More

    ಕೇಳಿಸದ ಮಕ್ಕಳ ಕಲರವ

    ಭರತ್ ಶೆಟ್ಟಿಗಾರ್ ಮಂಗಳೂರು

    ಜೂನ್ 1 ಬಂತೆಂದರೆ ಪ್ರತಿ ವರ್ಷ ಒಂದು ರೀತಿಯ ಸಂಭ್ರಮದ ವಾತಾರಣ ಕಂಡುಬರುತ್ತದೆ. ಒಂದೆಡೆ ಧೋ ಎಂದು ಸುರಿಯುವ ಮಳೆ, ಇನ್ನೊಂದೆಡೆ ಮಳೆಯ ನಡುವೆಯೇ ಹೊಸ ಯೂನಿಫಾರಂ, ಬ್ಯಾಗ್ ಹಾಕಿಕೊಂಡು ಕೊಡೆ ಹಿಡಿದರೂ ಅರ್ಧ ಒದ್ದೆಯಾಗುತ್ತಾ ಶಾಲೆಗೆ ಹೋಗುವ ಮಕ್ಕಳು. ಅದರಲ್ಲೂ ಕೆಲವರು ಅಳುತ್ತಾ ಸಾಗುವುದು, ಪಾಲಕರು ಸಂತೈಸುವುದು-ಗದರುವುದು….

    ಆದರೆ ಈ ಬಾರಿ ಯಾವ ರಸ್ತೆ, ಶಾಲೆ ನೋಡಿದರೂ ಇಂತಹ ಯಾವುದೇ ದೃಶ್ಯಗಳು ಕಾಣಿಸಲೇ ಇಲ್ಲ. ಶಾಲೆಗಳಂತೂ ಬಾಗಿಲು ಮುಚ್ಚಿ ಬಿಕೋ ಅನ್ನುತ್ತಿತ್ತು. ಕರೊನಾ ಮಹಾಮಾರಿ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದು, ಶಾಲೆಗಳು ಯಾವಾಗ ಆರಂಭ ಎಂದು ಇನ್ನೂ ನಿರ್ಧಾರವಾಗಿಲ್ಲ. ಶಿಕ್ಷಣ ಇಲಾಖೆಗೆ ಒಂದು ಸಂಭ್ರಮದ ದಿನವಾಗಬೇಕಿದ್ದ ಜೂನ್ ತಿಂಗಳ ಮೊದಲ ದಿನ ಈ ಬಾರಿ ಕಳೆಗುಂದಿದೆ. ಮಕ್ಕಳು ಶಾಲೆಗೆ ಕರೆತರುವ ಶಾಲಾರಂಭದಂತಹ ಕಾರ್ಯಕ್ರಮಗಳಿಗೆ ಇನ್ನೂ ಕೆಲವು ತಿಂಗಳು ಕಾಯಬೇಕಿದೆ. ಪರಿಣಾಮ ವಿದ್ಯಾರ್ಥಿಗಳು ಇನ್ನೂ ರಜಾ ಮಜಾದಲ್ಲೇ ಇದ್ದಾರೆ.

    ಶಾಲೆಗಳನ್ನು ಯಾವ ರೀತಿ ಆರಂಭಿಸಬೇಕು, ತರಗತಿಗಳು ಹೇಗಿರಬೇಕು ಎನ್ನುವ ಕುರಿತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಇನ್ನೂ ಬಂದಿಲ್ಲ. ಇನ್ನೊಂದು ವಾರದಲ್ಲಿ ಮೊದಲ ಹಂತದ ಸೂಚನೆಗಳು ಬರಲಿದ್ದು, ಇದರಲ್ಲಿ ಶಿಕ್ಷಕರ ಶಾಲೆಗೆ ಬಂದು ಪಠ್ಯಪೂರ್ವ ಸಿದ್ಧತೆ ನಡೆಸುವುದರ ಕುರಿತು ನಿರ್ದೇಶನ ನೀಡುವ ಸಾಧ್ಯತೆಯಿದೆ. ಆದರೆ ಶಾಲಾರಂಭ ಮಾತ್ರ ಸದ್ಯಕ್ಕಿಲ್ಲ ಎನ್ನುತ್ತಾರೆ ಇಲಾಖಾ ಅಧಿಕಾರಿಗಳು.

    ನಾವು ಮಕ್ಕಳನ್ನು ಶಾಲೆಗೆ ಕಳಿಸಲ್ಲ-ಅಭಿಯಾನ
    ಶಾಲೆಗಳ ಆರಂಭದ ಕುರಿತು ಸರ್ಕಾರ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಆದರೆ ಅದಕ್ಕೂ ಮುನ್ನ ಮಂಗಳೂರಿನಲ್ಲಿ ‘ನಾವು ಮಕ್ಕಳನ್ನು ಶಾಲೆಗೆ ಕಳಿಸಲ್ಲ’ ಎನ್ನುವ ಅಭಿಯಾನ ಆರಂಭವಾಗಿದೆ. ಕರೊನಾ ಮಹಾಮಾರಿ ಸಂಪೂರ್ಣವಾಗಿ ನಿರ್ಮೂಲನೆಯಾಗದ ಹೊರತು ಮಕ್ಕಳನ್ನು ಶಾಲೆಗೆ ಕಳುಹಿಸುವ ಮಾತೇ ಇಲ್ಲ. ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ. ಮಕ್ಕಳು ಆರೋಗ್ಯವಾಗಿದ್ದರೆ ಮುಂದಿನ ವರ್ಷವಾದರೂ ಶಿಕ್ಷಣ ಮುಂದುವರಿಸಬಹುದು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

    ಖಾಸಗಿ ಶಾಲೆಗಳಿಂದ ಶುಲ್ಕ ಸಂಗ್ರಹ:
    ಕೇಂದ್ರ-ರಾಜ್ಯ ಸರ್ಕಾರದ ಸೂಚನೆ ಹೊರತಾಗಿಯೂ ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿ ವಿದ್ಯಾರ್ಥಿಗಳ ಮುಂದಿನ ತರಗತಿಗಳ ಶೈಕ್ಷಣಿಕ ಶುಲ್ಕ ಸಂಗ್ರಹಿಸುತ್ತಿವೆ. ಹೆತ್ತವರಿಗೆ ಮೊಬೈಲ್ ಸಂದೇಶಗಳನ್ನು ಕಳುಹಿಸಿ ತಕ್ಷಣವೇ ಮೊತ್ತವನ್ನು ಕಟ್ಟುವಂತೆ ಒತ್ತಾಯಿಸಲಾಗುತ್ತಿದೆ, ಕೆಲವು ಶಾಲೆಗಳಲ್ಲಿ ಕಟ್ಟಿದ ಶುಲ್ಕಕ್ಕೆ ರಸೀತಿಯನ್ನೂ ನೀಡುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಖಾಸಗಿ ಶಾಲೆಗಳ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಜೂನ್ 1 ಶಿಕ್ಷಣ ಇಲಾಖೆಗೆ ಸಂಭ್ರಮದ ದಿನವಾಗಿತ್ತು. ಆದರೆ ಈ ಬಾರಿ ಎಲ್ಲ ಕಳಾಹೀನವಾಗಿದೆ. ಶಾಲೆಗಳು ಆರಂಭವಾಗಬೇಕಿದ್ದರೆ ಮೊದಲಿಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಬಾಕಿಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿಯಬೇಕಿದೆ. ಈ ಬಾರಿಯ ಶೈಕ್ಷಣಿಕ ವ್ಯವಸ್ಥೆಗಳು ಹೇಗಿರಬೇಕು ಎನ್ನುವ ಕುರಿತು ಸರ್ಕಾರ ಗೈಡ್‌ಲೈನ್ಸ್‌ನ ನಿರೀಕ್ಷೆಯಲ್ಲಿದ್ದೇವೆ.
    ಮಲ್ಲೇಸ್ವಾಮಿ ಡಿಡಿಪಿಐ ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts