More

    ಮಾನಸಿಕ ಪೋಷಣೆ ಸ್ವಾರ್ಥವಲ್ಲ; ಇರಲಿ ಸ್ವಯಂ ಪ್ರೀತಿ-ಕಾಳಜಿ..

    | ರೇಖಾ ಬೆಳವಾಡಿ

    • ವರುಣ್ ಬಹಳ ಇಷ್ಟ ಪಟ್ಟು ಗುಲಾಬಿ ಗಿಡ ಒಂದನ್ನು ತಂದು ತನ್ನ ಬಾಲ್ಕನಿಯಲ್ಲಿ ಇಡುತ್ತಾನೆ. ಇತ್ತೀಚೆಗೆ ಕೆಲಸದಲ್ಲಿ ವ್ಯಸ್ತವಾದ ಕಾರಣ ಗಿಡವನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಕಾರಣ ಗಿಡ ನೀರು ಕಾಣದೆ, ಅತಿಯಾದ ಬಿಸಿಲಿಗೆ ಸಿಲುಕಿ, ಗೊಬ್ಬರವಿರದೆ, ಬಿಳಿ ಹುಳುಗಳು ಹತ್ತಿ ಒಣಗುತ್ತಿದೆ.
    • ಪ್ರಣತಿ ದಿನನಿತ್ಯದ ಮನೆ, ಕೆಲಸ, ಗಂಡ, ಮಕ್ಕಳು ಹಾಗೂ ಇತರ ಅಂಶಗಳಿಂದ ಖುಷಿಯಾಗಿಯೇ ಇದ್ದರೂ ತನಗಾಗಿ ಯಾವುದೇ ಸಮಯ ಸಿಗುತ್ತಿಲ್ಲ ಎಂದು ಅನಿಸುತ್ತಿರುತ್ತದೆ. ಹೀಗಿರುವಾಗ ಬಹಳ ಚರ್ಚೆ ಹಾಗೂ ಇನ್ನಿತರ ಏರ್ಪಾಟುಗಳನ್ನು ಮಾಡಿ, ಅನೇಕ ವರುಷಗಳ ನಂತರ ತನ್ನ ಕಾಲೇಜಿನ ಗೆಳತಿಯರ ಜೊತೆ ಒಂದು ದಿನದ ಮಟ್ಟಿಗ ಸಣ್ಣ ಪ್ರವಾಸವೊಂದಕ್ಕೆ ಹೋಗುತ್ತಾಳೆ. ಈಗ ಪ್ರವಾಸಕ್ಕೆ ಹೋದರೂ ಮನಸೆಲ್ಲಾ ಮನೆಯ ಕಡೆಗೇ. ಪದೇಪದೆ ಮನೆಗೆ ಫೋನು ಮಾಡಿ ಆಗುಹೋಗುಗಳ ಬಗ್ಗೆ ವಿಚಾರಿಸುತ್ತಿರುತ್ತಾಳೆ. ಮನೆ, ಮಕ್ಕಳನ್ನು ಬಿಟ್ಟು ಬಂದು ಬಿಟ್ಟೆನಲ್ಲಾ, ಯಾರಾದರೂ ಏನು ತಿಳಿದುಕೊಳ್ಳುತ್ತಾರೆ, ಸ್ವಲ್ಪ ಸ್ವಾರ್ಥಿಯಾಗಿಬಿಟ್ಟೆನಲ್ಲಾ ಎಂದು ಕೊರಗುತ್ತಿರುತ್ತಾಳೆ. ಒಂದು ರೀತಿಯ ಅಪರಾಧ ಮನೋಭಾವ ಕಾಡುತ್ತದೆ.
    • ವಾರವಿಡೀ ದುಡಿದು ಆಯಾಸಗೊಂಡರೂ ತಬಲ‌‌ ಮತ್ತು ಕ್ರಿಕೆಟ್​ಗಾಗಿ ವಾರಾಂತ್ಯದಲ್ಲಿ ತನಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳುವ ಗೌತಮ್ ಕಂಡಾಗ, ವಾರಾಂತ್ಯದಲ್ಲಿ ಮನೆ/ಕುಟುಂಬದ ಕೆಲಸಕ್ಕಿಂತ, ತನ್ನ ಸಂತೋಷವೇ ಹೆಚ್ಚಾಯಿತು ಎಂದು ಮನೆಯವರಿಂದಲೇ ಟೀಕೆಗೆ ಒಳಗಾಗುತ್ತಾನೆ. ಆದರೂ ತನಗಾಗಿ ಎಂದು ಮೀಸಲಿಟ್ಟ ಸ್ವಲ್ಪ‌ಸಮಯ ಅವನ ಮನಸ್ಸಿಗೆ ಹಿತ ನೀಡುತ್ತದೆ. ತನಗೆ ಯಾವುದು ಸಂತೋಷ ನೀಡುತ್ತದೆ ಎಂಬ ಅರಿವು ಅವನಿಗಿದೆ.

    ಗಿಡಮರಗಳು ಹಾಗೂ ಮನುಷ್ಯನ ಜೀವನವು ಬಹಳಷ್ಟು ಸಾಮ್ಯತೆಯನ್ನು ಹೊಂದಿವೆ. ಗಿಡ ಮರಗಳ ಆರೋಗ್ಯಕ್ಕೇ ಆಗಲಿ ಮಾನವನ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೇ ಆಗಲಿ ಕಾಲ ಕಾಲಕ್ಕೆ ನಿಯಮಿತವಾಗಿ ಕಾಳಜಿವಹಿಸಿ ಪೋಷಿಸುವುದು ಅಗತ್ಯ.

    ಗಿಡ ಮರಗಳಿಗೆ ಕಾಲಕಾಲಕ್ಕೆ ನೀರು, ಸಾಕಷ್ಟು ಸೂರ್ಯನ‌ ಬೆಳಕು, ಗೊಬ್ಬರ , ಕಳೆ ಕೀಳುವುದು, ಕೀಟನಾಶಕಗಳನ್ನು ಸಿಂಪಡಿಸುವುದು ಇತ್ಯಾದಿ ಕ್ರಮಗಳ ಮೂಲಕ ಕಾಳಜಿವಹಿಸಿ ಪೋಷಿಸುತ್ತೇವೆ. ಪೌಷ್ಟಿಕ ಆಹಾರ ಸೇವಿಸುವುದರ ಮೂಲಕ, ನಿಯಮಿತ ವ್ಯಾಯಾಮದ ಮೂಲಕ ಮಾನವನ ದೈಹಿಕ ಆರೋಗ್ಯವನ್ನು ಪೋಷಿಸುತ್ತೇವೆ.

    ಹಾಗಾದರೆ ಮಾನವನ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಕಾಳಜಿ, ಪೋಷಣೆಯನ್ನು ಹೇಗೆ ಮಾಡಬಹುದು ಎಂಬ ಪ್ರಶ್ನೆಗೆ ಮುಖ್ಯವಾಗುವ ಅಂಶಗಳೆಂದರೆ.

    • ಸ್ವಯಂ ಕಾಳಜಿ
    • ಸ್ವಯಂ ಪ್ರೀತಿ

    ಅನೇಕ ಬಾರಿ ಸ್ವಯಂ ಕಾಳಜಿ ಮತ್ತು ಸ್ವಯಂ ಪ್ರೀತಿಯನ್ನು ಬಹಳಷ್ಟು ಮಂದಿ “ಸ್ವಾರ್ಥ” ಎಂದೇ ತಪ್ಪು ತಿಳಿಯುತ್ತಾರೆ. ಆದರೆ ಇದು ಖಂಡಿತವಾಗಿಯೂ ಸ್ವಾರ್ಥ ಅಲ್ಲ. ಇದರ ಅರ್ಥ ನಿಮ್ಮ ದೈಹಿಕ, ಮಾನಸಿಕ ,ಭಾವನಾತ್ಮಕ, ಸಾಮಾಜಿಕ ಅಗತ್ಯತೆಗಳ ಬಗ್ಗೆ ನೀವು ನಿರ್ಲಕ್ಷ್ಯ ಮಾಡದೆ ಗಮನಹರಿಸುತ್ತಿದ್ದೀರಿ ಎಂದಷ್ಟೇ ಅರ್ಥ.

    ನಮ್ಮ ಬಗ್ಗೆ ನಾವು ಆರೋಗ್ಯವಾಗಿ, ಸಂತೋಷವಾಗಿ ಇರುವಂತೆ ಕಾಳಜಿ ವಹಿಸಿದಾಗ, ಕುಟುಂಬದ ಇತರರ ಅಗತ್ಯಗಳನ್ನು ಇನ್ನೂ ಉತ್ತಮವಾಗಿ ಪೂರೈಸಲು ಸಾಧ್ಯವಾಗುತ್ತದೆ ಅಲ್ಲವೇ?

    • ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸುತ್ತೇವೆ, ಆಸೆ-ಆಕಾಂಕ್ಷೆಗಳನ್ನು ಪೂರೈಸಲು ಕೆಲಸ ಮಾಡುತ್ತಿರುತ್ತೇವೆ. ಉದಾಹರಣೆಗೆ..
    • ತನ್ನ ಗುರಿ ತಲುಪಲು, ಪೋಷಕರ ಸಂತೋಷಕ್ಕಾಗಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ‌ ಪ್ರದರ್ಶನ ನೀಡಬೇಕು ಎಂದು ಕಷ್ಟ ಪಡುತ್ತಿರಬಹುದು
    • ಮನೆಯ ಅಗತ್ಯಗಳ ಪೂರೈಕೆಗೆ, ಸಾಮಾಜಿಕ ಸ್ಥಾನ‌ಮಾನಕ್ಕಾಗಿ ಕೆಲವರು ಕೆಲಸದಲ್ಲಿ ಬಡ್ತಿ ಪಡೆಯಬೇಕೆಂದು ಕಷ್ಟ ಪಟ್ಟು ದುಡಿಯುತ್ತಾರೆ
    • ದೇಶಪ್ರೇಮ; ತಮ್ಮನ್ನು ತಾವು ಸಾಬೀತುಪಡಿಸಲು ರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾಗಬೇಕು ಕಠಿಣ ಅಭ್ಯಾಸ ಮಾಡುತ್ತಿರುತ್ತಾರೆ.
    • ಪ್ರೀತಿ, ಜವಾಬ್ದಾರಿ ಕಾರಣ ಮಕ್ಕಳು, ತಂದೆ-ತಾಯಿಗಳ, ತೀರ್ಥ ಯಾತ್ರೆಯ ಆಶಯವನ್ನು ಪೊರೈಸುವತ್ತ ಕೆಲಸ ಮಾಡುತ್ತಿರಬಹುದು.
    • ತ್ಯಾಗ; ಮಕ್ಕಳಿಗೆ ಸಮಯ ನೀಡಲು ತನ್ನ ನೆಚ್ಚಿನ ವೃತ್ತಿಯಿಂದ ವಿರಾಮ ಪಡೆದಿರಬಹುದು.

    ಇಷ್ಟೆಲ್ಲಾ ದಿನನಿತ್ಯದ ಸವಾಲುಗಳು, ತ್ಯಾಗಗಳು, ತಮ್ಮ ಯಶಸ್ಸು ಹಾಗೂ ತಮ್ಮ ಪ್ರೀತಿ ಪಾತ್ರರ ಕನಸುಗಳನ್ನು ನನಸಾಗಿಸುವತ್ತ ದಿನದ ಹೆಚ್ಚಿನ ಸಮಯವನ್ನು ಕೊಡುವ ನಾವು, ನಮ್ಮ ಬಗ್ಗೆ ಕಾಳಜಿ ಹಾಗೂ ಆಂತರಿಕ-ಮಾನಸಿಕ ಪೋಷಣೆಯನ್ನು ಮರೆತುಬಿಡುತ್ತೇವೆ. ಹಾಗಾದಲ್ಲಿ ದೈಹಿಕ ಹಾಗೂ ಮಾನಸಿಕ ದಣಿವು ಉಂಟಾಗುವುದು ಸಹಜ.

    ಜವಾಬ್ದಾರಿ, ಯಶಸ್ಸು, ಗುರಿ ತಲುಪುವ ಭರದಲ್ಲಿ, ತಮ್ಮನ್ನು ತಾವು ಸಾಬೀತು ಪಡಿಸಲು, ಸಾಮಾಜಿಕ ಸ್ವೀಕಾರಕ್ಕಾಗಿ ಹಾಗೂ ಇನ್ನೂ ಅನೇಕ ಅಂಶಗಳ‌ ಕಾರಣ ಯಾಂತ್ರಿಕ ಜೀವನಶೈಲಿ ನಮ್ಮದಾಗಿಸಿಕೊಂಡುಬಿಡುತ್ತೇವೆ.

    ಎಷ್ಟರಮಟ್ಟಿಗೆ ಎಂದರೆ ಆಗುತ್ತಿರುವ ದಣಿವಿನ ಅರಿವು ಸಹ ನಮಗೆ ಆಗುವುದಿಲ್ಲ. ಒಂದು ವೇಳೆ ದಣಿವು ಗಮನಕ್ಕೆ ಬಂದರೂ ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯವಾಗಿ ಕಾಣುವುದಿಲ್ಲ. ಬದಲಾವಣೆ ಬೇಕು ಎನಿಸಿದರೂ, ತನಗಾಗಿ ಸ್ವಲ್ವ ಸಮಯ ಮೀಸಲಿಟ್ಟು ನೆಚ್ಚನ ಹವ್ಯಾಸಕ್ಕೆ ಸಮಯ ಕೊಡದಂತೆ, ಮುಂದಿರುವ ಕೆಲಸಗಳ ಪಟ್ಟಿ ಕಣ್ಣೆದುರಿಗೆ ಬರುತ್ತದೆ‌. ಅವಧಿಯೊಳಗೆ ಕೆಲಸ ಮುಗಿಸುವ ಸಲುವಾಗಿ ತನ್ನ ಬೇಕು-ಬೇಡಗಳು ನಿರ್ಲಕ್ಷ್ಯವಾಗಿಬಿಡುತ್ತವೆ.

    ದಣಿವಿನೊಂದಿಗೆ ಮಾಡಿದ ಕೆಲಸದಲ್ಲಿ ತೃಪ್ತಿ ಇರದೆ, ಹತಾಶರಾಗುತ್ತಾರೆ. ಎಷ್ಟೇ ಕೆಲಸ ಮಾಡಿದರೂ ಯಾವ ಕೆಲಸವೂ ಪೂರ್ಣಗೊಳ್ಳುತ್ತಿಲ್ಲ ಎಂದು ಆತ್ಮವಿಶ್ವಾಸ ಕುಗ್ಗುತ್ತದೆ‌. ಇದರ ಜೊತೆ ಇತರರ ಬದುಕಿನೊಂದಿಗೆ ತಮ್ಮ ಜೀವನವನ್ನು ಹೋಲಿಸಿಕೊಳ್ಳುತ್ತ ಖಿ‌ನ್ನತೆ ಅನುಭವಿಸುತ್ತಾರೆ. ಸಾಮಾಜಿಕ ಜಾಲತಾಣದ ಬಳಕೆ ಕೂಡ ಹೋಲಿಸಿಕೊಳ್ಳುವುದನ್ನು ಹೆಚ್ಚು ಮಾಡುತ್ತದೆ. ಇದರಿಂದ ತಮ್ಮ ಸಾಮರ್ಥ್ಯದ ಕಡೆ ಗಮನ ಕಡಿಮೆಯಾಗುತ್ತದೆ. ಇದರಿಂದ ನಕಾರಾತ್ಮಕ ಭಾವನೆ ಹೆಚ್ಚುತ್ತದೆ. ಏನಾದರೂ ಮಾಡಬೇಕು ತನಗೋಸ್ಕರ ಎನಿಸಿದರೂ ಏನು‌ ಮಾಡಬೇಕು? ಬದುಕಿನ ಈ ಹಂತದಲ್ಲಿ ಹೊಸತೇನೋ ಶುರುಮಾಡಿ ವಿಫಲವಾದರೆ? ಯಾರಾದರೂ ನಕ್ಕುಬಿಟ್ಟರೆ? ಎಂಬ ಭಯ ಆವರಿಸುತ್ತದೆ. ಆದರೆ ಈ ಎಲ್ಲ ನಕಾರಾತ್ಮಕತೆಗಳನ್ನು ದಾಟಿ ತಮ್ಮನ್ನು ತಾವು ಪ್ರೇರೇಪಿಸುತ್ತ ತಮ್ಮ‌ ಆತ್ಮಗೌರವ ಹೆಚ್ಚಿಸಿಕೊಳ್ಳುವುದೇ ಸ್ವಯಂ ಕಾಳಜಿ ಮತ್ತು ಪ್ರೀತಿಯಾಗಿದೆ.

    ಸ್ವಯಂ ಕಾಳಜಿ ಹಾಗೂ ಸ್ವಯಂ ಪ್ರೀತಿಯನ್ನು ಏಕೆ ಬೆಳೆಸಿಕೊಳ್ಳಬೇಕು?

    * ಸಂತೋಷವನ್ನು ಇಮ್ಮಡಿಗೊಳಿಸುತ್ತದೆ.
    * ಧನಾತ್ಮಕವಾಗಿ ಯೋಚಿಸಲು ಸಹಾಯಕ
    * ಒತ್ತಡ ನಿವಾರಿಸುತ್ತದೆ
    * ಭಾವನಾತ್ಮಕ ಸ್ಥಿತಿಸ್ಥಾಪಕತ್ವ ಉತ್ತಮಗೊಳಿಸಲು
    * ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತದೆ.
    * ಸಂಬಂಧಗಳನ್ನಯ ಸುಧಾರಿಸುತ್ತದೆ
    * ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
    * ಆತಂಕ ಹಾಗೂ ಖಿನ್ನತೆಯಿಂದ ಹೊರ ಬರಲು ಸಹಾಯಕ.
    * ಆತ್ಮವಿಶ್ವಾಸ ಹೆಚ್ಚಿಸುತ್ತದೆ.
    * ಗುರಿ ತಲುಪುವಲ್ಲಿ ಸಹಾಯಕ
    * ಇತರರನ್ನೂ ಪ್ರೇರೇಪಿಸುತ್ತದೆ.

    ವಿವಿಧ ಬಗೆಯ ಕಾಳಜಿ ಹಾಗೂ ಪೋಷಣೆಗಳು

    ದೈಹಿಕ
    * ಪೌಷ್ಟಿಕ ಆಹಾರ ಸೇವನೆ
    * ಪ್ರತಿದಿನ‌ ವ್ಯಾಯಾಮ ಅಭ್ಯಾಸ
    * ನಿದ್ರೆ/ವಿಶ್ರಾಂತಿ

    ಬೌದ್ಧಿಕ ಕಾಳಜಿ
    * ನಿರಂತರ ಶಿಕ್ಷಣ/ ಕಲಿಕೆ
    * ಪುಸ್ತಕ ಓದುವುದು
    * ಆಡಿಯೋ ರೆಕಾರ್ಡಿಂಗ್ ಕೇಳುವುದು
    * ಪಾಡ್ ಕಾಸ್ಟ್ ಆಲಿಸುವುದು

    ಭಾವನಾತ್ಮಕ
    * ಪ್ರತಿಯೊಬ್ಬರೂ ಭಾವನಾತ್ಮಕ ಏರುಪೇರು ಅನುಭವಿಸುತ್ತಿರುತ್ತಾರೆ. ಸ್ವಲ್ಪ ಸಮಯ ನೀಡಿ ನಿಮ್ಮ ಪ್ರಸ್ತುತ ಭಾವನೆಯನ್ನು ಗುರುತಿಸಿ.
    * ದುಃಖವನ್ನು ಹಿಡಿದಿಡದೆ, ಹೊರಹಾಕಿ
    * ಇತರರಿಗೆ ಹೋಲಿಸಿಕೊಳ್ಳುವುದನ್ನು ಬಿಟ್ಟು ಬಿಡಿ
    * ಸ್ನೇಹಿತರೊಂದಿಗೆ ಮುಕ್ತ ಮಾತುಕತೆ ಹಾಗೂ ನಗು

    ಸಾಮಾಜಿಕ
    * ಸ್ನೇಹಿತರನ್ನು ಭೇಟಿ ಮಾಡಿ
    * ನಿರಂತರ ಸಂಪರ್ಕದಲ್ಲಿರಿ
    * ಸ್ವಯಂಸೇವಕರಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ
    * ವಿವಿಧ ಸ್ಥಳಗಳಿಗೆ ಭೇಟಿ ಮಾಡಿ, ಆನಂದಿಸಿ

    ಆಧ್ಯಾತ್ಮಿಕ
    * ಯೋಗ ಅಭ್ಯಾಸ
    * ಕೃತಜ್ಞತಾ ಭಾವನೆ ಅಭ್ಯಾಸ ಮಾಡಿಕೊಳ್ಳುವುದು.
    * ಧ್ಯಾನ

    ನಿಮ್ಮ ನೆಚ್ಚಿನ ಗೀತೆ ಕೇಳುವುದು, ತೋಟಗಾರಿಕೆ, ಕಥೆ ಕವನ ಬರೆಯುವುದು, ಚಿತ್ರ ಬಿಡಿಸುವುದು, ಕೇಕ್ ಬೇಕ್ ಮಾಡುವುದು, ರಂಗೋಲಿ ಹಾಕುವುದು ಅಥವಾ ಮತ್ತಾವುದೇ ಚಟುವಟಿಕೆ ಇರಬಹುದು, ಆಯ್ಕೆ ನಿಮ್ಮದು. ನಿಮಗಾಗಿ ಮೀಸಲಿಟ್ಟು ಮಾಡಿದ ಚಟುವಟಿಕೆ ತೃಪ್ತಿ ಕೊಡುತ್ತದೆ. ಇವು ನಿಮ್ಮ ಆತ್ಮ ಸಂತೋಷವನ್ನು ಹೆಚ್ಚಿಸುತ್ತದೆ.

    ಸ್ವಯಂ ಆರೈಕೆಯು ಮತ್ತು ಪೋಷಣೆಯು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮುಖ್ಯ ಅಂಶವಾಗಿದೆ. ನಿಮ್ಮ ನೆಚ್ಚಿನ ಹವ್ಯಾಸವನ್ನು ಮುಂದುವರಿಸಿ. ನೆನಪಿಡಿ ತಮಗಾಗಿ ಎಂದು ಮೀಸಲಿಟ್ಟು ಮಾಡುವ ಯಾವುದೇ ಕೆಲಸವೂ ಖಂಡಿತ ಸ್ವಾರ್ಥವಲ್ಲ.

    ನಮ್ಮ ನೆಚ್ಚಿನ ಮೊಬೈಲ್ ಫೋನ್​ ಸ್ಕ್ರೀನ್​ನಲ್ಲಿ ಗೀರು ಬಿದ್ದರೆ ಮನಸ್ಸಿಗೆ ನೋವಾಗುತ್ತದೆ, ತಕ್ಷಣ ರಿಪೇರಿಗೆ ಓಡಿಹೋಗುತ್ತೇವೆ. ಮೊಬೈಲ್​ಫೋನ್​ ಬ್ಯಾಟರಿ ಚಾರ್ಜ್ ಮುಗಿಯದಂತೆ ಆಗಾಗ ಚಾರ್ಜ್ ಮಾಡಿ ಕಾಳಜಿ ವಹಿಸುವ ನಾವು, ಅಮೂಲ್ಯವಾದ ನಮ್ಮ ಜೀವನದ ಬಗ್ಗೆಯೂ ಅಷ್ಟೇ ಕಾಳಜಿ ಪ್ರೀತಿ ತೋರುವುದು ಮುಖ್ಯವಲ್ಲವೇ?
    ಒಮ್ಮೆ ಯೋಚಿಸಿ…

    ಮಾಸ್ಕ್ ಬೇಕೇ? ಬೇಡವೇ?: ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ ಬಿಸಿಬಿಸಿ ಚರ್ಚೆ

    ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts