More

    ಕ್ರಿಕೆಟ್ ಅಷ್ಟೇ ಕ್ರೀಡೆಯಲ್ಲ: ಸಯ್ಯದ್ ಕಿರ್ಮಾನಿ

    ಉಡುಪಿ: ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವಲ್ಲ. ಮಕ್ಕಳ ಆಸಕ್ತಿಯ ಕ್ರೀಡೆಗಳಲ್ಲಿ ಸಾಧನೆ ಮಾಡಲು ಉತ್ತೇಜನ ನೀಡಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಯ್ಯದ್ ಕಿರ್ಮಾನಿ ಹೆತ್ತವರಿಗೆ ಕಿವಿಮಾತು ಹೇಳಿದರು.
    ಜಿಲ್ಲಾ ಕ್ರೀಡಾ ಭಾರತಿ ಭಾನುವಾರ ಹಮ್ಮಿಕೊಂಡ ಜಿಲ್ಲಾ ಕ್ರೀಡಾ ಸಮ್ಮೇಳನ ಸಮಾರೋಪದಲ್ಲಿ ಅವರು ಮಾತನಾಡಿದರು.
    ಈ ಹಿಂದೆ ಕ್ರಿಕೆಟ್ ಹೊರತುಪಡಿಸಿ ಬೇರೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿರಲಿಲ್ಲ. ಹೀಗಾಗಿ ಕ್ರಿಕೆಟ್ ನಮ್ಮ ಮೊದಲ ಆಯ್ಕೆಯಾಗಿತ್ತು. ಈಗಿನ ಮಕ್ಕಳು ಅದೃಷ್ಟವಂತರು. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಸರ್ಕಾರ, ಸಂಘ ಸಂಸ್ಥೆಗಳು ನೆರವು ನೀಡುತ್ತಿವೆ. ಕಬಡ್ಡಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ. ಫುಟ್‌ಬಾಲ್ ಕೂಡ ಪ್ರಸಿದ್ಧಿ ಪಡೆಯುತ್ತಿದೆ ಎಂದರು.
    ‘ನಾನು’ ಎಂಬ ಭಾವನೆ ತೊರೆದು ತಂಡ ಸ್ಫೂರ್ತಿಯಿಂದ ಕಾರ್ಯನಿರ್ವಹಿಸಬೇಕು. ಇದರಿಂದ ಗೆಲುವು ಸಾಧ್ಯ. 1983ರಲ್ಲಿ ೀ ಟೀಮ್ ಸ್ಪಿರಿಟ್‌ನಿಂದಲೇ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿತ್ತು. ಎರಡು ದಶಕ ಕ್ರಿಕೆಟ್ ಜಗತ್ತು ಆಳಿದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಮೇಲೆ ನಮ್ಮಲ್ಲಿದ್ದ ಉತ್ಸಾಹ ಹೆಚ್ಚಾಯಿತು. ಇದೇ ಗೆಲುವಿಗೆ ಕಾರಣ ಎಂದರು.
    ಯಾವುದೇ ಕ್ಷೇತ್ರದಲ್ಲಿ ನಂ.1 ಸ್ಥಾನ ಪಡೆಯುವ ಗುರಿ ಹೊಂದಿರಬೇಕು. ಇದಕ್ಕೆ ಕಠಿಣ ಪರಿಶ್ರಮ ಮತ್ತು ಏಕಾಗ್ರತೆ ಅಗತ್ಯ. ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಸಾಧನೆ ಮಾಡಬಹುದು. ಮಕ್ಕಳು ಹೆತ್ತವರನ್ನು ಗೌರವಿಸುವುದನ್ನು ಕಲಿಯಬೇಕು. ಹೆತ್ತವರ ಮಹತ್ವದ ಬಗ್ಗೆ ಅರಿವು ಮೂಡಬೇಕು. ಇದೆಲ್ಲವೂ ಜೀವನದ ಸಾಧನೆಗೆ ಅಗತ್ಯ. ವೃದ್ಧಾಪ್ಯದಲ್ಲಿ ತಂದೆ-ತಾಯಿ ವೃದ್ಧಾಶ್ರಮಕ್ಕೆ ಸೇರುವುದು ತಪ್ಪುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts