More

    ಗಡಿಯಲ್ಲಿ ಕನಿಷ್ಠ, ಉಳಿದೆಡೆ ಗರಿಷ್ಠ ಹಾಜರಾತಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ 6ನೇ ತರಗತಿಯಿಂದ 8ರವರೆಗಿನ ಮಕ್ಕಳಿಗೂ ದೈನಂದಿನ ತರಗತಿ ಆರಂಭವಾಗಿದೆ. ಆದರೆ ಗಡಿಭಾಗ ಹೊರತುಪಡಿಸಿ ಉಳಿದೆಡೆ ಗರಿಷ್ಠ ಹಾಜರಾತಿ ದಾಖಲಾಗಿದೆ. ಕೇರಳದ ಕಾಸರಗೋಡು ಗಡಿಗೆ ಹೊಂದಿಕೊಂಡಿರುವ ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕಿನ 25ರಷ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ವಿದಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಈ ಶಾಲೆಗಳಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಇಡೀ ದಿನ ತರಗತಿ ನಡೆದಿದ್ದು, 6 ಮತ್ತು 7ನೇ ತರಗತಿಗೆ ವಿದ್ಯಾಗಮವನ್ನೇ ಮುಂದುವರಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ ಉಳಿದ ಶಾಲೆಗಳಲ್ಲಿ ಈಗಾಲೇ ವಿದ್ಯಾಗಮ ತರಗತಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳೆಲ್ಲ ದೈನಂದಿನ ತರಗತಿಗೆ ಬಂದಿದ್ದಾರೆ.

    ತೀವ್ರ ನಿಗಾ: ಗಡಿ ಶಾಲೆಗಳಿಗೆ ಗಡಿಯಾಚೆಯ ಕಾಸರಗೋಡು ಜಿಲ್ಲೆಯ ಒಂದೆರಡು ಕಿ.ಮೀ ವ್ಯಾಪ್ತಿಯಿಂದ ಮಾತ್ರ ಮಕ್ಕಳು ಬರುವುದರಿಂದ ಸಮಸ್ಯೆಯಿಲ್ಲ. ಆದರೂ ಗಡಿ ಭಾಗದಲ್ಲಿ ತೀವ್ರ ನಿಗಾ ವಹಿಸಲಾಗಿತ್ತು. ಮಕ್ಕಳನ್ನು ತಪಾಸಣೆ ನಡೆಸಿಯೇ ಶಾಲೆಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಈಗಾಗಲೇ ವಿದ್ಯಾಗಮ ತರಗತಿಯಲ್ಲಿ ಭಾಗವಹಿಸುತ್ತಿದ್ದುದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಇರಲಿಲ್ಲ. ಜಿಲ್ಲಾಡಳಿತದ ನಿರ್ದೇಶನ ನೀಡಿದರೆ ಮುಂದಿನ ದಿನಗಳಲ್ಲಿ ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳಿಗೂ ದೈನಂದಿನ ತರಗತಿ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    6ನೇ ತರಗತಿ ಶೇ.86 ಹಾಜರಿ
    ಉಡುಪಿ: ಕೋವಿಡ್ ಲಾಕ್‌ಡೌನ್ ಬಳಿಕ ಜಿಲ್ಲೆಯಾದ್ಯಂತ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. 15,717 ಮಂದಿ ವಿದ್ಯಾರ್ಥಿಗಳ ಪೈಕಿ 11,683 ಮಂದಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದರು. ಒಟ್ಟು ಹಾಜರಾತಿ ಶೇ.86 ಇದ್ದು, ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.

    50 ಶಾಲೆಗಳಲ್ಲಿ ವಿದ್ಯಾಗಮವಿಲ್ಲ: ಕೇರಳ ಭಾಗದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದ 50 ಶಾಲೆಗಳಲ್ಲಿ ರೆಗ್ಯುಲರ್ ತರಗತಿಗಳು ಇರುವುದಿಲ್ಲ. ಬೆಳಗ್ಗೆ 9ರಿಂದ 12ಗಂಟೆಯವರಿಗೆ ವಿದ್ಯಾಗಮ ನಡೆಸಲಾಗುವುದು. ಆದರೆ ರೆಗ್ಯುಲರ್ ತರಗತಿಗಳನ್ನು ಆರಂಭಿಸುವಂತೆ ಪಾಲಕರು ಹಾಗೂ ಎಸ್‌ಡಿಎಂಸಿಗಳಿಂದ ಬೇಡಿಕೆ ವ್ಯಕ್ತವಾಗಿದೆ ಎಂದು ದ.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ತಿಳಿಸಿದರು. ಜಿಲ್ಲೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.75ರಷ್ಟಿದ್ದು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts