More

    ರೈಲು ಬಂಡಿಯಲ್ಲಿ ಜ್ಞಾನಾರ್ಜನೆ

    ರತ್ನಾಕರ ಸುಬ್ರಹ್ಮಣ್ಯ

    ಸುಳ್ಯ ತಾಲೂಕು ನಾಲ್ಕೂರು ಗ್ರಾಪಂ ವ್ಯಾಪ್ತಿಯ ನಡುಗಲ್ಲು ಮೀನಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಕರ್ಷಣೀಯ ಭಾರತೀಯ ರೈಲು ಬೋಗಿಯಾಗಿ ಬದಲಾಗಿದೆ.

    ಶಾಲೆಯ ಗೋಡೆಗೆ ರೈಲು ಬೋಗಿ ಹೋಲುವ ಬಣ್ಣ ಬಳಿದು ವಿಶಿಷ್ಟ ರೀತಿಯಲ್ಲಿ ಮಾರ್ಪಡುಗೊಳಿಸಲಾಗಿದೆ. ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗ ಮಾಡಲಾಗಿದ್ದು, ಗ್ರಾಮೀಣ ಶಾಲೆಗೆ ವಿಶೇಷ ಮೆರುಗು ನೀಡಿದೆ.

    1951ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡು, 1976ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ 70 ವರ್ಷಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಕೊಡುಗೆ ನೀಡಿದೆ. ಶಾಲೆಗೆ ಅಪ್ಪಟ ರೈಲಿನ ಬಣ್ಣ ಬಳಿಯಲಾಗಿದ್ದು, ಪ್ರತಿ ಕ್ಲಾಸ್ ರೂಮುಗಳು ರೈಲು ಬೋಗಿಗಳಾಗಿವೆ. ಬಾಗಿಲು, ಕಿಟಕಿ ರೈಲಿನ ಬೋಗಿಗಳನ್ನು ಹೋಲುತ್ತಿದ್ದು, ಶಾಲಾ ಕಚೇರಿ ಬಳಿಯ ಕೊಠಡಿಗೆ ಇಂಜಿನ್ ಚಿತ್ರ ರಚಿಸಲಾಗಿದೆ.

    ಜ್ಞಾನಾರ್ಜನೆ ಎಕ್ಸ್‌ಪ್ರೆಸ್: ರೈಲು ಬಂಡಿಯ ರಚನೆಗೆ ಜ್ಞಾನಾರ್ಜನೆ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಗಿದೆ. ಒಂದೊಂದು ಬೋಗಿಗೆ ತರಗತಿಯ ಸಂಖ್ಯೆ ಹಾಕಲಾಗಿದೆ. ಶಾಲೆಯ ಡಿಐಎಸ್‌ಇ ಕೋಡ್ ಕೂಡ ಬರೆಯಲಾಗಿದೆ. ಒಂದು ಬದಿಯಿಂದ ರೈಲು ಇಂಜಿನ್ ಪ್ರಾರಂಭಗೊಂಡು, ಬೋಗಿಗಳು, ಕಿಟಕಿಗಳು ಸೇರಿದಂತೆ ರೈಲು ಬೋಗಿಯ ಮಾದರಿಯಲ್ಲಿ ಚಿತ್ರ ಬರೆಯಲಾಗಿದೆ.

    ಕಲಾವಿದರ ಕೈಚಳಕ: ಕಲಾವಿದ ಮಾಧವ ಐವರ್ನಾಡು ತನ್ನ ಕಲಾ ನೈಪುಣ್ಯ ಬಳಸಿಕೊಂಡು ಶಾಲೆಗೆ ಹೊಸ ರೂಪ ನೀಡಿದ್ದಾರೆ. ಥಟ್ಟನೆ ದೂರದಿಂದ ಶಾಲೆಯನ್ನು ನೋಡಿದಾಗ ರೈಲು ನಿಂತಂತೆ ಭಾಸವಾಗುತ್ತದೆ. ಇದರ ಹಿಂದೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶವಿದೆ. ಶಾಲೆಗೆ ಭೇಟಿ ನೀಡುವ ಮಂದಿ ರೈಲು ಬೋಗಿಯ ಬಳಿ ತಮ್ಮ ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ.

    ಗ್ರಾಪಂ ಸದಸ್ಯರ ಪಾತ್ರ: ಶಾಲೆಯನ್ನು ರೈಲಿನ ರೂಪದಲ್ಲಿ ಬಣ್ಣ ಹಚ್ಚಲು ಮನಸು ಮಾಡಿದವರು ಗ್ರಾಪಂ ಸದಸ್ಯ ವಿಜಯ್ ಕುಮಾರ್ ಚಾರ್ಮತ. ತನ್ನೂರಿನ ಶಾಲೆಯನ್ನು ಆಕರ್ಷಣೀಯಗೊಳಿಸಲು ವಿಜಯ ಕುಮಾರ್ ನಿರ್ಧರಿಸಿ ಯಶ ಸಾಧಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಜನಪ್ರತಿನಿಧಿ ತೋರಿದ ಸ್ಫೂರ್ತಿ ಮಾದರಿಯಾಗಿದೆ. ಗುತ್ತಿಗಾರು ಗ್ರಾಪಂ ಅನುದಾನ ಬಳಸಿ ಬಣ್ಣ ಬಳಿಯಲಾಗಿದೆ. ಈ ಕಾರ್ಯಕ್ಕೆ ಶಾಲಾ ಮುಖ್ಯಗುರು ಕುಸುಮಾವತಿ ಕೇನಾಜೆ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಅಧ್ಯಾಪಕ ವರ್ಗದವರು ಸಹಕರಿಸಿದ್ದಾರೆ. ಈ ಶಾಲೆ 4.79 ಎಕರೆ ಜಾಗ ಹೊಂದಿದ್ದು, 250 ಅಡಕೆ ಮರ, 100 ಗೇರು ಮರ, 25 ತೆಂಗಿನ ಮರ ನೆಡಲಾಗಿದ್ದು ಫಸಲು ಕೊಡುತ್ತಿವೆ. ಶಾಲಾ ಕೈತೋಟವನ್ನೂ ರಚಿಸಲಾಗಿದೆ. ಇಲ್ಲಿ 4 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 66 ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆಯುತ್ತಿದ್ದಾರೆ.

    ಗುತ್ತಿಗಾರು ಗ್ರಾಪಂ ಅನುದಾನದಿಂದ ಶಾಲೆಗೆ ರೈಲಿನ ವರ್ಣ ನೀಡಲಾಗಿದೆ. ಗ್ರಾಪಂ ಸದಸ್ಯ ವಿಜಯಕುಮಾರ್ ಚಾರ್ಮತ ಅವರ ಸಹಕಾರ ಮತ್ತು ಪ್ರಯತ್ನದಿಂದ ಶಾಲೆ ವಿನೂತನ ವರ್ಣ ಪಡೆದಿದೆ. ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರದಿಂದ ಶಾಲೆ ಅಭಿವೃದ್ಧಿಯಾಗುತ್ತಿದೆ. ಸರ್ಕಾರಿ ಶಾಲೆಗೆ ಮಕ್ಕಳು ಹೆಚ್ಚು ಆಕರ್ಷಿತರಾಗಲು ಇದು ಸಹಕಾರಿಯಾಗಿದ್ದು, ಮಾದರಿ ಯೋಜನೆ ರೂಪಿಸಿ ಮಕ್ಕಳನ್ನು ಶಾಲೆಯತ್ತ ಸೆಳೆಯುವ ಪ್ರಯತ್ನ ನಡೆಸಲಾಗಿದೆ.
    ಕುಸುಮಾವತಿ ಕೇನಾಜೆ, ಮುಖ್ಯ ಶಿಕ್ಷಕಿ, ನಡುಗಲ್ಲು ಮೀನಾಡಿ ಸರ್ಕಾರಿ ಹಿ.ಪ್ರಾ.ಶಾಲೆ

    ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸಿ ಸರ್ಕಾರಿ ಶಾಲೆ ಉಳಿಸಲು ಈ ವಿನೂತನ ವರ್ಣಮಯ ಪರಿಕಲ್ಪನೆ ಮಾಡಲಾಗಿದೆ. ಮಕ್ಕಳ ಸಂಖ್ಯೆ ಅಧಿಕಗೊಂಡರೆ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರಕುತ್ತದೆ. ಆಕರ್ಷಕ ಶಾಲೆಯಿಂದ ಊರಿಗೂ ಹೆಸರು ಬರುತ್ತದೆ ಹಾಗೂ ನಮ್ಮ ಪ್ರತಿಭೆಯ ಅನಾವರಣಕ್ಕೆ ಕೂಡ ವೇದಿಕೆ ಸಿಕ್ಕಿದೆ.
    ಮಾಧವ ಐವರ್ನಾಡು, ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts