More

    ಅಪಘಾತದಲ್ಲಿ ಶಾಲಾ ಮಕ್ಕಳು ಪಾರು

    ತರೀಕೆರೆ: ತಾಲೂಕಿನ ಎ.ರಾಮನಹಳ್ಳಿ ಗ್ರಾಮ ಸಮೀಪ ಶುಕ್ರವಾರ ಪಟ್ಟಣದ ಖಾಸಗಿ ಶಾಲಾ ವಾಹನದ ಸ್ಟೇರಿಂಗ್ ರಾಡ್ ಕಟ್ ಆಗಿದ್ದರಿಂದ ಚಾಲಕನ ನಿಯಂತ್ರಣಕ್ಕೆ ಬಾರದೆ ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿದ್ದು, ವಾಹನದಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಸಂಜೆ ಶಾಲೆ ಮುಗಿದ ಬಳಿಕ ಹತ್ತಕ್ಕೂ ಹೆಚ್ಚು ಮಕ್ಕಳು ವಾಹನದಲ್ಲಿ ಇಟ್ಟಿಗೆ ಮೂಲಕ ಎ.ರಾಮನಹಳ್ಳಿಗೆ ತಲುಪಿದ್ದಾರೆ. ಅಲ್ಲಿಂದ ಹಿರೇಕಾತೂರು ಗ್ರಾಮಕ್ಕೆ ತೆರಳುವಾಗ ವಾಹನದ ಸ್ಟೇರಿಂಗ್ ಕಟ್ ಆಗಿ ಹೊಲದ ಕಡೆ ನುಗ್ಗಿದ್ದು, ಮಕ್ಕಳಿಗೆ ಗಾಯಗಳಾಗಿವೆ.
    ರಸ್ತೆ ಪಕ್ಕದಲ್ಲೇ ಹೊಲಗಳಿವೆ. ಬೆಳೆಗಳನ್ನು ರಕ್ಷಿಸಿಕೊಳ್ಳಲು ಮಾಲೀಕರು ತಂತಿಬೇಲಿ ಅಳವಡಿಸಿದ್ದಾರೆ. ಅಪಘಾತಕ್ಕೀಡಾದ ವಾಹನ ತಂತಿಬೇಲಿಗೆ ತಾಗಿ ನಿಂತುಕೊಂಡಿದೆ. ಇಲ್ಲವಾದಲ್ಲಿ ವಾಹನ ಕಡಿದಾದ ಹೊಲದೊಳಕ್ಕೆ ಬಿದ್ದು ಮಕ್ಕಳಿಗೆ ಗಂಭೀರ ಗಾಯಗಳಾಗುತ್ತಿದ್ದವು. ಶಾಲಾ ವಾಹನದಲ್ಲಿ ಭಯಗೊಂಡು ಸಹಾಯಕ್ಕೆ ಕೂಗಾಡುತ್ತಿದ್ದ ಮಕ್ಕಳನ್ನು ಸ್ಥಳೀಯರು ರಕ್ಷಿಸಿದರು. ತಂತಿಬೇಲಿ ಕಡೆ ವಾಲಿಕೊಂಡಿದ್ದ ವಾಹನವನ್ನು ಹರಸಾಹಸ ಪಟ್ಟು ರಸ್ತೆಗೆ ತಂದು ನಿಲ್ಲಿಸಿದರು.
    ಆಕ್ರೋಶಕ್ಕೆ ಗಾಜು ಪುಡಿ: ಘಟನೆಯಿಂದ ರೊಚ್ಚಿಗೆದ್ದ ಮಕ್ಕಳ ಪಾಲಕರು ವಾಹನದ ಗಾಜುಗಳನ್ನು ಪುಡಿ ಮಾಡಿ ಆಕ್ರೋಶ ಹೊರ ಹಾಕಿದರು. ಇದೇ ಶಾಲೆಯ ವಾಹನಗಳು ಈ ಹಿಂದೆ ಎರಡ್ಮೂರು ಬಾರಿ ಅಪಘಾತಕ್ಕೀಡಾಗಿವೆ. ಹಳೆಯದಾದ ವಾಹನ ಬದಲಾಯಿಸಿ ಮಕ್ಕಳ ಸುರಕ್ಷತೆ ವಹಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಎ.ರಾಮನಹಳ್ಳಿ ನಿವಾಸಿ ಚೇತನ್ ದೂರಿದರು.
    ಘಟನೆ ನಡೆದು ಎರಡು ತಾಸಾದರೂ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಸ್ಥಳಕ್ಕೆ ಬಂದಿಲ್ಲ. ಪದೇಪದೆ ಹೀಗಾಗುತ್ತಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಎಂಬುವರು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts