More

    ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ

    ಬೆಳಗಾವಿ: ಜಿಲ್ಲೆಯ ಪ್ರತಿ ಶಾಲೆಗಳಿಗೂ ಕಡ್ಡಾಯವಾಗಿ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಮಾಡಬೇಕು. ಅಂಗನವಾಡಿ ಕೇಂದ್ರಕ್ಕೂ ವಿದ್ಯುತ್ ಸಂಪರ್ಕ ಒದಗಿಸಬೇಕು. ಇದಕ್ಕೆ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಶಾಲೆ ಹಾಗೂ ಅಂಗನವಾಡಿಗಳಿಗೆ ಗ್ರಾಪಂನಿಂದ ಅಗತ್ಯ ಸೌಲಭ್ಯ ಕಲ್ಪಿಸಲು ಪಿಡಿಒಗಳಿಗೆ ಸೂಚನೆ ನೀಡಲಾಗುವುದು ಎಂದರು. ದೂರದರ್ಶನದ ಮೂಲಕ ಶಾಲಾ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿರುವುದರಿಂದ ಯಾವ ಮನೆಯಲ್ಲಿ ಟಿವಿ ಇರುವುದಿಲ್ಲವೋ ಅಂತಹ ಮಕ್ಕಳಿಗೆ ಪಾಠ ಕೇಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಟಿವಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಅನುದಾನ ಲಭ್ಯವಿರುವ ಕಡೆಗಳಲ್ಲಿ ಸಾಧ್ಯವಾದಷ್ಟು ದೊಡ್ಡ ಪರದೆಯ ಟಿವಿ ಖರೀದಿಸಬಹುದು. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಸೂಚನೆ ನೀಡಿದರು.

    ಇಂಗು ಗುಂಡಿ ನಿರ್ಮಿಸಿ: ಕುಡಿಯುವ ನೀರಿನ ಮೂಲಗಳ(ಕೊಳವೆಬಾವಿ) ಸುತ್ತ ಇಂಗು ಗುಂಡಿ ನಿರ್ಮಿಸಬೇಕು. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಿಸಬಹುದು ಎಂದರು. ನರೇಗಾದಡಿ ಜಿಲ್ಲೆಯ ಪ್ರಗತಿ ತೃಪ್ತಿದಾಯಕವಾಗಿದೆ. ನಿಪ್ಪಾಣಿ, ಬೆಳಗಾವಿ, ಕಾಗವಾಡ ತಾಲೂಕಿನಲ್ಲಿ ವೈಯಕ್ತಿಕ ಸೌಲಭ್ಯ ಒದಗಿಸುವ ಮೂಲಕ ಪ್ರಗತಿ ಸಾಧಿಸಿ. ಹಾಗೂ ನರೇಗಾದಡಿ ಕೂಲಿ ಪಾವತಿ ನೂರಕ್ಕೆ ನೂರರಷ್ಟು ಸಾಧನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    20 ಕೋಟಿ ರೂ. ಪರಿಹಾರ ಜಮೆ: ಜಿಲ್ಲೆಯಲ್ಲಿ 31 ಸಾವಿರ ರೈತರಿಗೆ ಸುಮಾರು 20 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಅತಿವೃಷ್ಟಿ ಹಾನಿ ಸುಧಾರಣೆಗೆ ಇದುವರೆಗೆ ಅನುದಾನ ಬಂದಿಲ್ಲ. ಅನುದಾನ ಬಂದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

    ಸಾಲ-ಸೌಲಭ್ಯ ಒದಗಿಸುವ ಉದ್ಯೋಗಿನಿ, ದೇವದಾಸಿ ಪುನರ್ವಸತಿ ಯೋಜನೆ ಮತ್ತಿತರ ಯೋಜನೆಗಳ ಫಲಾನುಭವಿಗಳ ಆಯ್ಕೆ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಎಸಿ ಯುಕೇಶ್ ಕುಮಾರ್, ಬೈಲಹೊಂಗಲ ಎಸಿ ಶಿವಾನಂದ ಭಜಂತ್ರಿ, ಬೆಳಗಾವಿ ಎಸಿ ಅಶೋಕ ತೇಲಿ ಮತ್ತಿತರಉ ಉಪಸ್ಥಿತರಿದ್ದರು.

    ಗೊಬ್ಬರ ಪೂರೈಕೆಗಿಲ್ಲ ಸಮಸ್ಯೆ

    ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 20 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಪೂರೈಕೆಯಾಗಿದೆ. 15 ಸಾವಿರ ಕ್ವಿಂಟಾಲ್ ಬೀಜ ವಿತರಣೆ ಮಾಡಲಾಗಿದೆ. 5 ಸಾವಿರ ಕ್ವಿಂಟಾಲ್ ಬೀಜ ದಾಸ್ತಾನಿದೆ. 27 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಸಂಗ್ರಹವಿದ್ದು, ಯಾವುದೇ ರೀತಿಯ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

    ಶಾಲೆ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲರಿಗೂ ಪಠ್ಯ-ಪುಸ್ತಕ ತಲುಪಿಸಲಾಗಿದೆ. ಶಿಕ್ಷಕರು ಕೂಡ ಆಕಸ್ಮಿಕವಾಗಿ ಮನೆಗೆ ಭೇಟಿ ನೀಡಿ, ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
    | ಗಜಾನನ ಮನ್ನಿಕೇರಿ ಚಿಕ್ಕೋಡಿ ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts