More

    ಸವ್ಯಸಾಚಿ: ಐಪಿಎಲ್​ನಲ್ಲಿ ಸಿಕ್ಸರ್ ಸಿಹಿ ಹಂಚುತ್ತಿರುವ ತೆವಾಟಿಯ

    ಸವ್ಯಸಾಚಿ: ಐಪಿಎಲ್​ನಲ್ಲಿ ಸಿಕ್ಸರ್ ಸಿಹಿ ಹಂಚುತ್ತಿರುವ ತೆವಾಟಿಯಅಬಿಗತ್ ಗತಿ ಕಛು ಕಹತೀ ನ ಆವೈ

    ಜೋ ಗೂಂಗೇ ಮೀಠೇ ಫಲ ಕೀ ರಸ್ ಅಂತರ್ಗತ್ ಹೀ ಭಾವೇ

    ಪರಮ್ ಸ್ವಾದು ಸಬಹೀ ಜು ನಿರಂತರ ಅಮಿತ್ ತೋಷ ಉಪಜಾವೈ

    ಮನ್ ಬಾನೀ ಕೋ ಆಗಮ್ ಅಗೋಚರ್ ಸೋ ಜಾನೇ ಜೋ ಪಾವೈ

    ಸೂರದಾಸರು ಹೇಳುತ್ತಾರೆ… ಕೆಲವು ವಿಚಾರಗಳನ್ನು ನಮ್ಮ ಮನಸ್ಸಷ್ಟೇ ಆಸ್ವಾದಿಸಲು ಸಾಧ್ಯ. ಅದನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಓರ್ವ ಮೂಕನಿಗೆ ಸಿಹಿ ಪದಾರ್ಥ ತಿನಿಸಿದರೆ ಆತ ಅದರ ಆಸ್ವಾದವನ್ನು ಅನುಭವಿಸಬಲ್ಲ, ಆದರೆ, ವಿವರಿಸಿ ಹೇಳುವುದು ಆತನಿಂದ ಅಸಾಧ್ಯ.

    ***

    ‘ಸರ್, ನಾನೂ ನಾಲ್ಕು ಕ್ಯಾಚ್ ಹಿಡಿದಿದ್ದೇನೆ. ನನ್ನ ಬಗ್ಗೆಯೂ ಏನಾದರೂ ಹೇಳಿ?’

    ಆ ಆಟಗಾರನ ಈ ಬೇಡಿಕೆಗೆ ಡೆಲ್ಲಿ ಡೇರ್​ಡೆವಿಲ್ಸ್ ಕೋಚ್ ರಿಕಿ ಪಾಂಟಿಂಗ್ ಕೆಂಡಾಮಂಡಲವಾಗಿದ್ದರು. ‘ಕೇಳ್ರಪ್ಪ, ಈತ ನಾಲ್ಕು ಕ್ಯಾಚ್ ಹಿಡಿದಿದ್ದಾನೆ. ಈತನನ್ನೂ ಹೊಗಳಬೇಕಂತೆ..’ ಎಂದು ವ್ಯಂಗ್ಯವಾಗಿ ನುಡಿದು ಅಲ್ಲಿಂದ ಹೊರಟುಹೋದರು. ಡ್ರೆಸ್ಸಿಂಗ್​ರೂಂನಲ್ಲಾಗ ಎಲ್ಲರೂ ಗಹಗಹಿಸಿ ನಕ್ಕಿದ್ದೇ ನಕ್ಕಿದ್ದು… ‘ಹೊಗಳಿಕೆಯನ್ನು ಕೇಳಿ ಪಡೆಯಬಾರದು ಬ್ರದರ್, ತಾನಾಗಿ ಬರಬೇಕು’ ಎಂದು ಸಹ ಆಟಗಾರ ಅಕ್ಷರ್ ಪಟೇಲ್ ಈ ಸಂದರ್ಭದಲ್ಲಿ ಛೇಡಿಸಿದರು.

    ಈ ಅವಮಾನದ ಪ್ರಸಂಗ ಎದುರಿಸಿದವರು ಐಪಿಎಲ್ 2020ರ ಸೆನ್ಸೇಷನ್ ಎನಿಸಿಕೊಂಡಿರುವ ರಾಹುಲ್ ತೆವಾಟಿಯ. ಇದು ನಡೆದಿದ್ದು ಕಳೆದ ವರ್ಷದ ಐಪಿಎಲ್​ನಲ್ಲಿ. ಅವರಾಗ ಡೆಲ್ಲಿ ತಂಡದಲ್ಲಿದ್ದರು.

    ಪಾಂಟಿಂಗ್ ಪ್ರತೀ ಪಂದ್ಯದ ಬಳಿಕ ತಂಡದ ಅತ್ಯುತ್ತಮ ಆಟಗಾರನಿಗೆ ಡ್ರೆಸ್ಸಿಂಗ್ ರೂಂನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ನೀಡುವ ಪರಿಪಾಠ ಜಾರಿಗೆ ತಂದಿದ್ದಾರೆ. ಕಳೆದ ಋತುವಿನ ಮೊದಲ ಪಂದ್ಯದಲ್ಲೇ ಡೆಲ್ಲಿ, ಮುಂಬೈ ತಂಡವನ್ನು ಭರ್ಜರಿಯಾಗಿ ಸೋಲಿಸಿತ್ತು. ಆ ದಿನ ರಿಷಬ್ ಪಂತ್ 27 ಎಸೆತಗಳಲ್ಲಿ 78 ರನ್ ಸಿಡಿಸಿ ಗೆಲುವಿನ ರೂವಾರಿಯಾಗಿದ್ದರು. ಆದರೆ, ಪಾಂಟಿಂಗ್ ತಂಡ 29ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಇನಿಂಗ್ಸ್ ಆಧರಿಸಿ 32 ಎಸೆತಗಳಲ್ಲಿ 47 ರನ್ ಬಾರಿಸಿದ್ದ ಕಾಲಿನ್ ಇನ್​ಗ್ರಾಂ ಆಟಕ್ಕೆ ಹೆಚ್ಚು ಬೆಲೆ ಕಟ್ಟಿದರು. 40 ರನ್ ಗಳಿಸಿದ ಶಿಖರ್ ಧವನ್, ಉತ್ತಮ ಬೌಲಿಂಗ್ ಮಾಡಿದ್ದ ಇಶಾಂತ್ ಶರ್ಮ, ಟ್ರೆಂಟ್ ಬೌಲ್ಟ್, ಕಗಿಸೊ ರಬಾಡ ಎಲ್ಲರ ಬೆನ್ನುತಟ್ಟಿದರು. ಇನ್ನೇನು ಪಾಂಟಿಂಗ್ ತಮ್ಮ ಮಾತು ಮುಗಿಸಿ ನಿರ್ಗಮಿಸುವ ಹಂತದಲ್ಲಿ ತೆವಾಟಿಯ ತಮ್ಮ ಆಟವನ್ನು ನೆನಪಿಸಿದ್ದರು.

    ಹಾಗೆ ನೋಡಿದರೆ, ಆ ದಿನ ತೆವಾಟಿಯ ಪಾಂಟಿಂಗ್​ರಿಂದ ಅವಮಾನಿತರಾಗುವಷ್ಟು ಕೆಟ್ಟ ಆಟ ಆಡಿರಲಿಲ್ಲ. ಅವರು ಬ್ಯಾಟಿಂಗ್​ಗೆ ಆಗಮಿಸಿದಾಗ ಇನಿಂಗ್ಸ್​ನಲ್ಲಿ ಕೊನೆಯ 16 ಎಸೆತಗಳಷ್ಟೇ ಉಳಿದಿದ್ದವು. ಆ ಪೈಕಿ 12 ಎಸೆತಗಳು ಪಂತ್​ಗೆ ಸಿಗುವಂತೆ ಇವರು ಸ್ಟ್ರೈಕ್ ರೊಟೇಟ್ ಮಾಡಿದ್ದರು. ತಾವು ಆಡಿದ 4 ಎಸೆತಗಳಲ್ಲಿ ಒಂದು ಸಿಕ್ಸರ್ ಬಾರಿಸಿದ್ದರು. ಬೌಲಿಂಗ್​ನಲ್ಲೂ ಒಂದು ವಿಕೆಟ್ ಕಬಳಿಸಿದ್ದರು. ಫೀಲ್ಡಿಂಗ್​ನಲ್ಲಿ 4 ಕ್ಯಾಚ್ ಹಿಡಿದಿದ್ದರು.

    ಆ ಪ್ರಸಂಗವನ್ನು ಪಾಂಟಿಂಗ್ ಮರೆತಿರಬಹುದು. ಆದರೆ, ತೆವಾಟಿಯ ಮರೆತಿರಲಿಲ್ಲ. ಕೊನೆಗೂ ಅವರಿಗೆ ತಮ್ಮ ಸಾಮರ್ಥ್ಯ ಜಾಹೀರು ಮಾಡುವ ಅವಕಾಶ ಈ ಋತುವಿನಲ್ಲಿ ಲಭ್ಯವಾಯಿತು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯ ಸುವರ್ಣಸ್ಮರಣೀಯವಾಯಿತು.

    ಹಾಗೆ ನೋಡಿದರೆ, ಕಿಂಗ್ಸ್ ವಿರುದ್ಧ ಆ ದಿನ 224 ರನ್ ಗುರಿ ಬೆನ್ನಟ್ಟುವಾಗ 4ನೇ ಕ್ರಮಾಂಕದಲ್ಲಿ ರಾಹುಲ್ ಬಂದಿದ್ದೇಕೆ ಎಂಬುದೇ ಚರ್ಚಾಸ್ಪದವಾಗಿತ್ತು. ಏಕೆಂದರೆ, ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಯಾರಿಗೂ ಏನೂ ಗೊತ್ತಿರಲಿಲ್ಲ. ನೆನಪಿಸಿಕೊಳ್ಳುವುದಕ್ಕೆ ಯಾವ ಹಳೆಯ ಉದಾಹರಣೆಗಳೂ ಇರಲಿಲ್ಲ. ಅಷ್ಟೇ ಏಕೆ? ತವರು ಹರ್ಯಾಣ ರಣಜಿ ತಂಡದಲ್ಲೇ ಅವರು ಕಾಯಂ ಆಟಗಾರರಲ್ಲ. ಯಜುವೇಂದ್ರ ಚಾಹಲ್, ಅಮಿತ್ ಮಿಶ್ರಾರಂಥ ವಿಶ್ವದರ್ಜೆ ಸ್ಪಿನ್ನರ್​ಗಳಿರುವ ಹರ್ಯಾಣ ತಂಡದಲ್ಲಿ ಲೆಗ್​ಸ್ಪಿನ್ ಬೌಲಿಂಗ್ ಆಲ್ರೌಂಡರ್ ರಾಹುಲ್ ಫಸ್ಟ್ ಚಾಯ್್ಸ ಆಟಗಾರರಾಗಿರಲಿಲ್ಲ.

    ಮಯಾಂಕ್ ಅಗರ್​ವಾಲ್ ಶತಕದ ಬೆನ್ನೇರಿ 223 ರನ್ ಬಾರಿಸಿದ್ದ ಪಂಜಾಬ್ ಅಂದು ಗೆಲುವು ನಮ್ಮದೇ ಎಂಬ ಮನೋಸ್ಥಿತಿಯೊಂದಿಗೆ ಬೌಲಿಂಗ್ ಆರಂಭಿಸಿತ್ತು. ಪ್ರತಿಯಾಗಿ ರಾಜಸ್ಥಾನ ಉತ್ತಮವಾಗಿಯೇ ಆಡಿ ಮೊದಲ 9 ಓವರ್​ಗಳಲ್ಲಿ 100 ರನ್ ಗಡಿ ದಾಟಿತ್ತು. ಒಂದು ತುದಿಯಲ್ಲಿ ಸಂಜು ಸ್ಯಾಮ್ಸನ್ ಉಸಿರುಕಟ್ಟಿಕೊಂಡು ಬೌಂಡರಿ, ಸಿಕ್ಸರ್ ಹೊಡೆಯುತ್ತಿದ್ದರೆ, ತೆವಾಟಿಯ ಚೆಂಡಿಗೆ ಬ್ಯಾಟ್ ತಾಗಿಸುವುದಕ್ಕೂ ಪರದಾಡುತ್ತಿದ್ದರು. ಒಂದಲ್ಲ ಎರಡಲ್ಲ 18 ಎಸೆತಗಳಲ್ಲಿ ಅವರ ಪರದಾಟ ಸಾಗಿತ್ತು. ಮೊದಲ 13 ಎಸೆತಗಳಲ್ಲಿ ಅವರು ಗಳಿಸಿದ್ದು 4 ರನ್. 19 ಎಸೆತಗಳಲ್ಲಿ 8 ರನ್. ಆ ಸಂದರ್ಭದಲ್ಲಿ ಪ್ರೇಕ್ಷಕರು, ವೀಕ್ಷಕವಿವರಣೆಗಾರರು, ಜೊತೆ ಆಟಗಾರ ಸಂಜು ಎಲ್ಲರೂ ಹತಾಶರಾಗಿದ್ದರು. ಬ್ಯಾಟಿಂಗ್ ಕ್ರೀಸಿನಲ್ಲಿ ರನ್ ಗಳಿಸಲಾಗದೆ ಪರದಾಡುವ ಬ್ಯಾಟ್ಸ್​ಮನ್​ಗಳಿಗೆ ಸ್ವಯಂನಿವೃತ್ತಿ ಆಯ್ಕೆ ಕೊಡಬೇಕು ಎನ್ನುವುದು ಈ ಋತುವಿನ ಆರಂಭದಿಂದ ಚರ್ಚೆಯಲ್ಲಿರುವ ಸಂಗತಿ. ವೀಕ್ಷಕವಿವರಣೆಗಾರ ಸಂಜಯ್ ಮಂಜ್ರೇಕರ್ ಇದರ ಪ್ರಬಲ ಪ್ರತಿಪಾದಕ. ಅಂದು ರಾಹುಲ್ ಬ್ಯಾಟಿಂಗ್ ನೋಡುವಾಗ ಅನೇಕರಿಗೆ ಅದೇ ಸರಿ ಅನ್ನಿಸಿತ್ತು. ತಂಡದ ಮೊತ್ತ 161ಕ್ಕೆ ಸಂಜು ಸ್ಯಾಮ್ಸನ್ ಔಟಾದ ಬಳಿಕ ತೆವಾಟಿಯ ಮತ್ತು ರಾಜಸ್ಥಾನ ತಂಡದ ದೆಸೆ ತಿರುಗಿತು. ತಂಡಕ್ಕೆ ಕೊನೆ 18 ಎಸೆತಗಳಲ್ಲಿ 51 ರನ್ ಬೇಕಾಗಿತ್ತು. ಆಗ ಶೆಲ್ಡನ್ ಕಾಟ್ರೆಲ್​ರ ಬೌಲಿಂಗ್​ನಲ್ಲಿ ರಾಹುಲ್ 5 ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ಗತಿ ತಿರುಗಿಸಿಯೇಬಿಟ್ಟರು. ತಮ್ಮ ಕೊನೆಯ 8 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಅವರು ರಾಜಸ್ಥಾನಕ್ಕೆ ಪವಾಡಸದೃಶ ಗೆಲುವು ಕೊಡಿಸಿದ್ದರು. ‘ರಾಹುಲ್​ರ ಇಂಥ ಒಂದು ಆಟಕ್ಕಾಗಿ 18 ವರ್ಷದಿಂದ ನಾವು ಕಾದಿದ್ದೆವು. ನಿಮಗೆ 18 ಎಸೆತ ಕಾಯುವಷ್ಟು ತಾಳ್ಮೆ ಇಲ್ಲ’ ಎಂದು ಆ ಸಾಹಸಿಕ ಪಂದ್ಯದ ಬಳಿಕ ರಾಹುಲ್ ಚಿಕ್ಕಪ್ಪ ಧರಂಭೀರ್ ಹೇಳಿಕೊಂಡಿದ್ದು ವರದಿಯಾಯಿತು.

    ಅವರ ಈ ಸ್ಫೋಟ ಆಕಸ್ಮಿಕವಲ್ಲ ಎನ್ನುವುದು ಮುಂದಿನ ಪಂದ್ಯಗಳಲ್ಲಿ ಸಾಬೀತಾಯಿತು. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ 78 ರನ್​ಗೆ 5 ವಿಕೆಟ್ ಕಳೆದುಕೊಂಡು, ಕೊನೆಯ 48 ಎಸೆತಗಳಲ್ಲಿ 81 ರನ್ ಅಗತ್ಯವಿದ್ದಾಗ ತೆವಾಟಿಯ ಅಸ್ಸಾಂನ ಯುವಕ ರಿಯಾನ್ ಪರಾಗ್ ಜತೆಗೂಡಿ ಮತ್ತೊಂದು ಅದ್ಭುತ ಗೆಲುವು ಕೊಡಿಸಿದರು. ಅದರಲ್ಲೂ ಮಾಂತ್ರಿಕ ಸ್ಪಿನ್ನರ್ ರಷೀದ್ ಖಾನ್ ಓವರ್​ನಲ್ಲಿ ತೆವಾಟಿಯ ಸತತ 3 ಬೌಂಡರಿ ಬಾರಿಸಿದ್ದು ಟರ್ನಿಂಗ್ ಪಾಯಿಂಟ್ ಎನಿಸಿತು.

    ಟಿ20 ಕ್ರಿಕೆಟ್ ಎನ್ನುವುದೇ ಹಾಗೆ. ಸಾಂಪ್ರದಾಯಿಕ ಮಾದರಿಗಳಲ್ಲಿ ಸ್ಪರ್ಧಾತ್ಮಕತೆಯ ಚಕ್ರವ್ಯೂಹ ಭೇದಿಸಿ ಅವಕಾಶ ಪಡೆಯಲು ವಿಫಲರಾಗುವ ಆಟಗಾರರು ಟಿ20 ಮಾದರಿಯಲ್ಲಿ ತಮ್ಮ ಜೀವಮಾನದ ಅವಕಾಶ ಗಿಟ್ಟಿಸುತ್ತಾರೆ. ಈ ಆಟಗಾರರ ಪಾಲಿಗೆ ಐಪಿಎಲ್ ಎನ್ನುವುದೊಂದು ಚಿಮ್ಮುಹಲಗೆ. ಆದರೆ, ಐಪಿಎಲ್​ನಲ್ಲಿ ಮಿನುಗುವ ಆಟಗಾರರು ದಿಢೀರ್ ಲಭ್ಯವಾಗುವ ಜನಪ್ರಿಯತೆಯ ಹುಚ್ಚುಹೊಳೆಯಲ್ಲಿ ಕೊಚ್ಚಿಹೋಗುವುದೇ ಹೆಚ್ಚು. 2008ರ ಚೊಚ್ಚಲ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ಸ್ ಪಟ್ಟಕ್ಕೇರುವಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದ ಗೋವಾ ಹುಡುಗ ಸ್ವಪ್ನಿಲ್ ಅಸ್ನೋಡ್ಕರ್ 9 ಪಂದ್ಯಗಳಲ್ಲಿ 311 ರನ್ ಬಾರಿಸಿ ಪ್ರೇಕ್ಷಕರ ಕಣ್ಮಣಿಯಾಗಿದ್ದರು. ಆದರೆ, ಅದೇ ಸ್ಥಿರತೆ ಉಳಿಸಿಕೊಳ್ಳಲು ವಿಫಲರಾಗಿ ಕಣ್ಮರೆಯೇ ಆದರು.

    ಪಾಲ್ ವಲ್ತಾಟಿಯನ್ನು ಯಾರು ಮರೆಯಲು ಸಾಧ್ಯ? ಅದು 2011ರ ಋತು. ಕಿಂಗ್ಸ್ ಇಲೆವೆನ್ ಪಂಜಾಬ್ ಆ ವರ್ಷ ಟ್ರೋಫಿಯನ್ನೇನೂ ಗೆಲ್ಲದಿದ್ದರೂ, ವಲ್ತಾಟಿಯ ಸಿಡಿಲಬ್ಬರದ ಬ್ಯಾಟಿಂಗ್ ಎಲ್ಲರ ಮನಗೆದ್ದಿತ್ತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರು 63 ಎಸೆತಗಳಲ್ಲಿ ಬಾರಿಸಿದ್ದ 120 ರನ್ ಐಪಿಎಲ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಆಟಗಾರನೊಬ್ಬನ ಏಕೈಕ ಶತಕ. ಈಗಲೂ ಈ ದಾಖಲೆ ಅಬಾಧಿತ. ಆದರೆ, ಅದೇ ಕೊನೆ. ಮತ್ತೆ ವಲ್ತಾಟಿ ಎಲ್ಲಿ ಹೋದರೋ ತಿಳಿಯಲಿಲ್ಲ. 2012ರ ಐಪಿಎಲ್ ಫೈನಲ್​ನಲ್ಲಿ ಚೆನ್ನೈ ವಿರುದ್ಧ 48 ಎಸೆತಗಳಲ್ಲಿ 89 ರನ್ ಬಾರಿಸಿ ಕೆಕೆಆರ್ ಪ್ರಶಸ್ತಿ ಗೆಲುವಿನ ರೂವಾರಿಯಾದವರು ಮಾನವಿಂದರ್ ಬಿಸ್ಲಾ. ಈ ರೀತಿ ಮಿಂಚಿದ ಆಟಗಾರರು ಅನೇಕ. ಆದರೆ, ನಂತರ ಹೇಳಹೆಸರಿಲ್ಲದಂತೆ ಮಾಯವಾದರು. ರಾಹುಲ್ ತೆವಾಟಿಯ ಆ ರೀತಿ ಆಗಬಾರದೆಂದರೆ ಈ ಋತುವಿನ ಯಶಸ್ಸು ಹಾಗೂ ಜನಪ್ರಿಯತೆಯ ಬುನಾದಿಯ ಮೇಲೆ ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕಿದೆ.

    ಅಭಿಮಾನಿಗಳಿಗೆ ತೆವಾಟಿಯ ಹೊಸ ಹೆಸರಾದರೂ, ತೆವಾಟಿಯ ಐಪಿಎಲ್​ಗೆ ಹೊಸಬರೇನಲ್ಲ. 2014ರಲ್ಲಿ ರಾಜಸ್ಥಾನ ರಾಯಲ್ಸ್ ಪರವೇ ಪದಾರ್ಪಣೆ ಮಾಡಿದ್ದ ಅವರು 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್​ಗೆ ವರ್ಗಾವಣೆಗೊಂಡಿದ್ದರು. 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ತಂಡ 3 ಕೋಟಿ ರೂ. ನೀಡಿ ಅವರನ್ನು ಖರೀದಿಸಿತ್ತು. ಕಳೆದ ಋತುವಿನ ಬಳಿಕ ಅವರು ರಾಜಸ್ಥಾನ ತಂಡಕ್ಕೆ ವರ್ಗಾವಣೆಗೊಂಡಿದ್ದರು.

    ರಾಹುಲ್ ತೆವಾಟಿಯ ಅಜ್ಜ ಕುಸ್ತಿಪಟುವಾಗಿದ್ದವರು. ಚಿಕ್ಕಪ್ಪ ಧರಂಭಿರ್ ಹಾಕಿ ಪಟು. ಆದರೆ, ರಾಹುಲ್ ಇಷ್ಟ ಪಟ್ಟಿದ್ದು ಕ್ರಿಕೆಟ್. ಭಾರತದ ಮಾಜಿ ವಿಕೆಟ್ಕೀಪರ್ ವಿಜಯ್ ಯಾದವ್ ಗರಡಿಯಲ್ಲಿ ಪಳಗಿದ ರಾಹುಲ್ ಅಂತಾರಾಷ್ಟ್ರೀಯ ಮಟ್ಟಕ್ಕೇರಲು ವಿಫಲರಾದರೂ, 27ನೇ ವಯಸ್ಸಿನಲ್ಲಿ ಐಪಿಎಲ್ ಅವರಿಗೆ ಭಾಗ್ಯದ ಬಾಗಿಲು ತೆರೆದಿದೆ.

    ಅಂದಹಾಗೆ, ರಾಹುಲ್ ಹಿನ್ನೆಲೆ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿ ಇದೆ. ಅವರ ಕುಟುಂಬ ನೆಲೆಸಿರುವುದು ಹರ್ಯಾಣದ ಫರೀದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿ ಸಿಹಿ ಎಂಬಲ್ಲಿ. ಈ ಸಿಹಿ 16ನೇ ಶತಮಾನದ ಭಕ್ತಿ ಸಂತ ಸೂರದಾಸರ ಜನ್ಮಸ್ಥಳ. ಅಷ್ಟೇ ಅಲ್ಲ, ಇದಕ್ಕೊಂದು ಪೌರಾಣಿಕ ಹಿನ್ನೆಲೆಯೂ ಇದೆ. ಮಹಾಭಾರತದಲ್ಲಿ ಪಾಂಡವರು 12 ವರ್ಷ ವನವಾಸ, 1 ವರ್ಷ ಅಜ್ಞಾತವಾಸ ಮುಗಿಸಿದ ಬಳಿಕ ದುರ್ಯೋಧನನ ಬಳಿಗೆ ಸಂಧಾನಕ್ಕಾಗಿ ಕೃಷ್ಣನನ್ನು ಕಳಿಸುತ್ತಾರೆ. ತಮಗೆ ರಾಜ್ಯ ಸಿಗದಿದ್ದರೂ ಪರವಾಗಿಲ್ಲ. ಕನಿಷ್ಠ ಐದು ಹಳ್ಳಿಗಳನ್ನು ಬಿಟ್ಟುಕೊಡಲಿ ಎನ್ನುವುದು ಧರ್ಮರಾಜನ ಇಚ್ಛೆಯಾಗಿರುತ್ತದೆ. ಪಾಂಡವರು ಬಯಸಿದ್ದ ಐದು ಹಳ್ಳಿಗಳಲ್ಲಿ ಸಿಹಿ ಕೂಡ ಒಂದಂತೆ. ಇಂಥ ಸಿಹಿಯೂರಿನಿಂದ ಬಂದ ರಾಹುಲ್ ಐಪಿಎಲ್​ನಲ್ಲಿ ತಮ್ಮ ಆಟದ ಮೂಲಕ ಸಿಹಿ ಹಂಚುತ್ತಿದ್ದಾರೆ.

    ಕರೊನಾ ಕಾಲದಲ್ಲಿ ದಾದಾಗಿರಿ, ಐಪಿಎಲ್ ತುತ್ತೂರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts