More

    ಮೇ 16ರಂದು ಶಾಲೆಗಳು ಪುನಾರಂಭ; 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ

    ಬೆಂಗಳೂರು: ಶಿಕ್ಷಣ ಇಲಾಖೆ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೇ 16ರಂದು ಶಾಲೆಗಳು ಪುನಾರಂಭವಾಗಲಿವೆ.

    ಈ ವರ್ಷ 60 ಸರ್ಕಾರಿ ರಜಾ ದಿನಗಳಿದ್ದು, 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ದಸರಾಗೆ 14 ದಿನ ರಜೆ ಘೊಷಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ 10 ದಿನ, ಪರೀಕ್ಷೆ ಮತ್ತು ಸಿಸಿಇ ಮೌಲ್ಯಾಂಕನ ವಿಶ್ಲೇಷಣೆಗೆ 12 ದಿನ ನೀಡಲಾಗಿದ್ದು, ಪ್ರಸಕ್ತ ವರ್ಷದ ಬೋಧನಾ ಕಲಿಕೆ ಪ್ರಕ್ರಿಯೆ 228 ದಿನ ಇರಲಿದೆ. ಕರೊನಾ ಕಾರಣದಿಂದ 3 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಆಗಿರಲಿಲ್ಲ.

    ಶಾಲಾ ಕರ್ತವ್ಯದ ಮೊದಲನೇ ಅವಧಿ ಮೇ 16ರಿಂದ ಅ.2ರವರೆಗೆ ಇರಲಿದೆ. 2ನೇ ಅವಧಿ ಅ.17ರಿಂದ 2023ರ ಏ. 10ರವರೆಗೆ ಇರಲಿದೆ. ಅ.3ರಿಂದ 16ರವರೆಗೆ ದಸರಾ ರಜೆ ಇರಲಿದ್ದು, ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ.  

    ನಿಬಂಧನೆಗಳು: ಮಕ್ಕಳ ಶಾಲಾ ಪ್ರವೇಶಾತಿಯನ್ನು ಮೇ 16ಕ್ಕೆ ಆರಂಭಿಸಿ, ಜು.31ರೊಳಗೆ ಮುಕ್ತಾಯ ಮಾಡಬೇಕು. ಭೌತಿಕವಾಗಿ ಪ್ರಾರಂಭಿಸಲು ಪರಿಸ್ಥಿತಿ ಸಹಕಾರಿಯಾಗದಿದ್ದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ ಆಯೋಜಿಸಬೇಕು. ಮುಷ್ಕರ ಇನ್ನಿತರ ಅನಿರೀಕ್ಷಿತ ಕಾರಣಗಳಿಂದಾಗಿ ಶಾಲೆಗಳಿಗೆ ರಜೆ ಘೋಷಣೆಯಾದಲ್ಲಿ, ಆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ನಡೆಸಲಾಗುತ್ತದೆ. 

    ಆ ಮೂಲಕ ನಿಗದಿಪಡಿಸಿದ ಶಾಲಾ ಕರ್ತವ್ಯದ ದಿನಗಳು ಕಡಿಮೆಯಾಗದಂತೆ ಸರಿದೂಗಿಸಿಕೊಳ್ಳಲು ಆಯಾ ಜಿಲ್ಲಾ ಉಪನಿರ್ದೇಶಕರು ಕ್ರಮವಹಿಸಬೇಕು. ಜತೆಗೆ, ಸಾವಿತ್ರಿಬಾಯಿ ಫುಲೆ, ವಿವೇಕಾನಂದ ಜಯಂತಿ, ಕನಕದಾಸ ಜಯಂತಿ ಸೇರಿ ವಿವಿಧ ದಾರ್ಶನಿಕರ ಜಯಂತಿ ಆಚರಣೆಗೆ ಆದೇಶ ನೀಡಲಾಗಿದೆ.

    ಪರಿಷ್ಕರಿಸಲು ಒತ್ತಾಯ: ಅಕ್ಟೋಬರ್ ಅವಧಿಯಲ್ಲಿ 22 ದಿನ ಬೋಧನೆ ಮಾಡಬೇಕು, ಮಧ್ಯವಾರ್ಷಿಕ ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿದೆ. ಆದರೆ, ದಸರಾ ಮತ್ತು ದೀಪಾವಳಿ ರಜೆಯೇ 16 ದಿನಗಳು ಇರಲಿದ್ದು, ಎಲ್ಲಿಂದ ಬೋಧನೆ ಮಾಡಲು ಸಾಧ್ಯವೆಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪ್ರಶ್ನಿಸಿವೆ. ಶಿಕ್ಷಣ ಇಲಾಖೆ ವೇಳಾಪಟ್ಟಿ ರೂಪಿಸುವಾಗ ಎಚ್ಚರಿಕೆ ವಹಿಸಬೇಕು. ಅವರೇ ರಜೆ ನೀಡಿ, ಪಾಠವನ್ನೂ ಮಾಡಿ ಎಂದರೆ, ಹೇಗೆ ಮಾಡಲು ಸಾಧ್ಯ? ತಕ್ಷಣ ಪರಿಷ್ಕೃ ತ ವೇಳಾಪಟ್ಟಿ ರೂಪಿಸಬೇಕೆಂದು ಕ್ಯಾಮ್್ಸ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಗ್ರಹಿಸಿದ್ದಾರೆ.

    ಗರಿಗೆದರಿದ ಎಂಎಲ್‌ಸಿ ಚುನಾವಣೆ; ಮೂರು ಜಿಲ್ಲೆಗಳಲ್ಲಿ ರಂಗೇರಿದ ರಾಜಕೀಯ ಕಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts