More

  ಪುತ್ತೂರು ಸರ್ಕಾರಿ ಶಾಲೆ, ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ರಸ್ತೆ ಕೆಸರುಮಯ

  ನಿಶಾಂತ್ ಬಿಲ್ಲಂಪದವು ಪುತ್ತೂರು
  ರಸ್ತೆ ಜಾರುತ್ತಿದೆ ಎಂದು ದುರಸ್ತಿ ಮಾಡಲು ಮುಂದಾಗಿ ಈಗ ನಡೆದಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಚ್ಚಾ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸರ್ಕಾರಿ ಆಸ್ಪತ್ರೆ, ಫಿಸಿಯೋಥೆರಪಿ ಕೇಂದ್ರ ಹಾಗೂ ಶಾಲೆಗೆ ಹೋಗುವುದೇ ಸಾಹಸವಾಗಿದೆ. ಸರ್ಕಾರಿ ವ್ಯವಸ್ಥೆಗಳು ನಗರಸಭೆ ವ್ಯಾಪ್ತಿಗೆ ಬರುವುದಾದರೂ, ರಸ್ತೆ ದುರಸ್ತಿಗೆ ಮಾತ್ರ ಹಿಂದೇಟು ಹಾಕುತ್ತಿದೆ.

  ಪುತ್ತೂರು ಸರ್ಕಾರಿ ಬಸ್ ನಿಲ್ದಾಣ ಸಮೀಪದಲ್ಲಿರುವ ಪುತ್ತೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಕಟ್ಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗವಿಕಲ ಮಕ್ಕಳ ಫಿಸಿಯೋಥೆರಪಿ ಕೇಂದ್ರಗಳು ಒಂದೇ ಆವರಣದಲ್ಲಿದ್ದು, ಎಲ್ಲ ವ್ಯವಸ್ಥೆಗಳಿಗೆ ಏಕೈಕ ಸಂಪರ್ಕ ರಸ್ತೆ ಹೊಂದಿದೆ. ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲದ ಕಾರಣ ರಸ್ತೆ ದುಸ್ಥಿತಿಗೆ ಹೋಗಿದೆ.
  ಮುಖ್ಯರಸ್ತೆ ಬಳಿಯಿರುವ ಗೇಟ್ ಆಸುಪಾಸಿನಲ್ಲಿ ರಸ್ತೆ ಕೆಸರುಮಯವಾಗಿದ್ದು, ಜಲ್ಲಿಹುಡಿ ಹಾಕದೇ ಹೋದಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ನಿತ್ಯ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಶಾಲೆಯ ಮೈದಾನಕ್ಕೆ ಉದ್ದವಾಗಿ ಚರಂಡಿ ತರಹ ಮಣ್ಣು ಹಾಕಿ ದುರಸ್ತಿ ಮಾಡಿದ್ದು, ವಾಹನ ಓಡಾಡಲಾಗದ ಸ್ಥಿತಿ ನಿರ್ಮಾಣವಾದ್ದರಿಂದ ಜನರು ಆರೋಗ್ಯ ಸಮಸ್ಯೆಯಿದ್ದಾಗ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

  ಜಾರುತ್ತದೆ ಎಂದು ದುರಸ್ತಿ

  ರಸ್ತೆಯ ಮಣ್ಣು ಗಟ್ಟಿಯಾಗಿಲ್ಲದ ಕಾರಣ ಮಳೆ ಬರುತ್ತಿದ್ದಂತೆ ಜಾರುವುದಕ್ಕೆ ಆರಂಭವಾಗಿದೆ. ಇದನ್ನು ದುರಸ್ತಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿರುವುದರಿಂದ ಈ ಮಣ್ಣು ಮತ್ತಷ್ಟು ಕೆಸರಾಗಿ ಕಾಲಿಡುವುದೇ ಕಷ್ಟಕರವಾಗಿದೆ. ಜಾರುವ ಪ್ರದೇಶಕ್ಕೆ ಜಲ್ಲಿ ಹುಡಿ ಹಾಕುವ ಬದಲು ಮತ್ತಷ್ಟು ಅಗೆದಿರುವುದರಿಂದ ಸಮಸ್ಯೆ ತೀವ್ರವಾಗಿದೆ. ಫಿಸಿಯೋಥೆರಪಿಗೆ ತೆರಳುವ ಮಕ್ಕಳನ್ನು ಪಾಲಕರು ಹೊತ್ತುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

  ನಗರಸಭೆ-ಶಾಲೆಗೆ ಸಂಬಂಧವಿಲ್ಲವೇ?

  ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ವ್ಯವಸ್ಥೆಗಳ ಜವಾಬ್ದಾರಿ ನಗರಸಭೆಗೆ ಇದ್ದು, ರಸ್ತೆ ಶಾಲೆ ಆವರಣದ ಒಳಗೆ ಇದೆ ಎಂದು ಹೇಳಿಕೊಂಡು ಜಾರುವ ಪ್ರಯತ್ನವನ್ನು ನಗರಸಭೆ ಮಾಡುತ್ತಿದೆ. ಅನಗತ್ಯ ಪ್ರದೇಶದಲ್ಲಿ ಡಾಂಬರು, ಇಂಟರ್‌ಲಾಕ್ ಅಳವಡಿಸುವ ನಿಟ್ಟಿನಲ್ಲಿ ಲಕ್ಷಾಂತರ ರೂ. ವ್ಯಯಿಸುವ ನಗರಸಭೆ ಸರ್ಕಾರಿ ಶಾಲೆಯ ರಸ್ತೆಗೆ ಅನುದಾನ ಯಾಕೆ ನೀಡುತ್ತಿಲ್ಲ ಎಂಬ ಪ್ರಶ್ನೆ ಜನರದ್ದಾಗಿದ

  ರಸ್ತೆ ಸರಿಯಿಲ್ಲ ಎಂದು ಮಣ್ಣು ಹಾಕಿಸುವ ಕಾರ್ಯ ಮಾಡಲಾಗಿದೆ. ಜಾರದಂತೆ ಜಲ್ಲಿ ಹುಡಿಯನ್ನೂ ಇಲಾಖೆಯ ಕಡೆಯಿಂದಲೇ ಹಾಕಿಸಲಾಗಿದೆ. ಈಗ ಮತ್ತೆ ಸಮಸ್ಯೆಯಾಗುತ್ತಿದೆ ಎಂದಾದರೆ ಸ್ಥಳೀಯವಾಗಿ ಮಾಹಿತಿ ಪಡೆಯಲಾಗುವುದು.
  ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು

  ಶಾಲಾ ಆವರಣ ಗೋಡೆಯ ಒಳಗೆ ರಸ್ತೆ ಸಮಸ್ಯೆಯಾಗಿದೆ. ಈ ಕಾರಣದಿಂದ ನಗರಸಭೆಯಿಂದ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ.
  -ಮಧು ಎಸ್.ಮನೋಹರ್, ಪೌರಾಯುಕ್ತರು, ನಗರ ಸಭೆ

  ಅಂಗವಿಕಲರಿಗೆ ಓಡಾಡಲು ಅಡೆತಡೆ ರಹಿತವಾದ ರಸ್ತೆಗಳಿರಬೇಕು. ಇದನ್ನು ರಚಿಸುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಿ ರಸ್ತೆ ಸರಿಪಡಿಸಬೇಕಾಗಿದೆ. ಅಂಗವಿಕಲ ವ್ಯಕ್ತಿಗಳ ಅಧಿನಿಯಮದಡಿಯಲ್ಲಿ ರಾಜ್ಯ ಅಂಗವಿಕಲ ಆಯುಕ್ತರಿಗೆ ದೂರು ನೀಡಲು ನಿರ್ಧರಿಸಲಾಗಿದೆ.
  -ಶಿವಪ್ಪ ರಾಥೋಡ್, ಅಂಗವಿಕಲ ಸಮೂಹ ಮುಖಂಡರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts