More

    ಬಹುಸಂಸ್ಕೃತಿ ಮೇಲೆ ದಬ್ಬಾಳಿಕೆ ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಸಿದ್ದರಾಮಯ್ಯ ಹೇಳಿಕೆ

    ತುಮಕೂರು; ಬಹುಸಂಸ್ಕೃತಿಯ ಭಾರತದಲ್ಲಿ ಬಹುತ್ವ ಕಣ್ಮರೆಯಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲೂ ಇಂತಹ ಸ್ಥಿತಿ ಉದ್ಭವಿಸಿರಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ದೂರಿದರು.

    ನಗರದ ರವೀಂದ್ರ ಕಲಾನಿಕೇತನದಲ್ಲಿ ಭಾನುವಾರ ವೀಚಿ ಸಾಹಿತ್ಯ ಪ್ರತಿಷ್ಠಾನದದ ವತಿಯಿಂದ ಏರ್ಪಡಿಸಿದ್ದ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
    ಬಹುಸಂಸ್ಕೃತಿ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು, ಸಾಂಸ್ಕೃತಿಕ ದಬ್ಬಾಳಿಕೆ, ರಾಜಕೀಯ ದಬ್ಬಾಳಿಕೆಯ ಬಗ್ಗೆ ಧ್ವನಿ ಎತ್ತದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತರಕ್ಕೆ ಹೋಲಿಸಿದರೆ ದಕ್ಷಿಣ ರಾಜ್ಯಗಳು ಹೆಚ್ಚು ತೆರಿಗೆ ಸಲ್ಲಿಸಿದರೂ, ಅಭಿವೃದ್ಧಿ ಅನುದಾನದಲ್ಲಿ ನಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದರು.

    ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಸ್‌ಬಿಐಗೆ ವಿಲೀನಗೊಂಡ ಬಳಿಕ ರಾಜ್ಯದ ಅಸ್ಮಿತೆಯೇ ಕಳೆದುಹೋಗಿದೆ, ಬ್ಯಾಂಕ್‌ಗಳ ರಾಷ್ಟ್ರೀಕರಣವಾದಾಗಲೂ ಇಂತಹ ಸ್ಥಿತಿ ಉದ್ಬವಿಸಿರಲಿಲ್ಲ. ಕವನದ ಮೂಲಕ 1960ರ ದಶಕದಲ್ಲೇ ವೀಚಿ ಅವರು ಬಹುತ್ವವನ್ನು ಪ್ರತಿಪಾದಿಸಿದ್ದರು ಎಂದರು.

    ಭ್ರಷ್ಟತೆಯೆಂಬುದು ರಾಜಕಾರಣದ ಅವಿಭಾಜ್ಯ ಅಂಗವಾಗಿರುವ ಸಂದರ್ಭದಲ್ಲಿ ಯಾರು ಕಡಿಮೆ ಭ್ರಷ್ಟರು ಎಂಬುದನ್ನು ಹುಡುಕುವ ಪರಿಸ್ಥಿತಿ ಇದೆ. ಸಮಾಜವಾದಿ ಹಿನ್ನೆಲೆಯಲ್ಲಿ ಬಂದ ರಾಜಕೀಯ ನೇತಾರರು ಕೋಮುವಾದಿ ಪಕ್ಷಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ, ಇಂತಹವರನ್ನು ಜನರು ಚುನಾವಣೆಗಳಲ್ಲಿ ಧಿಕ್ಕರಿಸಬೇಕು ಎಂದರು.

    ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ.ಪಿ.ಕೃಷ್ಣ ವೀಚಿಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಬರವಣಿಗೆಗೆ ಬದಲಾವಣೆಯ ದೊಡ್ಡ ಶಕ್ತಿ ಇದೆ. ಸಮಾಜಕ್ಕೆ ವ್ಯತಿರಿಕ್ತವಾದ ಸರ್ಕಾರದ ತೀರ್ಮಾನಗಳನ್ನು ಹಿಂಪಡೆಯುವಂತೆ ಮಾಡಲು ಒತ್ತಡ ನಿರ್ಮಿಸುವ ಶಕ್ತಿಯಿದ್ದರೆ ಅದು ಬರವಣಿಗೆಗೆ ಮಾತ್ರ. ಆದರೆ ಎಲ್ಲೋ ಒಂದು ಕಡೆ ಮಾಧ್ಯಮಗಳು ಇದರಿಂದ ದೂರಾಗುತ್ತಿರುವುದು ದುರಂತ ಎಂದರು.
    ಲೇಖಕ ಚ.ಹ.ರಘುನಾಥ, ಡಾ.ಜಿ.ವಿ.ಆನಂದಮೂರ್ತಿ, ಡಾ.ಎಚ್.ದಂಡಪ್ಪ ಮಾತನಾಡಿದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಸ್.ನಾಗಣ್ಣ, ಪ್ರತಿಷ್ಠಾನ ಅಧ್ಯಕ್ಷ ಎಂ.ಬಸವಯ್ಯ, ಪದಾಧಿಕಾರಿಗಳಾದ ಎಂ.ಚ್.ನಾಗರಾಜ್, ಬಿ.ಮರುಳಯ್ಯ ಇದ್ದರು.

    ಪ್ರಶಸ್ತಿ ಪ್ರದಾನ: ಕಾರ‌್ಯಕ್ರಮದಲ್ಲಿ ಬೆಳ್ಳಿ ತೊರೆ ಕೃತಿಯ ಲೇಖಕ ಚ.ಹ.ರಘುನಾಥ ಹಾಗೂ ಶೌಚಾಲಯ ತಪಸ್ವಿ ಕೃತಿಯ ಲೇಖಕ ಈರಪ್ಪ ಎಂ.ಕಂಬಳಿ ಅವರಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ಅಪ್ಪನ ತಂಗಿ ಕವನ ಸಂಕಲನಕ್ಕೆ ಡಾ.ವಿ.ಎ.ಲಕ್ಷ್ಮಣ್ ಅವರಿಗೆ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಸಾಕಮ್ಮ ತಿಮ್ಲಾಪುರ ಅವರಿಗೆ ವೀಚಿ ಜನಪದ ಪ್ರಶಸ್ತಿ, ಡಿ.ಎನ್.ರಾಜಾರಾವ್ ಅವರಿಗೆ ಕನಕಕಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts