More

    ಗ್ಯಾರಂಟಿಗಳಿಂದ ಬಡವರು, ಮಹಿಳೆಯರಿಗೆ ಬಲ

    ಕೊಪ್ಪ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದು ಆರೇ ತಿಂಗಳಿನಲ್ಲಿ ಈಡೇರಿಸಿದೆ. ಈ ಮೂಲಕ ಬಡವರಿಗೆ, ಮಹಿಳೆಯರಿಗೆ ಬಲ ನೀಡಿದೆ ಎಂದು ಶಾಸಕ, ಕೆಆರ್‌ಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

    ಪುರಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಜಗತ್ತಿನ ಚುನಾವಣೆಗೂ ಮೊದಲು ನೀಡಿದ ಭರವಸೆ ಈಡೇರಿಸಿದ ಸರ್ಕಾರ ನಮ್ಮದು. ಈ ಮೂಲಕ ಅರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಹಾಗೂ ಒತ್ತಡದಲ್ಲಿರುವ ಗೃಹಿಣಿಯರ ಕೈ ಬಲಪಡಿಸಲಾಗಿದೆ ಎಂದು ತಿಳಿಸಿದರು.
    ಗೃಹಜ್ಯೋತಿ ಯೋಜನೆಯಲ್ಲಿ ತಾಲೂಕಿನಲ್ಲಿ ಸುಮಾರು 22 ಸಾವಿರ ಮನೆಗಳು, ಗೃಹಲಕ್ಷ್ಮಿ, ಯೋಜನೆಯಲ್ಲಿ 16,539 ಮಹಿಳೆಯರು, ಸುಮಾರು 16,858 ಮನೆಗಳಿಗೆ ಅನ್ನಭಾಗ್ಯದ ಅಕ್ಕಿ ನೀಡಲಾಗುತ್ತಿದೆ. ಯುವನಿಧಿಗೆ 6009 ಮಂದಿ ಅರ್ಜಿ ಸಲ್ಲಿಸಿದ್ದಾರೆ. ತಾಲೂಕಿನಲ್ಲಿ ಇಷ್ಟು ಜನರಿಗೆ ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಂದ ಲಾಭವಾಗಿದೆ. ಇದರಿಂದ ಇವರು ಸ್ವಾವಲಂಬಿಗಳಾಗಲು ಅನುಕೂಲ ಎಂದು ಅಭಿಪ್ರಾಯಪಟ್ಟರು.
    ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ ಸರ್ಕಾರದಿಂದ ಕೋಟಿಗಟ್ಟಲೇ ಅನುದಾನಗಳನ್ನು ತಂದು ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಆರ್‌ಡಿಎಲ್ನಿಂದ 1 ಕೋಟಿ ರೂ. ಅನುದಾನದಲ್ಲಿ ಪ್ರಥಮದರ್ಜೆ ಕಾಲೇಜಿನ ಒಳಾಂಗಣ ಕ್ರೀಡಾಂಗಣಕ್ಕೆ ಹಣ ಬಿಡುಗಡೆಯಾಗಿದೆ. ತಾಲೂಕು ಆಡಳಿತ ಸೌಧದ ಉಳಿಕೆ ಕೆಲಸಕ್ಕೆ 2.55 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
    ಅರಣ್ಯ ಇಲಾಖೆಯ ಸಮಸ್ಯೆಯಿಂದ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅರಣ್ಯ, ಕಂದಾಯ ಇಲಾಖೆಗಳ ಜಂಟಿ ಸರ್ವೇಗೆ ಸರ್ಕಾರ ಆದೇಶ ಮಾಡಿದೆ. ಸರ್ವೇ ಕಾರ್ಯ ಆರಂಭವಾಗಿದೆ. ಕಂದಾಯ ಭೂಮಿಯಲ್ಲಿ ವಾಸಿಸುವ ಹಾಗೂ ಕೃಷಿ ಕಾರ್ಯಗಳನ್ನು ನಡೆಸುತ್ತಿರುವವರಿಗೆ ಹಕ್ಕುಪತ್ರವನ್ನು ಜಂಟಿ ಸರ್ವೇ ನಂತರ ವಿತರಿಸಲಾಗುವುದು.
    ತಾಪಂ ಇಒ ನವೀನ್‌ಕುಮಾರ್ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನದ ನಂತರ ಫಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಂಡಿದೆ. ಯೋಜನೆಗಳಿಂದ ಸಮಾನತೆ ಸಾರುವ ಕೆಲಸವಾಗಿದೆ ಎಂದು ಹೇಳಿದರು.
    ತಹಸೀಲ್ದಾರ್ ಮಂಜುಳಾ, ತಾಪಂ ಆಡಳಿತಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ, ಬಿಇಒ ಜ್ಯೋತಿ, ಪಪಂ ಸಿಇಒ ಚಂದ್ರಕಾಂತ್, ವಿವಿಧ ಗ್ರಾಪಂ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts