

ಚಿಕ್ಕೋಡಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ವೇದಗಂಗಾ ನದಿಯನ್ನು ದಾಟಲು ಹೋಗಿ ಯುವಕನೊಬ್ಬ ಆಯತಪ್ಪಿ ನದಿಗೆ ಬಿದ್ದು ಮರದಲ್ಲಿ ಕುಳಿತಿರುವ ವಿಲಕ್ಷಣ ಘಟನೆ ಸಂಭವಿಸಿದೆ.
ದಿಗ್ವಿಜಯ ಕುಲಕರ್ಣಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮರದಲ್ಲಿ ಕುಳಿತ ವ್ಯಕ್ತಿ. ಈತ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದ ಬಳಿ ಅಕ್ಕೋಳ-ಸಿದ್ನಾಳ ಸೇತುವೆ ದಾಟಲು ಮುಂದಾಗಿದ್ದ. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ಮಧ್ಯದಲ್ಲಿ ಮರ ಸಿಕ್ಕಿದ್ದರಿಂದ ಬಚಾವಾಗಿ ಮರದಲ್ಲಿ ಕುಳಿತಿದ್ದ. ಗ್ರಾಮಸ್ಥರಿಂದ ವಿಷಯ ತಿಳಿದ ನಿಪ್ಪಾಣಿ ಪೊಲೀಸರು ಮತ್ತು ರಾಷ್ಟ್ರೀಯ ವಿಕೋಪ ಪರಿಹಾರ ಪಡೆಯ ಸಿಬ್ಬಂದಿ ಆಗಮಿಸಿ ಇವನನ್ನು ರಕ್ಷಿಸಿದ್ದಾರೆ.