More

    ದಾರಿ ತಪ್ಪಿಸುವ ಜಾಹೀರಾತು: ಪತಂಜಲಿಗೆ ನ್ಯಾಯಾಂಗ ನಿಂದನೆ ನೋಟಿಸ್​ ನೀಡಿದ ಸುಪ್ರೀಂಕೋರ್ಟ್​

    ನವದೆಹಲಿ: ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮದೇವ್​ ಒಡೆತನದ ಪತಂಜಲಿ ಆಯುರ್ವೇದ ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣಗೆ ಸುಪ್ರೀಂಕೋರ್ಟ್​ ಮಂಗಳವಾರ (ಫೆ.27) ನ್ಯಾಯಾಂಗ ನಿಂದನೆ ನೋಟಿಸ್​ ಜಾರಿ ಮಾಡಿದೆ.

    ಮುಂದಿನ ಆದೇಶದವರೆಗೆ ಪಂತಜಲಿ ತನ್ನ ಔಷಧೀಯ ಉತ್ಪನ್ನಗಳ ಯಾವುದೇ ಜಾಹೀರಾತು ನೀಡದಂತೆ ನ್ಯಾಯಾಲಯ ನಿರ್ಬಂಧಿಸಿದೆ. ತನ್ನ ಜಾಹೀರಾತುಗಳಲ್ಲಿ ಅಲೋಪತಿ ವಿರುದ್ಧ ಪತಂಜಲಿ ಕಂಪನಿ ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸುಪ್ರೀಂ ಕೋರ್ಟ್​ಗೆ ಅರ್ಜಿ ದಾಖಲಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜಾಹೀರಾತುಗಳ ವಿರುದ್ಧ ಆದೇಶ ಹೊರಡಿಸಿತ್ತು. ಆದಾಗ್ಯೂ ಆದೇಶವನ್ನು ಪತಂಜಲಿ ಉಲ್ಲಂಘಿಸಿದ್ದು, ಇದರಿಂದ ಆಕ್ರೋಶಗೊಂಡಿರುವ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸ್​ ನೀಡಿ, ಉತ್ತರಿಸುವಂತೆ ತಾಕೀತು ಮಾಡಿದೆ. ಅಲ್ಲದೆ, ದಾರಿತಪ್ಪಿಸುವ ಜಾಹೀರಾತುಗಳನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಅವರು ಖಡಕ್​ ಎಚ್ಚರಿಕೆ ನೀಡಿದ್ದಾರೆ.

    ಐಎಂಎ ಪರ ಹಿರಿಯ ವಕೀಲ ಪಿ.ಎಸ್​. ಪಟ್ವಾಲಿಯಾ ವಾದ ಮಂಡಿಸಿ, ಯೋಗದ ಸಹಾಯದಿಂದ ಮಧುಮೇಹ ಮತ್ತು ಅಸ್ತಮಾವನ್ನು ಸಂಪೂರ್ಣವಾಗಿ ಗುಣಪಡಿಸುವುದಾಗಿ ಪತಂಜಲಿಯು ಎಂದು ಹೇಳಿಕೊಂಡಿದೆ ಎಂದು ಕೋರ್ಟ್​ ಮುಂದೆ ಒತ್ತಿ ಹೇಳಿದರು.

    ಕೋವಿಡ್-19 ವ್ಯಾಕ್ಸಿನೇಷನ್ ವಿರುದ್ಧ ಪತಂಜಲಿ ಅಭಿಯಾನ ನಡೆಸಿದೆ ಎಂದು ಆರೋಪಿಸಿ ಐಎಂಎ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಳೆದ ನವೆಂಬರ್​ನಲ್ಲಿ ನಡೆದಿತ್ತು. ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು ಸಮಾಲೋಚನೆ ನಡೆಸಿ, ದಾರಿತಪ್ಪಿಸುವ ಜಾಹೀರಾತುಗಳನ್ನು ಎದುರಿಸಲು ಕೆಲವು ಶಿಫಾರಸುಗಳೊಂದಿಗೆ ಬರುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿತ್ತು.

    ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡುವ ಮುನ್ನವೇ ಪತಂಜಲಿಯು ಎಲ್ಲ ಸುಳ್ಳು ಮತ್ತು ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಅಲ್ಲದೆ, ಆದೇಶವನ್ನು ಉಲ್ಲಂಘಿಸಿದರೆ ಅದನ್ನು ಬಹಳ ಗಂಭೀರವಾಗಿ ಪರಿಗಣಿಸಿ, ನಿರ್ದಿಷ್ಟ ರೋಗವನ್ನು ಗುಣಪಡಿಸಬಲ್ಲದು ಎಂಬ ಸುಳ್ಳು ಹೇಳಿಕೆ ನೀಡಿದ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರೂಪಾಯಿಗಳವರೆಗೆ ದಂಡವನ್ನು ವಿಧಿಸಲು ಪರಿಗಣಿಸಲಾಗುತ್ತದೆ ಎಂದು ಕೋರ್ಟ್​ ಎಚ್ಚರಿಕೆ ನೀಡಿತ್ತು. ಆದಾಗ್ಯೂ ಪತಂಜಲಿ ಜಾಹೀರಾತುಗಳನ್ನು ಮುಂದುವರಿಸಿದ್ದರಿಂದ ಇದೀಗ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದೆ.

    ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ಔಷಧಿಗಳ ಬಳಕೆಯ ವಿರುದ್ಧ ಬಾಬಾ ರಾಮದೇವ್​ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದರ ವಿರುದ್ಧ ಐಎಂಎ ದೂರು ದಾಖಲಿಸಿದ್ದು, ವಿವಿಧ ಕ್ರಿಮಿನಲ್ ಮೊಕದ್ದಮೆಗಳನ್ನು ರಾಮದೇವ್​ ಎದುರಿಸುತ್ತಿದ್ದಾರೆ. ತನ್ನ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಸಹ ಹೋಗಿದ್ದಾರೆ. ಈ ವಿಚಾರವಾಗಿ ಕಳೆದ ಅಕ್ಟೋಬರ್​ 9ರಂದು ನ್ಯಾಯಾಲಯ ಕೇಂದ್ರ ಮತ್ತು ಐಎಂಎಗೆ ನೋಟಿಸ್​ ಸಹ ನೀಡಿದೆ.

    ರಾಮದೇವ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 188, 269, 504 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐಎಂಎ ದೂರಿನ ಪ್ರಕಾರ, ರಾಮ್‌ದೇವ್ ಅವರು ಅಲೋಪತಿ ಔಷಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿದೆ. (ಏಜೆನ್ಸೀಸ್​)

    ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್​?

    ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್ ಫಂಕ್ಷನ್​ ಮೆನು ಅದ್ಭುತ: 2500 ಭಕ್ಷ್ಯ, 250ಕ್ಕೂ ಹೆಚ್ಚು ಆಯ್ಕೆ, ಯಾವುದೇ ತಿನಿಸು ರಿಪೀಟ್ ಇಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts