More

    ಎರಡನೇ ಬಾರಿಗೆ ಅಂಗವಿಕಲರ ಸಮೀಕ್ಷೆ, ಸಚಿವ ಕೋಟ ಮಾಹಿತಿ

    ಮಂಗಳೂರು: ರಾಜ್ಯದಲ್ಲಿ ಎರಡನೇ ಬಾರಿಗೆ ಅಂಗವಿಕಲರ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಪುರಭವನದಲ್ಲಿ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಸೋಮವಾರ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಅಂಗವಿಕಲರಲ್ಲಿ ಶೇ.75ರಷ್ಟು, ಶೇ.50ರಷ್ಟು ಅಂಗವೈಕಲ್ಯ ಹೊಂದಿದವರಿಗೆ ಸೌಲಭ್ಯ ಬೇರೆ ಬೇರೆ ರೀತಿ ಇದೆ. ಅವರೆಲ್ಲರಿಗೂ ಸರಿಯಾದ ಸವಲತ್ತು ಸಿಗಬೇಕು ಎನ್ನುವ ಕಾರಣದಿಂದ ಎರಡನೇ ಬಾರಿಗೆ ಅಂಗವಿಕಲರ ಸಮೀಕ್ಷೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

    ಪೌರಕಾರ್ಮಿಕರಿಗೆ ಯೋಜನೆ: ಶ್ರಮಜೀವಿಗಳಾದ ಪೌರಕಾರ್ಮಿಕರಿಗೆ ಎಲ್ಲ ಅನುಕೂಲತೆಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅದನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ನಮ್ಮ ಶುಚಿತ್ವ, ಆರೋಗ್ಯವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಕೊಡುಗೆ ದೊಡ್ಡದು, ಅವರ ಆರೋಗ್ಯ, ಶಿಕ್ಷಣ ಇತ್ಯಾದಿ ವಿಚಾರದ ಬಗ್ಗೆ ನಾವು ಗಮನ ಹರಿಸಬೇಕಾಗಿದೆ. ಅದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಶೇ.16ರಿಂದ 18ರಷ್ಟು ಮಂದಿಗೆ ಇನ್ನೂ ಮೂಲಸೌಕರ್ಯ ಕೊರತೆ ಇದೆ ಎಂದು ಸರ್ಕಾರದ ಮಾಹಿತಿಯೇ ಹೇಳುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಂತ ಕಾಲಿನಲ್ಲಿ ನಿಂತಾಗ ಮಾತ್ರವೇ ಸಮಾಜ ಶಕ್ತಿಯುತವಾಗಬಲ್ಲದು ಎಂದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು, ಪೌರಕಾರ್ಮಿಕರಿಗೆ ಗೃಹಭಾಗ್ಯ ಒದಗಿಸಲು ಸರ್ಕಾರ ಬದ್ಧ. ಬಡವರಿಗೆ ಮನೆ ನಿರ್ಮಾಣಕ್ಕಾಗಿ 930 ಮಂದಿಗೆ ಶಕ್ತಿನಗರದಲ್ಲಿ ಈ ಹಿಂದಿನ ಆಡಳಿತ ಕಾಲದಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಆದರೆ ಆ ಭೂಮಿ ಅರಣ್ಯ ಇಲಾಖೆಯ ಭೂಮಿಯಾಗಿರುವುದರಿಂದ 2018ರಿಂದ ಇಲ್ಲಿಯವರೆಗೆ ಮನೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಅರಣ್ಯ ಇಲಾಖೆ ಭೂಮಿಯನ್ನು ಪಾಲಿಕೆಗೆ ಬರೆದುಕೊಡಬೇಕಿದೆ. ಅದಕ್ಕಾಗಿ ಅಧಿಕಾರಿಗಳ ಜತೆಗೆ ಈಗಾಗಲೇ ಸಭೆ ನಡೆಸಲಾಗಿದ್ದು ಜಿಲ್ಲೆಯ ಇತರ ಭಾಗದಲ್ಲಿ 20 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ, ಆರ್‌ಟಿಸಿ ಹಸ್ತಾಂತರ ಮಾಡಿದ ನಂತರ ಕೇಂದ್ರ-ರಾಜ್ಯದ ಅನುಮತಿ ಪಡೆದು ಶಕ್ತಿನಗರದ ಭೂಮಿಯನ್ನು ಪಾಲಿಕೆ ಪಡೆದು ಮನೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಅಲ್ಲಿನ ನಿವಾಸಿಗಳಿಗೆ ಬ್ಯಾಂಕ್ ಲೋನ್ ಕೂಡ ವ್ಯವಸ್ಥೆ ಮಾಡಲಾಗುವುದು. ಜತೆಗೆ ಸ್ಲಂ ಬೋರ್ಡ್‌ನಿಂದ 500 ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಬೆಂಗ್ರೆ ನಿವಾಸಿಗಳ ಹಕ್ಕುಪತ್ರ ಸಮಸ್ಯೆ ಪರಿಹಾರಕ್ಕೆ ಗಮನ ನೀಡಲಾಗುವುದು ಎಂದರು.

    ಮೇಯರ್ ದಿವಾಕರ ಪಾಂಡೇಶ್ವರ ಮಾತನಾಡಿ, ಕರೊನಾ ಲಾಕ್‌ಡೌನ್ ಸಂದರ್ಭ ಪೌರಕಾರ್ಮಿಕರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಶ್ರಮದಿಂದಾಗಿ ಮಂಗಳೂರು ಸ್ವಚ್ಚವಾಗಿದೆ ಎಂದರು.

    ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಶಾಸಕರಾಗಿ ಹಲವಾರು ರೀತಿಯ ಯೋಜನೆಗೆ ಭೂಮಿ ಪೂಜೆ ನಡೆಸುವುದು, ಶಿಲಾನ್ಯಾಸ ಮಾಡುವುದು ಸಾಮಾನ್ಯ. ಆದರೆ ಈ ರೀತಿ ಅವಶ್ಯಕತೆ ಇರುವಂತಹ ಜನರಿಗೆ ನೇರವಾಗಿ ಸವಲತ್ತು ವಿತರಿಸುವುದು, ಆ ಮೂಲಕ ಅವರ ಖುಷಿಯಲ್ಲಿ ಭಾಗಿಯಾಗುವುದು ಸಂತೃಪ್ತಿ ತರುವ ವಿಚಾರ ಎಂದರು.

    ಉಪ ಮೇಯರ್ ವೇದಾವತಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಗದೀಶ್ ಪೈ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಪೂರ್ಣಿಮಾ, ಶರತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

    ಸವಲತ್ತು, ಸಲಕರಣೆ ವಿತರಣೆ: ಕಾರ್ಯಕ್ರಮದಲ್ಲಿ ಶೇ.24.10ರ ಮೀಸಲು ನಿಧಿಯಡಿ 12 ಫಲಾನುಭವಿಗಳಿಗೆ ಒಟ್ಟು 4,11,216 ರೂ. ವಿತರಣೆ, ಶೇ. 7.25 ಮೀಸಲು ನಿಧಿಯಡಿ 59 ಫಲಾನುಭವಿಗಳಿಗೆ 2,64,600 ರೂ.ಗಳ ಸವಲತ್ತು ವಿತರಣೆ, ಶೇ.5 ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿ 688 ಮಂದಿಗೆ ಒಟ್ಟು 45,05,521 ರೂ. ಮೌಲ್ಯದ ವಿವಿಧ ಸಾಧನ, ಸಲಕರಣೆಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಮನಪಾ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ 32 ಪೌರ ಕಾರ್ಮಿಕರಿಗೆ ಹಕ್ಕುಪತ್ರವನ್ನೊಳಗೊಂಡು ಮನೆಯ ಕೀಯನ್ನು ಈ ಸಂದರ್ಭ ಹಸ್ತಾಂತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts