More

    ಪರಿಶಿಷ್ಟರ ಕಲ್ಯಾಣ ಗ್ಯಾರಂಟಿ: ಗ್ಯಾರಂಟಿ ಯೋಜನೆಗಳಿಗೆ 11000 ಕೋಟಿ ರೂ. ಎಸ್​ಸಿಎಸ್​ಪಿ ಟಿಎಸ್​ಪಿ ಅನುದಾನ

    ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆಯಡಿ ಮೀಸಲಿರಿಸಿದ ಅನುದಾನದಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ಒಟ್ಟು 11 ಸಾವಿರ ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಒಪ್ಪಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಎಸ್​ಸಿಎಸ್​ಪಿ, ಟಿಎಸ್​ಪಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

    ಎಸ್​ಸಿಎಸ್​ಪಿ, ಟಿಎಸ್​ಪಿ ಅನುದಾನವನ್ನು ಗ್ಯಾರಂಟಿಗಳಿಗೆ ಸರ್ಕಾರ ಬಳಸಿಕೊಳ್ಳುತ್ತಿದೆ ಎಂಬ ಬಿಜೆಪಿ ಆರೋಪವನ್ನು ಮೊದಲಿಗೆ ಅವರು ತಳ್ಳಿಹಾಕಿದರು. ಆದರೆ, 2023-24ನೇ ಸಾಲಿನ ಪರಿಷ್ಕೃತ ಬಜೆಟ್​ನ ಲಿಂಕ್ ಡಾಕ್ಯುಮೆಂಟ್​ನಲ್ಲಿ ನಮೂದಾಗಿದ್ದ ಮೊತ್ತದತ್ತ ಪತ್ರಕರ್ತರು ಗಮನ ಸೆಳೆದರು. ಈ ಪ್ರಶ್ನೆಗಳಿಗೆ ಮಹದೇವಪ್ಪ ಉತ್ತರಿಸಿ, ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಗಳಿಗೆ ಈ ಅನುದಾನ ಬಳಕೆಯಾಗಲಿದೆ, ಅನ್ಯ ಉದ್ದೇಶಕ್ಕೆ ಬಳಕೆ ಇಲ್ಲ ಎಂದು ಸಮರ್ಥಿಸಿಕೊಂಡರು.

    ಎರಡೂ ಸಮುದಾಯಗಳ ಉಪಯೋಜನೆಯಡಿ ಒದಗಿಸಿದ ಅನುದಾನದಲ್ಲಿ ಒಟ್ಟು 11 ಸಾವಿರ ಕೋಟಿ ರೂ. ಹಂಚಿಕೆಯಾಗಿದೆ. ಗ್ಯಾರಂಟಿಗಳಿಗೆ ವಿನಿಯೋಗಿಸಿದ ನಂತರ ಇಲಾಖಾವಾರು ಖರ್ಚು ನಿಚ್ಚಳವಾಗಲಿದ್ದು, ಒಟ್ಟಾರೆ ಶೇ. 24.10ರ ಪ್ರಮಾಣ ಮೀರುವಂತಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಹೊಣೆ ಹೊತ್ತ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.

    ಅಧ್ಯಯನ, ಮೌಲ್ಯಮಾಪನ: ಉಪಯೋಜನೆಯಡಿ ಒಟ್ಟು 34,293.69 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಸಭೆ ಅಸ್ತು ಎಂದಿದೆ. ಈ ಪೈಕಿ ಪರಿಶಿಷ್ಟ ಜಾತಿಗೆ 24,333 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡಗಳಿಗೆ 9,961 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಶಾಸನಬದ್ಧ ಅನುದಾನ ಬಳಸಿಕೊಳ್ಳಲು ತ್ವರಿತವಾಗಿ ಕಾರ್ಯಕ್ರಮ ರೂಪಿಸಿ, ಅನುಷ್ಠಾನಕ್ಕೆ ತರಲು ಜವಾಬ್ದಾರಿಯುತ 40 ಇಲಾಖೆಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮಹದೇವಪ್ಪ ತಿಳಿಸಿದರು.

    ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಮುಂದಿನ ಐದು ವರ್ಷಗಳಲ್ಲಿ ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಸೇರಬೇಕು. ಈ ಕಾರಣ ಅನುದಾನ ಬಳಸಿದ ಬಗ್ಗೆ ಅಧ್ಯಯನ, ಫಲಾನುಭವಿಗಳ ಸ್ಥಿತಿಗತಿ ಬದಲಾವಣೆ ಬಗ್ಗೆ ಮೌಲ್ಯಮಾಪನ ವರದಿ ಸಲ್ಲಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.

    ಕಾಯ್ದೆ ಜಾರಿಯಾಗಿ 10 ವರ್ಷಗಳಾಗಿವೆ. ಯೋಜನೆಯ ಫಲ ಮತ್ತು ಪರಿಣಾಮಗಳ ಕುರಿತು 22 ಯೋಜನೆಗಳ ಅಧ್ಯಯನ ಮತ್ತು ಮೌಲ್ಯಮಾಪನ ನಡೆಸಿ ಸಾಮಾಜಿಕ, ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ಮಧ್ಯಂತರ ವರದಿ ಸಲ್ಲಿಸಿದೆ. ಅಂತಿಮ ವರದಿ ಪಡೆಯಲು ಗಂಭೀರ ಪ್ರಯತ್ನ ನಡೆದಿದೆ. ಸಮಗ್ರ ಅಧ್ಯಯನ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಯುಜಿಸಿ ಮಾಜಿ ಅಧ್ಯಕ್ಷ ಪ್ರೊ.ಸುಖದೇವ್ ಥೋರಟ್ ಅವರ ನೆರವು ಪಡೆಯುವ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ವರದಿ ಸಲ್ಲಿಕೆಗೆ ನಿರ್ದಿಷ್ಟ ಕಾಲಮಿತಿ ವಿಧಿಸಲು ಆಲೋಚಿಸಿಲ್ಲ ಎಂದು ಮಹದೇವಪ್ಪ ಹೇಳಿದರು.

    ಹೊಸ ರೂಪ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಬಲವರ್ಧಿಸಿ ಹೊಸ ರೂಪ ನೀಡಲು ತೀರ್ವನಿಸಿದ್ದು, ಕಾರ್ಯಕ್ಷಮತೆ ಹೆಚ್ಚಳ, ತ್ವರಿತ ಸ್ಪಂದನೆ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಆದ್ಯತೆ ನೀಡುವುದು ಇದರ ಗುರಿಯಾಗಿದೆ ಎಂದರು. ಮೂರು ತಿಂಗಳಿಗೊಮ್ಮೆ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ಹಾಗೂ ಆರು ತಿಂಗಳಿಗೊಮ್ಮೆ ವಿಚಕ್ಷಣಾದಳದ ಸಭೆ ನಡೆಸಲಾಗುತ್ತದೆ ಎಂದು ಮಹದೇವಪ್ಪ ತಿಳಿಸಿದರು.

    36 ದೂರುಗಳ ವಿಚಾರಣೆ: ಎಸ್​ಸಿ, ಎಸ್​ಟಿ ಉಪಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿದ ಬಗ್ಗೆ 36 ದೂರುಗಳು ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಲೋಪ ದೃಢಪಟ್ಟರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಡೀಮ್್ಡ ಎಕ್ಸ್​ಪೆಂಡಿಚರ್ ಹೆಸರಿನಲ್ಲಿ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆಗೆ ಅವಕಾಶ ನೀಡಿದ್ದ ಕಾಯ್ದೆಯ 7ಡಿ ಉಪಬಂಧವನ್ನು ಸರ್ಕಾರ ತೆಗೆದು ಹಾಕಿದೆ ಎಂದು ಮಹದೇವಪ್ಪ ಹೇಳಿದರು.

    ಸಂವಿಧಾನದ ಗಂಭೀರ ವಿದ್ಯಾರ್ಥಿ: ಸಿಎಂ ಸಿದ್ದರಾಮಯ್ಯ ಅವರನ್ನು ಸಂವಿಧಾನದ ಗಂಭೀರ ವಿದ್ಯಾರ್ಥಿ ಎಂದು ಸಚಿವ ಮಹದೇವಪ್ಪ ಗುಣಗಾನ ಮಾಡಿದರು. ಜತೆಗೆ ಎಸ್​ಸಿ, ಎಸ್​ಟಿ ಉಪಯೋಜನೆ ಕಾಯ್ದೆ ಜಾರಿಗೊಳಿಸಿದ್ದನ್ನು ಉಲ್ಲೇಖಿಸಿ ತಮ್ಮ ಮಾತು ಸಮರ್ಥಿಸಿಕೊಂಡರು.

    ಪರಿಶಿಷ್ಟರ ಕಲ್ಯಾಣ ಗ್ಯಾರಂಟಿ: ಗ್ಯಾರಂಟಿ ಯೋಜನೆಗಳಿಗೆ 11000 ಕೋಟಿ ರೂ. ಎಸ್​ಸಿಎಸ್​ಪಿ ಟಿಎಸ್​ಪಿ ಅನುದಾನ34,293 ಕೋಟಿ ರೂ. ಕ್ರಿಯಾ ಯೋಜನೆ

    ಶೋಷಿತ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನಿಗದಿಯಾಗುತ್ತದೆ. ಈ ಕಾಯ್ದೆ ಗಂಭೀರವಾಗಿದ್ದು, ನಿರ್ಲಕ್ಷಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್​ಸಿ, ಎಸ್​ಟಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 2023-24ನೇ ಸಾಲಿನ 34,293.69 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಸಮ್ಮತಿಸಿದರು. ಯೋಜನಾಗಾತ್ರದಲ್ಲಿ ಶೇ.24.10 ಅನುದಾನ ಒದಗಿಸಿದ್ದು, ಕಾಲಮಿತಿಯಲ್ಲಿ ಸಮರ್ಪಕವಾಗಿ ವಿನಿಯೋಗಿಸುವುದು ಅಷ್ಟೇ ಮುಖ್ಯವಾಗಿದೆ. ಕಾಯ್ದೆ ಏನು ಹೇಳುತ್ತದೆ ಎಂಬುದನ್ನು ಅಧಿಕಾರಿಗಳು ಅರಿತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.

    ಮುಂದುವರಿದ ಯೋಜನೆಗಳಿಗೆ 1,897 ಕೋಟಿ ರೂ. ನಿಗದಿಯಾಗಿದ್ದರೆ, ಮುಂದಿನ 8 ತಿಂಗಳಲ್ಲಿ ಕ್ರಿಯಾ ಯೋಜನೆ ಅನ್ವಯ ಒಟ್ಟು 34,293.69 ಕೋಟಿ ರೂ. ವೆಚ್ಚದ ಗುರಿ ಹೊಂದಲಾಗಿದೆ.

    ಮುಖ್ಯಾಂಶಗಳು

    • ಎಸ್​ಸಿಎಸ್​ಪಿ, ಟಿಎಸ್​ಪಿಗೆ 2023-24ನೇ ಸಾಲಿನಲ್ಲಿ ಒಟ್ಟು 34,293.69 ಕೋಟಿ ರೂ. ಮೀಸಲು
    • ಇಲಾಖೆಗಳು ರೂಪಿಸಿದ ಕಾರ್ಯಕ್ರಮಗಳ ವಿವರವಾದ ಕರಡು ಕ್ರಿಯಾ ಯೋಜನೆಯ ಚರ್ಚೆ, ಅನುಮೋದನೆ
    • ಇಲಾಖೆಯಲ್ಲಿ ಅನುದಾನ ಉಳಿದರೆ, ಅದರ ಮರು ಹಂಚಿಕೆಗೆ 3 ತಿಂಗಳಿಗೊಮ್ಮೆ ಸಭೆ ನಡೆಸಿ ತೀರ್ಮಾನ
    • ಸಮಾಜ ಕಲ್ಯಾಣ ಇಲಾಖೆಯಲ್ಲಿ ಯೋಜನಾ ಕೋಶ ರಚನೆ, ಇಲಾಖೆ ಹಾಸ್ಟೆಲ್​ಗಳ ನಿರ್ವಹಣೆಗೆ ರೇಣುಕಾ ಚಿದಂಬರಂ ಸಮಿತಿ ವರದಿ ಪರಿಗಣನೆಗೆ ಸಲಹೆ
    • ಹಳ್ಳಿಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ವಸತಿ ಶಾಲೆಗಳಲ್ಲಿ ಸ್ಥಳೀಯ ಶೇ.60, ಹೊರಗಿನ ವಿದ್ಯಾರ್ಥಿಗಳಿಗೆ ಶೇ.40ರಷ್ಟು ಸೀಟು ಹಂಚಿಕೆ
    • ದಲಿತ ಮಕ್ಕಳ ಡ್ರಾಪ್​ಔಟ್​ಗೆ ಕಡಿವಾಣ ಹಾಕಲು ಅಗತ್ಯವಿರುವ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಕ್ರಮ, ಕಟ್ಟುನಿಟ್ಟಾಗಿ ಪಾಲನೆ ಅಧಿಕಾರಿಗಳ ಹೊಣೆ
    • ದಲಿತರಿಗೆ ರುದ್ರಭೂಮಿ ಒದಗಿಸುವುದು. ಹಾಸ್ಟೆಲ್, ವಸತಿ ಶಾಲೆಗಳಿಗೆ ಆದ್ಯತೆ ಮೇರೆಗೆ ಜಾಗ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಮತ್ತೊಂದು ಸಹಕಾರಿ ಸಂಘದಲ್ಲಿ ಅವ್ಯವಹಾರ?; ಅಧ್ಯಕ್ಷ-ಸದಸ್ಯರಿಂದಲೇ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts