More

    ನಿಯಮ ಉಲ್ಲಂಘಿಸಿ ಮದ್ಯ ಮಾರಾಟ


    ಮೈಸೂರು : ಎಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‌ಪೋಸ್ಟ್ ಸಮೀಪದಲ್ಲಿರುವ ಬಾವಲಿ ಹಾಡಿಯ ಕಬಿನಿ ಸ್ರಿಂಗ್ ರೆಸಾರ್ಟ್‌ನಲ್ಲಿ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಕೇರಳದವರ ಹಾವಳಿ ಹೆಚ್ಚಾಗಿದೆ. ಕೂಡಲೇ ಈ ಪದ್ಧತಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಬಾವಲಿ ಹಾಡಿಯ ನಿವಾಸಿಗಳು ಸೋಮವಾರ ಪ್ರತಿಭಟನೆ ಮಾಡಿದರು.


    ಈ ವೇಳೆ ಮನಸ್ಸೋ ಇಚ್ಛೆ ಮದ್ಯ ಸೇವನೆ ಮಾಡಿದ್ದ ಕೇರಳದ ವ್ಯಕ್ತಿಗಳು ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಗಲಾಟೆ ಮಾಡಿ, ಪ್ರತಿಭಟನೆಗೆ ವಿರೋಧಿಸಿದರು. ಅದರಲ್ಲಿ ಒಬ್ಬ ವ್ಯಕ್ತಿ ಗಲಾಟೆ ಮಾಡಿದ್ದಲ್ಲದೆ ಮಹಿಳೆಯರ ಮೇಲೆ ಹಲ್ಲೆ ಮಾಡಲು ಮುಂದಾದ. ಇದರಿಂದ ಕೆರಳಿದ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಕೇರಳ ಮೂಲದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾದರು. ಪ್ರತಿಭಟನಾಕಾರರು ಮದ್ಯದ ಅಂಗಡಿಯ ಗೇಟ್‌ಗೆ ಬೀಗ ಜಡಿದರು.


    ಕಬಿನಿ ಸ್ರಿಂಗ್ ರೆಸಾರ್ಟ್‌ನಲ್ಲಿ, ರೆಸಾರ್ಟ್‌ಗೆ ಬಂದವರಿಗೆ ಮಾತ್ರ ಮದ್ಯ ಮಾರಾಟ ಮಾಡಬೇಕು ಎಂಬ ನಿಯಮ ಇದೆ. ಆದರೆ ಇದರ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ, ರೆಸಾರ್ಟ್‌ನ ಒಂದು ಭಾಗದಲ್ಲಿ ಹಾಡಿಯ ಎದುರೆ ಮದ್ಯದ ಅಂಗಡಿಯನ್ನು ತೆರೆದು ಸಾರ್ವಜನಿಕರಿಗೂ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಳಗ್ಗೆಯಿಂದ ರಾತ್ರಿಯ ವರೆಗೂ ಕೇರಳ ಭಾಗದವರು ಇಲ್ಲಿ ಬಂದು ಮದ್ಯ ಸೇವನೆ ಮಾಡುತ್ತಿರುತ್ತಾರೆ. ಪರಿಣಾಮ ನಮ್ಮ ಹಾಡಿಯ ಹೆಣ್ಣು ಮಕ್ಕಳು, ಮಹಿಳೆಯರು ಈ ಭಾಗದಲ್ಲಿ ಧೈರ್ಯದಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಭಯದ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಧರಣಿ ನಿರತರು ಕಿಡಿಕಾರಿದರು.


    ಆದಿವಾಸಿ ಮಹಿಳೆ ಜಯಮ್ಮ ಮಾತನಾಡಿ, ಕೇರಳಿಗರು ಕುಡಿದು ಇಲ್ಲಿನ ಮನೆಗಳಿಗೆ ಏಕಾಏಕಿ ನುಗ್ಗುತ್ತಿದ್ದಾರೆ. ಈಗ ಬಾರ್ ಓಪನ್ ಮಾಡಿರುವ ಸ್ಥಳದಿಂದ ಕೇವಲ ನೂರು ಮೀಟರ್ ದೂರದಲ್ಲಿ ದೇವಾಲಯವಿದೆ. ಅಲ್ಲದೇ ಶಾಲೆ ಕೂಡ ಇದೆ. ಆದರೂ ಸಹ ಇಲ್ಲಿ ಎಗ್ಗಿಲ್ಲದೇ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


    ಲೀಲಾ ಎಂಬುವರು ಮಾತನಾಡಿ, ರೆಸಾರ್ಟ್‌ನ ಮಾಲೀಕರು ಮದ್ಯ ಮಾರಾಟ ತಡೆಯಲು ಬಂದವರ ಮೇಲೆ ಇಲ್ಲ-ಸಲ್ಲದ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಾರೆ. ಇಲ್ಲಿ ಕನ್ನಡಿಗರು ಬಾಳುವುದೇ ಕಷ್ಟವಾಗಿದೆ. ಕೇರಳಿಗರ ದರ್ಪಕ್ಕೆ ನಾವು ಬಲಿಯಾಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.


    ಹಾಡಿಯ ನಿವಾಸಿ ನಾಗೇಶ್ ಮಾತನಾಡಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಸ್ಥಳವಾದ ಈ ಜಾಗವು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಜತೆಗೆ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಈ ಹಿಂದೆ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆದು ಕೊಲೆಯಾಗಿಗತ್ತು. ಹಾಗಾಗಿ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಗಳಾಗಿದ್ದ ಸಿಖಾ ಅವರು ಈ ಭಾಗದಲ್ಲಿ ಇದ್ದ ಮದ್ಯದ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಿದ್ದರು. ಅಲ್ಲದೇ ಅರಣ್ಯದಲ್ಲಿ ಮದ್ಯ ಮಾರಾಟ ಮಡಬಾರದು ಎಂದು ಕಾನೂನನ್ನು ಜಾರಿಗೊಳಿಸಿದ್ದರು. ಅದರೆ ಈಗ ರೆಸಾರ್ಟ್‌ಗೆ ಅನುಮತಿ ಪಡೆದು ಈಗ ಎಲ್ಲರಿಗೂ ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


    ಪ್ರತಿಭಟನೆಯಲ್ಲಿ ಸುಬ್ರಹ್ಮಣ್ಯ, ಸಿ.ಕೆ.ರಾಜು, ಮನೋಜ್, ಮಹೇಶ್, ರಾಜೇಶ, ಸಣ್ಣಪ್ಪ, ಸುಬ್ಬು, ಚಂದ್ರು, ಚಿನ್ನಪ್ಪ, ಜಯಮ್ಮ ಸರೋಜಿನಿ, ನಾಗೇಶ್, ಅಮ್ಮಣ್ಣಿ, ಸುಂದ್ರಿ, ರುಕ್ಮಿಣಿ, ದೀಪು, ಜಾನು, ಮಾರೇ, ಕಾಳಿ, ಬಿಂದು ಇತರರು ಇದ್ದರು.


    ರೆಸಾರ್ಟ್ ನಲ್ಲಿ ಉಳಿದು ಕೊಳ್ಳುವವರಿಗೆ ಮದ್ಯ ಸರಬರಾಜು ಅನುಮತಿ ನೀಡಲಾಗಿದೆ. ಮದ್ಯವನ್ನು ಹೊರಗಡೆಗೆ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ.
    ಮಾದೇವಿ ಬಾಯಿ, ಜಿಲ್ಲಾಧಿಕಾರಿಗಳು ಅಬಕಾರಿ ಇಲಾಖೆ ಮೈಸೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts