More

    195 ಅಭ್ಯರ್ಥಿಗಳು ಅನುತ್ತೀರ್ಣ ; ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

    ಚಿಕ್ಕಬಳ್ಳಾಪುರ: ಕರೊನಾ ಕಾರಣದಿಂದಾಗಿ ಪರೀಕ್ಷೆ ನಡೆಸದೆ ವಿವಿಧ ಮಾನದಂಡಗಳ ಆಧಾರದಲ್ಲಿ ಗ್ರೇಡ್ ನೀಡಿ ಉತ್ತೀರ್ಣಗೊಳಿಸಿದ್ದರೂ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ತೆಗೆದುಕೊಂಡಿದ್ದ 250 ಮಂದಿ ಪೈಕಿ 195 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

    ಆ.19ರಿಂದ ನಡೆದಿದ್ದ ದ್ವಿತೀಯ ಪಿಯು ಪೂರಕ ಪರೀಕ್ಷೆಗೆ ಹೊಸದಾಗಿ 2, 247 ಖಾಸಗಿ, ಪುನರಾವರ್ತಿತ 1 ಸೇರಿ 250 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, ಹೊಸದಾಗಿ 2,52 ಖಾಸಗಿ, ಪುನರಾವರ್ತಿತ 1 ಸೇರಿ 55 ಮಂದಿ ಉತ್ತೀರ್ಣರಾಗಿದ್ದು, ಉತ್ತೀರ್ಣತೆ ಪ್ರಮಾಣ ಮಾತ್ರ ಶೇ.22 ರಷ್ಟಾಗಿದೆ. ಬಹುತೇಕ ಖಾಸಗಿ ಅಭ್ಯರ್ಥಿಗಳು ಅನುತ್ತೀರ್ಣರಾಗಿರುವುದು ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ.

    ಕರೊನಾ ಎರಡನೇ ಅಲೆಯ ತೀವ್ರತೆ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಅಂತಿಮ ಪರೀಕ್ಷೆ ನಡೆಸದೆ ಎಸ್ಸೆಸ್ಸೆಲ್ಸಿ, ಪ್ರಥಮ ಪಿಯು ಮತ್ತು ದ್ವಿತೀಯ ಪಿಯು ತರಗತಿ ಹಂತದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಫಲಿತಾಂಶವನ್ನು ಶಿಕ್ಷಣ ಇಲಾಖೆ ಘೋಷಿಸಿತ್ತು. ಅದರಂತೆ ಜಿಲ್ಲೆಯಲ್ಲಿ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 13,389 ಮಂದಿ ಪೈಕಿ 13,388 ಮಂದಿ ಉತ್ತೀರ್ಣರಾಗಿದ್ದು ನೋಂದಾಯಿತ ಹೊಸ ಅಭ್ಯರ್ಥಿಗಳ ಪೈಕಿ ಒಬ್ಬ ಎಲ್ಲ ತರಗತಿಗಳಿಗೂ ಗೈರಾಗಿದ್ದ ಕಾರಣ ಅನುತ್ತೀರ್ಣಗೊಂಡಿದ್ದ.

    ವಿಭಾಗವಾರು ಪರೀಕ್ಷೆಯ ಫಲಿತಾಂಶ: ಪೂರಕ ಪರೀಕ್ಷೆಗೆ ಸಂಬಂಧಿಸಿದಂತೆ ಕಲಾ ವಿಭಾಗದಲ್ಲಿ ನೋಂದಾಯಿತ 69 ಬಾಲಕರು ಮತ್ತು 71 ಬಾಲಕಿಯರ ಪೈಕಿ 12 ಬಾಲಕರು, 21 ಬಾಲಕಿಯರು, ವಾಣಿಜ್ಯ ವಿಭಾಗದಲ್ಲಿ ನೋಂದಣಿಯಾಗಿದ್ದ 77 ಬಾಲಕರು ಮತ್ತು 32 ಬಾಲಕಿಯರಲ್ಲಿ 13 ಬಾಲಕರು, 8 ಬಾಲಕಿಯರು ಹಾಗೂ ವಿಜ್ಞಾನ ವಿಭಾಗದಲ್ಲಿ ನೋಂದಾಯಿತ ಒಬ್ಬ ವಿದ್ಯಾರ್ಥಿನಿ ಉತ್ತೀರ್ಣರಾಗಿದ್ದಾರೆ.

    ಉತ್ತೀರ್ಣತೆಯ ಅವಕಾಶ ವಂಚಿತರು: ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣತೆಯ ಅಂತಿಮ ಪರೀಕ್ಷೆಯಲ್ಲಿ ಶೇ.99.99 ಫಲಿತಾಂಶ ದಕ್ಕಿದ್ದರೆ, ಪೂರಕ ಪರೀಕ್ಷೆಯಲ್ಲಿ ಶೇ.22 ಲಭಿಸಿದೆ. ಗ್ರೇಡ್ ಅಂಕಗಳ ಆಧಾರದಲ್ಲಿ ಉತ್ತೀರ್ಣತೆಯ ಅವಕಾಶ ಲಭಿಸಿದ್ದರೂ ನಿರಾಕರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 195 ಮಂದಿಗೆ ಅನುತ್ತೀರ್ಣತೆಯ ಭಾಗ್ಯ ದೊರೆತಿದೆ.

    ಹೊಸದಾಗಿ ನೋಂದಾಯಿತ ಮತ್ತು ಪುನರಾವರ್ತಿತ ಅಭ್ಯರ್ಥಿಗಳೆಲ್ಲರೂ ಉತ್ತೀರ್ಣರಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳು ಅನುತ್ತೀರ್ಣತೆಯಿಂದ ಫಲಿತಾಂಶ ಕಡಿಮೆಯಾಗಿದೆ. ದ್ವಿತೀಯ ಪಿಯು ಪೂರಕ ಪರೀಕ್ಷೆಯಲ್ಲಿ ಶೇ.22 ಫಲಿತಾಂಶ ಸಿಕ್ಕಿದೆ.
    ಆನಂದ್, ಪಿಯು ಡಿಡಿಪಿಯು ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts