More

    ಬರಗಾಲ ಘೋಷಣೆಗೆ ಪ್ರಸ್ತಾವನೆ ಕಳುಹಿಸಿ

    ಶಿರಸಿ: ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಈ ವರ್ಷ ಬಹಳ ಕಡಿಮೆಯಾಗಿದೆ. ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳಿಗೂ ನೀರಿಲ್ಲದಂತಾಗಿದೆ. ಇನ್ನುಮುಂದೆ ಮಳೆ ಬಂದರೂ ರೈತರಿಗೆ ಅನುಕೂಲವಾಗುವುದು ಅನುಮಾನ. ಅಧಿಕಾರಿಗಳು ಸಮೀಕ್ಷೆ ನಡೆಸಿ ಬರಗಾಲ ಘೋಷಣೆಗೆ ಪೂರಕವಾದ ಪ್ರಸ್ತಾವನೆ ಕಳುಹಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.

    ನಗರದ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ವಾಡಿಕೆಯಂತೆ ಈ ವರ್ಷ ಮಳೆಯಾಗಿಲ್ಲ. ಆದ್ದರಿಂದ ನೀರಿನ ನಿರ್ವಹಣೆ ಹಾಗೂ ಜಾನುವಾರುಗಳಿಗೆ ಮೇವಿನ ಬಗ್ಗೆ ಈಗಿಂದಲೇ ಜಾಗೃತರಾಗಬೇಕು ಎಂದರು.

    ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದೆ .ರೋಗದ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಸದ್ಯದಲ್ಲೇ ಗಣೇಶ ಚತುರ್ಥಿ ಹಬ್ಬ ಬರುತ್ತಿದೆ. ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಎಲ್ಲಿಯೂ ಹೊಂಡಗಳು ಕಾಣದಂತೆ ನೋಡಿಕೊಳ್ಳಬೇಕು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ನಗರಸಭೆಗೆ ವ್ಯಾಪ್ತಿಗೆ ಬರುವ ರಸ್ತೆಗಳಲ್ಲಿ ಬರುವ ಗುಂಡಿಗಳನ್ನು ಮುಚ್ಚಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

    ರೇಷ್ಮೆ ಕೃಷಿ ಬಗ್ಗೆ ಆಸಕ್ತಿ ಇರುವ ರೈತರನ್ನು ಗುರುತಿಸಬೇಕು. ಅವರಿಗೆ ತರಬೇತಿ ನೀಡಿ, ರೇಷ್ಮೆ ಕೃಷಿಗೆ ಇನ್ನಷ್ಟು ಉತ್ತೇಜನ ನೀಡುವಂತೆ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಜನರಿಂದ ನಿಮ್ಮ ಬಗ್ಗೆ ಸಾಕಷ್ಟು ದೂರುಗಳು ಬಂದಿದೆ. ಜನರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಉಪ ನೋಂದಣಾಧಿಕಾರಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.

    ಸಹಾಯಕ ಆಯುಕ್ತ ದೇವರಾಜ್ ಆರ್., ತಹಸೀಲ್ದಾರ್ ಶ್ರೀಧರ ಮುಂದಲಿಮನಿ, ಡಿವೈಎಸ್ಪಿ ಗಣೇಶ ಕೆ.ಎಲ್., ತಾಪಂ ಇಒ ಸತೀಶ ಹೆಗಡೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts