀಸ್ ರಸ್ತೆ ಪಕ್ಕ ಕತ್ತು ಹಿಸುಕಿ ಕೊಲೆ ಮಾಡಿ, ದೊಡ್ಡ ಕಲ್ಲನ್ನು ರೇಖಪ್ಪ ಲಮಾಣಿ ಅವರ ಮೇಲೆ ಎತ್ತಿ ಹಾಕಿದ್ದರು.

    ಎರಡು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದು ಪೊಲೀಸರು ಮೊದಲು ಅಸ್ವಾಭಾವಿಕ ಸಾವಿನ ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಬಳಿಕ ಮರಣೋತ್ತರ ಪರೀಕ್ಷಾ ವರದಿಯಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಪಣಂಬೂರು ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

    22 ಮಂದಿ ಸಾಕ್ಷಿದಾರರ ವಿಚಾರಣೆ: ಅಭಿಯೋಜನಾ ಪಕ್ಷದ ಪರ 22 ಮಂದಿಯನ್ನು ಸಾಕ್ಷಿದಾರರಾಗಿ ವಿಚಾರಿಸಲಾಗಿತ್ತು. ಕೊಲೆ ಮಾಡಿದ್ದನ್ನು ನೋಡಿದ ಯಾವುದೇ ಪ್ರತ್ಯಕ್ಷ ಸಾಕ್ಷಿದಾರರು ಇರದೇ ಇರುವುದರಿಂದ ಕೇವಲ ಸಾಂದರ್ಭಿಕ ಸಾಕ್ಷಿ ಮಾತ್ರ ಲಭ್ಯವಾಗಿದೆ. ಅದನ್ನೇ ಪ್ರಮುಖವಾಗಿ ಪರಿಗಣಿಸಿ ನ್ಯಾಯಾಧೀಶರಾದ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ಅವರು ತೀರ್ಪು ನೀಡಿದ್ದಾರೆ.
    ಜೀವಾವಧಿ ಶಿಕ್ಷೆ ಜತೆಗೆ ಆರೋಪಿಗಳಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ 10ಸಾವಿರ ರೂ.ಗಳನ್ನು ರೇಖಪ್ಪ ಲಮಾಣಿ ಅವರ ಪತ್ನಿಗೆ ನೀಡಲು ಆದೇಶಿಸಿದ್ದಾರೆ. ಅಲ್ಲದೆ ರೇಖಪ್ಪ ಲಮಾಣಿ ಅವರ ಪತ್ನಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿ ಫೆ.16ರಂದು ತೀರ್ಪು ನೀಡಿದ್ದಾರೆ.

    ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾರಾಯಣ ಸೇರಿಗಾರ್ ಯು. ವಾದ ಮಂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts