More

    ಚಂಡಮಾರುತ ಎದುರಿಸಿದ ಹಸಿರು ಸಾಗರ ದಂಡೆ

    ಪ್ರಕಾಶ್ ಮಂಜೇಶ್ವರ, ಮಂಗಳೂರು
    ಕರಾವಳಿಯಲ್ಲಿ ವರ್ಷಂಪ್ರತಿ ಕೋಟ್ಯಂತರ ರೂ.ವೆಚ್ಚ ಮಾಡಿ ನಿರ್ಮಿಸಿದ ಸಮುದ್ರ ಗೋಡೆ, ಒಂದೇ ದಿನದಲ್ಲಿ ಸೈಕ್ಲೋನ್ ಅಬ್ಬರಕ್ಕೆ ಧೂಳೀಪಟವಾಗಿದೆ. ಇನ್ನೊಂದೆಡೆ, ಸಮುದ್ರ ತೀರದಲ್ಲಿ ಮರಳನ್ನು ಹಿಡಿದಿಟ್ಟುಕೊಳ್ಳುವ ಗುಣವಿರುವ ಪೊದರು, ಬಳ್ಳಿಗಳಿಂದ ಕೂಡಿದ ಹಸಿರು ದಂಡೆ ಪ್ರದೇಶಗಳು ಸೇಫ್ ಆಗಿವೆ.
    ಮೂರು ದಿನಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಡಲ ತೀರದ ವಿವಿಧೆಡೆ ಸಂದರ್ಶಿಸಿದ ಪರಿಸರ ಇಲಾಖೆ ಪ್ರಾದೇಶಿಕ ನಿರ್ದೇಶಕರ ನೇತೃತ್ವದ ತಜ್ಞರ ತಂಡ ಹಸಿರು ಕವಚದ ದಂಡೆಗಳಿರುವಲ್ಲಿ ಕಡಲ್ಕೊರೆತದ ದುಷ್ಪರಿಣಾಮ ಇಲ್ಲದಿರುವುದನ್ನು ದಾಖಲಿಸಿದೆ.

    ಇಂಜಿನಿಯರಿಂಗ್ ವಿಭಾಗದ ತಜ್ಞರ ಶಿಫಾರಸಿನಂತೆ ನಿರ್ಮಾಣಗೊಂಡ ಸಮುದ್ರ ಗೋಡೆ ಚಂಡಮಾರುತದ ಅಟ್ಟಹಾಸಕ್ಕೆ ಶರಣಾಗಿದ್ದು, ಕಡಲ ತೀರದಲ್ಲಿ ಮರಳು ತಂದು ರಾಶಿ ಹಾಕಿರುವ ಕಡೆ(ಸ್ಯಾಂಡ್ ನರಿಶ್‌ಮೆಂಟ್) ಮತ್ತು ಭೂಭಾಗದಿಂದ ಸಮುದ್ರ ಕಡೆಗೆ ಗೋಡೆಯಂತಹ ರಚನೆಗಳನ್ನು ನಿರ್ಮಿಸಿ ದಡದ ಕಡೆಗೆ ಬರುವ ಸಮುದ್ರದ ಅಲೆಗಳ ವೇಗವನ್ನು ಹಂತಹಂತವಾಗಿ ಕಡಿಮೆಗೊಳಿಸುವ ಗ್ರೋಯಿನ್ ಅಥವಾ ಟಿ ಜಾಯಿಂಟ್ ವಿಧಾನ ಇರುವ ಕಡೆ ಮಾತ್ರ ಕಡಲ ಕಿನಾರೆ ಸುರಕ್ಷಿತವಾಗಿದೆ.

    ಹಸಿರು ಕವಚದ ಭಾಗಗಳು: ಅರಣ್ಯ ಇಲಾಖೆ ಭೂಮಿ ಇರುವ ಮಂಗಳೂರು ತಣ್ಣೀರುಬಾವಿ, ಬೆಂಗ್ರೆ, ನಿಸರ್ಗ ಸಹಜ ಗಿಡ, ಬಳ್ಳಿಗಳು ಇನ್ನೂ ಉಳಿದುಕೊಂಡಿರುವ ಸಸಿಹಿತ್ಲು ಮುಂಡ ಬೀಚ್‌ನ ಪ್ರವೇಶ ದ್ವಾರದ ಸಮೀಪ ಸ್ವಲ್ಪ ಭಾಗ(ಬೀಚ್‌ನ ಕೊನೆಯ ಭಾಗದಲ್ಲಿ ತುಂಬ ಹಾನಿಯಾಗಿದೆ), ಎನ್‌ಐಟಿಕೆ ಸಮೀಪ, ಹೆಜಮಾಡಿ ಹೊಸ ಬಂದರು ಭಾಗ, ಬೀಜಾಡಿ ಕೋಡಿ, ಗೋಪಾಡಿ ಕಡಲ ದಂಡೆಯನ್ನು ಕಾಯುತ್ತಿರುವ ಕೆಲವು ಹಸಿರು ಕವಚದ ಭಾಗಗಳು. ಇಲ್ಲಿ ಚಂಡಮಾರುತದ ಪ್ರಭಾವದಿಂದ ಸಮುದ್ರದ ನೀರು ನುಗ್ಗಿ ಅಪ್ಪಳಿಸಿದರೂ, ದಡದ ಮರಳು ಹೆಚ್ಚಿನ ಪ್ರಮಾಣದಲ್ಲಿ ಸಮುದ್ರ ಸೇರಿಲ್ಲ. ಆದರೆ ಇಂತಹ ಪ್ರದೇಶಗಳು ಹೆಚ್ಚು ಉಳಿದುಕೊಂಡಿಲ್ಲ.

    ದಂಡೆ ಕಾಯಲು ಸಸ್ಯಗಳೇ ಸೂಕ್ತ:ಇಂಜಿನಿಯರಿಂಗ್ ವಿಭಾಗ ಕಡಲ ತೀರದ ರಕ್ಷಣೆ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಉಳ್ಳಾಲ ಸೋಮೇಶ್ವರ, ಬಡಾವಣೆ ಲೇಔಟ್, ಬಟ್ಟಂಪಾಡಿ, ಮುಕ್ಕ, ಕಾಪು, ಮಟ್ಟು, ಉದ್ಯಾವರ ಸಹಿತ ವಿವಿಧೆಡೆ ಅನೇಕ ನಿದರ್ಶನ ದೊರೆಯುತ್ತವೆ. ತಜ್ಞರ ಪ್ರಕಾರ, ಸಮುದ್ರ ತೀರದಲ್ಲಿ ಬೆಳೆಯುವ ಇಪೋಮಿಯಾ(ಬಳ್ಳಿ), ಸೈಪರಸ್, ಲಕ್ಕಿ ಸೊಪ್ಪು, ಕೇದಿಗೆ, ಸ್ಪೈನಿಫೆಕ್ಸ್, ಸ್ಕಾೃವೆಲೆನ್ಸ್ ಮತ್ತಿತರ ಸಸ್ಯಗಳು ಕಡಲ ತೀರದ ದಂಡೆಗಳನ್ನು ಸಮುದ್ರ ಕೊರೆತದಿಂದ ಕಾಯಲು ಹೆಚ್ಚು ಸೂಕ್ತ ಎನಿಸಿದೆ.

    ಮಾನವ ನಿರ್ಮಿತ ಪ್ರಮಾದ: ನಿರಂತರ ಸಾಗರ ತೀರದ ಅತಿಕ್ರಮಣ, ಅವೈಜ್ಞಾನಿಕ ಕಟ್ಟಡ ನಿರ್ಮಾಣ ಮುಂತಾದ ಮಾನವ ನಿರ್ಮಿತ ಪ್ರಮಾದಗಳಿಂದ ಸಾಗರ ತೀರದ ಸರ್ಕಾರಿ ಜಮೀನು ವರ್ಷಂಪ್ರತಿ ಮಾಯವಾಗುತ್ತಲೇ ಇದೆ. ಕಡಲ್ಕೊರೆತ ಬೆನ್ನಲ್ಲೇ ಮಂತ್ರಿಗಳು ಭೇಟಿ ನೀಡುವುದು, ಕೋಟ್ಯಂತರ ರೂ. ವೆಚ್ಚದಲ್ಲಿ ಸಮುದ್ರ ಗೋಡೆ ನಿರ್ಮಿಸುವುದು ಕಳೆದ ಕೆಲವು ದಶಕಗಳಿಂದ ನಡೆದು ಬಂದಿರುವ ಸಂಪ್ರದಾಯ. ಕಡಲಿಗೆ ಹಾಕಿರುವ ಕಲ್ಲಿನ ಸರಿಯಾದ ಲೆಕ್ಕ ಯಾರಲ್ಲೂ ಸಿಗದು.

    ಪ್ರಾಕೃತಿಕ ವಿಕೋಪಗಳಿಂದ ಕಡಲ್ಕೊರೆತ ಮತ್ತು ಇತರ ದುಷ್ಪರಿಣಾಮಗಳನ್ನು ತಡೆಯಲು ಸಮುದ್ರ ತೀರದಲ್ಲಿ ಸಾಗರದಿಂದ ಭೂಮಿಯ ಕಡೆಗೆ ಇರುವ 50ರಿಂದ 100 ಮೀಟರ್ ಸರ್ಕಾರಿ ಜಾಗದ ಅತಿಕ್ರಮಣಕ್ಕೆ ಅವಕಾಶ ನೀಡಬಾರದು. ಅಲ್ಲಿ ಮರಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಬೆಳೆಯುವ ಗಿಡ, ಬಳ್ಳಿಗಳನ್ನು ಬೆಳೆಸಬೇಕು. ನಾವು ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿಯನ್ನು ಇಲಾಖೆ ಮೇಲಧಿಕಾರಿಗಳಿಗೆ ಸಲ್ಲಿಸಲಿದ್ದೇವೆ.
    ಡಾ.ದಿನೇಶ್ ಕುಮಾರ್ ಪ್ರಾದೇಶಿಕ ನಿರ್ದೇಶಕರು, ಪರಿಸರ ಇಲಾಖೆ, ಮಂಗಳೂರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts