More

    ಸವ್ಯಸಾಚಿ| ಕತ್ತಲ ದಾರಿಯಲ್ಲಿ ಗುರುಕಾರುಣ್ಯವೆಂಬ ಹೊಂಬೆಳಕು

    ಶ್ರೀ ರಾಮಕೃಷ್ಣ ಪರಮಹಂಸರು ಒಮ್ಮೆ ಗುರುಗಳಾದ ತೋತಾಪುರಿ ಅವರೊಂದಿಗೆ ಸ್ನಾನಕ್ಕೆ ನದಿತೀರಕ್ಕೆ ತೆರಳಿದ್ದರು. ತೋತಾಪುರಿ ಅವರಿಗೊಂದು ಅಭ್ಯಾಸವಿತ್ತು. ಪ್ರತೀ ನಿತ್ಯ ಸ್ನಾನಕ್ಕೆ ಮುನ್ನ ತಾವು ತರುತ್ತಿದ್ದ ಕಮಂಡಲವನ್ನು ಹುಣಸೆಹಣ್ಣಿನಿಂದ ಉಜ್ಜಿಉಜ್ಜಿ ಬಂಗಾರದ ಹೊಳಪು ಬರುವವರೆಗೂ ತಿಕ್ಕಿ ತೊಳೆದು ನಂತರ ಅದರಲ್ಲಿ ಸ್ನಾನ ಮಾಡುತ್ತಿದ್ದರು. ಆ ದಿನವೂ ತೋತಾಪುರಿ ಕಮಂಡಲ ಉಜ್ಜುತ್ತಿರುವಾಗ ರಾಮಕೃಷ್ಣರಿಗೇನೋ ಹೊಳೆಯಿತು. ‘ಗುರುಗಳೇ, ನೀವು ಈ ಕಮಂಡಲವನ್ನು ಇಷ್ಟೊಂದು ಮುತುವರ್ಜಿಯಿಂದ ತಿಕ್ಕಿ ತೊಳೆಯುವುದೇಕೆ?’ ‘ಶುದ್ಧಿಗೊಳಿಸುವ ಸಲುವಾಗಿ. ಪರಿಶುದ್ಧತೆ ಜೀವನದ ಪ್ರತಿಯೊಂದು ಹಂತದಲ್ಲೂ ಇರಬೇಕಲ್ಲವೇ?’ ಎನ್ನುವುದು ತೋತಾಪುರಿ ಅವರ ಉತ್ತರವಾಗಿತ್ತು. ‘ಹೌದೇ? ಹಾಗಿದ್ದರೆ, ಈ ಭೌತಿಕ ವಸ್ತುವಾದ ಕಮಂಡಲ ಉಜ್ಜಿತೊಳೆಯುವ ಬದಲು ನಮ್ಮ ಅಂತರಂಗವನ್ನೇ ಶುದ್ಧಿಗೊಳಿಸಿಕೊಂಡರೆ, ಭೌತಿಕ ಶುದ್ಧಿಯ ಅಗತ್ಯವೇ ಇರುವುದಿಲ್ಲ ಅಲ್ಲವೇ?’ ಎಂಬ ರಾಮಕೃಷ್ಣರ ಮರುಪ್ರಶ್ನೆಗೆ ತೋತಾಪುರಿ ನಿಬ್ಬೆರಗಾಗಿದ್ದರು. ‘ಇಷ್ಟು ಸಣ್ಣ ವಿಚಾರ ನನಗೆ ತಿಳಿಯಲಿಲ್ಲ. ನಾನು ಇದುವರೆಗೆ ಭೌತಿಕಶುದ್ಧಿಯ ಭ್ರಮೆಯಲ್ಲಿ ಮುಳುಗಿದ್ದೆ’ ಎಂದು ಹೇಳುತ್ತ ರಾಮಕೃಷ್ಣರ ಕಾಲಿಗೆರಗಿ ನಮಸ್ಕರಿಸಿದರು. ‘ಇಷ್ಟುದಿನ ನಾನು ನಿನಗೆ ಗುರು ಎಂದು ಭಾವಿಸಿದ್ದೆ. ಆದರೆ, ಇಂದಿನಿಂದ ನೀನೇ ನನ್ನ ಗುರು’ ಎಂದು ಕಣ್ತುಂಬಿಕೊಂಡು ಹೇಳಿದರು.

    ಜೀವನದಲ್ಲಿ ಗುರಿ ಇರಬೇಕು, ಗುರುವೂ ಇರಬೇಕು. ಗುರಿಯ ಕಡೆಗೆ ದಾರಿ ತೋರುವವನೇ ಗುರು. ಹುಟ್ಟಿದ ಕ್ಷಣದಿಂದ ಅಂತಿಮ ಘಟ್ಟದವರೆಗೆ ಬದುಕಿನ ದಾರಿಯಲ್ಲಿ ಕೈಹಿಡಿದು ಮುನ್ನಡೆಸುವ ಗುರುಸಮಾನರು ಸಾವಿರ. ಕಲಿಯುವ ಮನಸ್ಸಿದ್ದರೆ, ಗುರುತಿಸುವ ದೃಷ್ಟಿ ಇದ್ದರೆ, ಇರುವೆಗಳ ಶಿಸ್ತೂ ಗುರುಪಾಠವೇ.

    ಗುರು ಎಂದರೆ ಅದೊಂದು ಪದವಿಯಲ್ಲ, ಪಟ್ಟವಲ್ಲ. ತಿಳಿವಿನ ಬೆಳಕು. ಕತ್ತಲೆಯಲ್ಲಿ ಕಣ್ಕಟ್ಟಿದಾಗ ಕೈಹಿಡಿದು ನಡೆಸುವ ಬಂಧುವೇ ಗುರು. ಗೊಂದಲಗಳಿಂದ ಮುಂದೇನು ಮಾಡಬೇಕೆಂದು ತಿಳಿಯದೇ ಹೋದಾಗ ಸ್ಪಷ್ಟತೆಯ ದಾರಿ ತೋರಿಸುವವನು ಗುರು. ಸ್ವಾರ್ಥವಿಲ್ಲದವನು ಗುರು. ತನಗಾಗಿ ಏನನ್ನೂ ಆಸೆ ಪಡದೆ ಜಗತ್ತಿನ ಒಳಿತಿಗಾಗಿ ಶ್ರಮಿಸುವವನು ಗುರು.

    ಒಂದು ಒತ್ತಕ್ಷರ ತಿದ್ದುವವನೂ ಗುರು. ನಮ್ಮ ವಿವೇಚನೆಯಿಂದ ಒಪ್ಪಿಕೊಂಡ ನಿಜಗುರುಗಳು ಕೆಲವರಾದರೆ, ಜೀವನದುದ್ದಕ್ಕೂ ನಮ್ಮ ಸರಿತಪ್ಪುಗಳನ್ನು ಸಹಿಸಿಕೊಂಡು, ತಿದ್ದಿಕೊಂಡು ನೇಪಥ್ಯದಲ್ಲೇ ಉಳಿಯುವ ಪರೋಕ್ಷ ಗುರುಗಳು ಸಾವಿರ. ಗುರು ಪೂರ್ಣಿಮೆ ಅಂಥ ಎಲ್ಲ ಗುರು ಚೇತನಗಳನ್ನು ಸ್ಮರಿಸುವ, ಗೌರವಿಸುವ, ಪೂಜಿಸುವ ಪುಣ್ಯದಿನ. ಮೊನ್ನೆ ಗುರು ಪೂರ್ಣಿಮೆ ಸಂದರ್ಭದಲ್ಲಿ ಅನ್ನ, ಅಕ್ಷರ, ಆತ್ಮಾಭಿಮಾನ, ಜೀವನಯಾನದ ಪಾಠ ಕಲಿಸಿದ, ಕಲಿಸುತ್ತಿರುವ ಸಮಸ್ತ ಗುರುಪರಂಪರೆಯನ್ನು ಸ್ಮರಿಸಿದ್ದೇವೆ. ಅದು ನಮ್ಮ ಸಂಸ್ಕೃತಿ.

    ಬದುಕಿನ ಪ್ರತಿಯೊಂದು ಕ್ಷಣ, ಹಂತದಲ್ಲೂ ಗುರುಕಾರುಣ್ಯವಿಲ್ಲದೆ ಯಾವ ಸಿದ್ಧಿಯೂ ಇಲ್ಲ. ಆದಿ ಗುರು ಶಂಕರಾಚಾರ್ಯರು ಲೋಕಜೀವನದಲ್ಲಿ, ಮನುಷ್ಯ ಜನ್ಮದಲ್ಲಿ ಗುರುವಿನ ಪಾತ್ರ, ಅರ್ಥ, ಮಹತ್ವಗಳನ್ನು ಗುರು ಅಷ್ಟಕದ ಮೂಲಕ ಮನದಟ್ಟು ಮಾಡಿಕೊಟ್ಟಿದ್ದಾರೆ. ಲೌಕಿಕ ಜಗತ್ತಿನಲ್ಲಿ ಏನೆಲ್ಲ ಸಿರಿಸಂಪತ್ತುಗಳಿದ್ದರೂ, ಪಾರಮಾರ್ಥಿಕ ಬೆಳಕಿನ ಮಾರ್ಗ ತೋರಿಸುವ ಗುರುವಿನ ಅನುಗ್ರಹವಿಲ್ಲದೇ ಹೋದರೆ, ಏನಿದ್ದರೇನು ಪ್ರಯೋಜನ? ಎಲ್ಲವೂ ವ್ಯರ್ಥ ಎಂಬ ತತ್ವಶ್ಲೋಕಗಳು ಸರ್ವಕಾಲಕ್ಕೂ ದಾರಿದೀಪ.

    ಶರೀರಂ ಸುರೂಪಂ ತಥಾ ವಾ ಕಲತ್ರಂ/ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಂ
    ಮನಶ್ಚೇನ್ನ ಲಗ್ನಂ ಗುರೋರಂಘಿ ಪದ್ಮೇ/ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

    ದುರ್ಯೂಧನನಿಗೆ ಯಾವುದಕ್ಕೆ ಕಡಿಮೆ ಇತ್ತು. ರೂಪದಲ್ಲಿ ಸುಂದರಾಂಗ. ಭಾನುಮತಿಯಂಥ ಸುರಸುಂದರಿ ಪತ್ನಿ. ಇಡೀ ಕುರುಕುಲ ಸಾಮ್ರಾಜ್ಯವೇ ಆತನ ಕಾಲಡಿ ಬಿದ್ದಿತ್ತು. ಭೀಷ್ಮರಂಥ ಕುರುಶ್ರೇಷ್ಠರೂ ಆತನ ರಕ್ಷಣೆಗಿದ್ದರು. ಆದರೂ, ವಿದ್ಯೆ ಕಲಿಸಿದ ಗುರುಗಳಾದ ದ್ರೋಣಾಚಾರ್ಯರು, ಕೃಪಾಚಾರ್ಯರನ್ನು ತುಚ್ಛವಾಗಿ ಕಂಡ ದುರ್ಯೋಧನನಿಗೆ ಬದುಕಿನಲ್ಲಿ ನೆಮ್ಮದಿ ಎನ್ನುವುದು ಸಿಗಲೇ ಇಲ್ಲ. ಇಡೀ ಜೀವನವನ್ನು ಪಾಂಡವದ್ವೇಷದಲ್ಲೇ ಕಳೆದ ದುರ್ಯೋಧನ ಜೀವನದಲ್ಲಿ ಏನನ್ನೂ ದಕ್ಕಿಸಿಕೊಳ್ಳಲಾಗದೆ ನಾಶವಾಗಿ ಹೋದ.

    ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ/ ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಂ
    ಮನಶ್ಚೇನ್ನ ಲಗ್ನಂ ಗುರೋರಂಘಿ ಪದ್ಮೇ / ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

    ಜೀವನವೆನ್ನುವುದು ಗಳಿಕೆಯ ಯಂತ್ರವಾಗಿ ಬಿಟ್ಟಾಗ ನೆಮ್ಮದಿ ಎಲ್ಲಿ? ಬಾಲ್ಯದಿಂದ ವೃದ್ಧಾಪ್ಯದವರೆಗೆ ವಿದ್ಯೆ, ಬುದ್ಧಿ, ಸಿದ್ಧಿ, ಪ್ರಸಿದ್ಧಿ, ಅನುರೂಪ ಮಡದಿ, ಪರಿವಾರ… ಹೀಗೆ ಒಂದಾದಮೇಲೊಂದು ಸಿರಿಸಂಪತ್ತು ಗಳಿಸುವುದರಲ್ಲೇ ಕಾಲಹರಣ ಮಾಡಿದರೆ ಏನು ಪ್ರಯೋಜನ. ಜೀವನದ ಒಂದೊಂದು ಹಂತದಲ್ಲೂ ನಮ್ಮ ಕೈಹಿಡಿದು ಮುನ್ನಡೆಸಿದ ಗುರುವಿನ ಬಗ್ಗೆ ಕೃತಜ್ಞತೆ ನಮ್ಮ ಮನಸ್ಸಿನಲ್ಲಿ ಇಲ್ಲದೇ ಹೋದರೆ, ಏನೆಲ್ಲ ಇದ್ದು ಏನು ಪ್ರಯೋಜನ?

    ಷಡಂಗಾದಿವೇದೋ ಮುಖೇಶಾಸ್ತ್ರವಿದ್ಯಾ/ ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ
    ಮನಶ್ಚೇನ್ನ ಲಗ್ನಂ ಗುರೋರಂಘಿ ಪದ್ಮೇ /ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

    ವಿದ್ಯಾವಂತ, ವೇದ, ಶಾಸ್ತ್ರ ಪಾರಂಗತನೆನಿಸಿದ್ದ ತುಳಸಿದಾಸ ಸಂತರಾಗುವ ಮುನ್ನ ಮಡದಿಯ ಮೋಹದಲ್ಲಿ ಮುಳುಗಿದ್ದರು. ಒಂದುಕ್ಷಣವೂ ಪತ್ನಿಯನ್ನು ಬಿಟ್ಟಿರಲಾರೆ ಎಂಬಂಥ ಅನುರಾಗ ಅದು. ತವರಿಗೆ ಹೋದ ಪತ್ನಿಯನ್ನು ಕಾಣಲು ಮಳೆ, ಬಿರುಗಾಳಿ, ಪ್ರವಾಹ ಲೆಕ್ಕಿಸದೆ ತೆರಳಿ ಗೋಡೆಗೆ ನೇತುಬಿದ್ದ ಹೆಬ್ಬಾವನ್ನು ಹಗ್ಗವೆಂದು ಬಾವಿಸಿ ಗೋಡೆ ಹಾರಿ ಪತ್ನಿಯನ್ನು ಕಂಡವರು. ‘ನನ್ನ ಮೇಲಿದ್ದ ಪ್ರೀತಿಯ ಒಂದಂಶ ಭಕ್ತಿ ರಾಮನ ಮೇಲಿದ್ದರೆ ನಿಮ್ಮ ಜನ್ಮ ಉದ್ಧಾರವಾಗುತ್ತಿತ್ತು’ ಎಂಬ ಹೆಂಡತಿಯ ಒಂದು ಮಾತು ಅವರಲ್ಲಿ ಅರಿವಿನ ಜ್ಯೋತಿ ಹಚ್ಚಿತು. ಹೆಂಡತಿಯೇ ಗುರುವಾದ ಮೇಲೆ ತುಳಸಿದಾಸರಿಗೆ ರಾಮನೇ ಒಲಿದ.

    ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ /ಸದಾಚಾರ ವೃತ್ತೇಷು ಮತ್ತೋ ನ ಜಾನ್ಯಃ
    ಮನಶ್ಚೇನ್ನ ಲಗ್ನಂ ಗುರೋರಂಘಿ ಪದ್ಮೇ /ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

    ನಹುಷ ಮಹಾರಾಜನ ಕೀರ್ತಿ ಮೂರು ಲೋಕಗಳಲ್ಲೂ ಹಬ್ಬಿತ್ತು. ಆತನ ಪುಣ್ಯಸಂಪಾದನೆಯ ಫಲವಾಗಿ ದೇವಲೋಕದ ಇಂದ್ರನ ಪದವಿಯೇ ಒಲಿದಿತ್ತು. ಆದರೂ, ಅಹಂಕಾರದ ಮದದಲ್ಲಿ ಸಪ್ತಋಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಕುಳಿತು, ಗುರು ಅಗಸ್ತ್ಯರನ್ನು ಒದ್ದು ಪಾತಾಳದಲ್ಲಿ ಹೆಬ್ಬಾವಾಗಿ ಬಿದ್ದ. ಗುರುವನ್ನು ಗೌರವಿಸದ ನಹುಷನ ಪುಣ್ಯ ಕ್ಷಯವಾಗಿ ಹೋಯಿತು.

    ಕ್ಷಮಾಮಂಡಲೇ ಭೂಪಭೂಪಾಲಬೃಂದೈಃ / ಸದಾಸೇವಿತಂ ಯಸ್ಯ ಪಾದಾರವಿಂದಂ
    ಮನಶ್ಚೇನ್ನ ಲಗ್ನಂ ಗುರೋರಂಘಿ ಪದ್ಮೇ / ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

    ಅರ್ಧ ಭೂಮಂಡಲವನ್ನೇ ಗೆದ್ದಿರುವೆನೆಂದು ಬೀಗುತ್ತಿದ್ದ ಅಲೆಕ್ಸಾಂಡರ್ ಚಕ್ರವರ್ತಿ ಆಪತ್ಕಾಲದಲ್ಲಿ ಪ್ರಾಣ ಉಳಿಸುವ ಅರ್ಧ ಲೋಟ ನೀರಿಗೂ ತನ್ನ ಸಾಮಾಜ್ಯ ಸಮಾನವಲ್ಲ ಎಂಬ ಅರಿವು ಬಂದಾಗ ಕುಗ್ಗಿಹೋದ. ಭರತಭೂಮಿಯಲ್ಲಿ ಅಂಥ ಅರಿವನ್ನು ಮೂಡಿಸಿದ ವೃದ್ಧಗುರುವಿಗೆ ತಲೆಬಾಗಿದ. ಜಗತ್ತನ್ನೇ ಗೆದ್ದರೂ, ಮರಣದ ಬಳಿಕ ಹೋಗುವುದು ಬರಿಗೈಯಲ್ಲೇ ಎಂಬ ಸಂದೇಶವನ್ನು ಜಗತ್ತಿಗೆ ಬಿಟ್ಟುಹೋದ.

    ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್/ ಜಗದ್ವಸ್ತುಸರ್ವಂ ಕರೇ ಯತ್ಪ್ರಸಾದಾತ್
    ಮನಶ್ಚೇನ್ನ ಲಗ್ನಂ ಗುರೋರಂಘಿ ಪದ್ಮೇ /ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

    ಹರ ಮುನಿದರೂ ಗುರು ಕಾಯುವನೆಂಬ ಮಾತಿದೆ. ಆದರೆ, ಗುರು ಮುನಿದರೆ ಹರನೂ ಕಾಯುವುದಿಲ್ಲ. ದಾನಶೂರನಾದ ಕರ್ಣ ಅರ್ಜುನನಷ್ಟೇ ಪರಾಕ್ರಮಿಯಾದರೂ ಮಾರುವೇಷದಲ್ಲಿ ವಿದ್ಯೆ ಕಲಿತ ಪರಿಣಾಮ ಗುರುವಿನ ಶಾಪ ನಿರ್ಣಾಯಕ ಸಂದರ್ಭದಲ್ಲಿ ತಟ್ಟಿತು. ಅರ್ಜುನನ ವಿರುದ್ಧ ಯುದ್ಧದ ಸಾವಿನ ಕ್ಷಣದಲ್ಲಿ ಮಹಾ ಅಸ್ತ್ರ ಪ್ರಯೋಗಿಸುವುದಕ್ಕೆ ಮಂತ್ರವೇ ನೆನಪಾಗಲಿಲ್ಲ.

    ನ ಯೋಗೋ ನ ಭೋಗೋ ನ ವಾ ವಾಜಿರಾಜೌ / ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಂ
    ಮನಶ್ಚೇನ್ನ ಲಗ್ನಂ ಗುರೋರಂಘಿ ಪದ್ಮೇ / ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

    ಅರ್ಜುನ ಪಾಲಿಗೆ ಶ್ರೀಕೃಷ್ಣ ಗೆಳೆಯನಷ್ಟೇ ಅಲ್ಲದೆ ಅಂತರಂಗದ ಗುರುವೇ ಆಗಿದ್ದ. ಬದುಕಿನುದ್ದಕ್ಕೂ ಮುನ್ನಡೆಸಿದ ಕೃಷ್ಣನ ಗೀತೋಪದೇಶದ ಬೆಳಕಿನಲ್ಲಿ ಮಹಾಭಾರತ ಸಂಗ್ರಾಮವನ್ನೇ ಗೆದ್ದ ಅರ್ಜುನ, ಸಾಮ್ರಾಜ್ಯ ವಿಸ್ತರಣೆಯ ಅಹಂಕಾರದಲ್ಲಿ ಕೃಷ್ಣನನ್ನು ಮರೆತು ಮಗ ಬಬ್ರುವಾಹನನ ವಿರುದ್ಧವೇ ಸೋತು ಹೋದ. ಯೋಗ, ಭೋಗ, ರಾಜ್ಯ, ಕಾಂತಾಸುಖ, ಸಂಪತ್ತು ಯಾವುದರಲ್ಲೂ ಮನಸ್ಸು ನಿಲ್ಲುವುದಿಲ್ಲ. ಗುರುವಿನ ಚರಣದಲ್ಲಿ ಮನಸ್ಸು ನೆಲೆಸದೆ ಸುಖವಿಲ್ಲ. ಗುರುವನ್ನು ಮರೆತರೆ ಗೆಲುವಿಲ್ಲ.

    ಅರಣ್ಯೇನ ವಾ ಸ್ವಸ್ಯ ಗೇಹೇ ನ ಕಾರ್ಯು/ನ ದೇಹೇ ಮನೋ ವರ್ತತೇ ಮೇತ್ವನರ್ಘ
    ಮನಶ್ಚೇನ್ನ ಲಗ್ನಂ ಗುರೋರಂಘಿ ಪದ್ಮೇ / ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

    ಔರಂಗಜೇಬನಿಗೆ ಸೆಡ್ಡು ಹೊಡೆದು, ಹತ್ತುದಿಕ್ಕುಗಳ ಶತ್ರುಗಳನ್ನು ಸದೆಬಡಿದು ಹಿಂದು ಸಾಮ್ರಾಜ್ಯ ಕಟ್ಟಿದ ಮೇಲೂ ಛತ್ರಪತಿ ಶಿವಾಜಿಗೆ ನೆಮ್ಮದಿಯಿಲ್ಲ. ಅದೇನೋ ವೈರಾಗ್ಯ. ‘ಈ ರಾಜ್ಯ ಕೋಶ ಯಾವುದೂ ಬೇಡ. ನಿಮ್ಮೊಡನೆ ಬಂದು ಬಿಡುತ್ತೇನೆ’ ಎಂದು ಸಮಸ್ತ ರಾಜ್ಯವನ್ನೂ ಗುರು ಸಮರ್ಥ ರಾಮದಾಸರ ಜೋಳಿಗೆಗೆ ಅರ್ಪಿಸಿಬಿಟ್ಟ. ‘ನನ್ನ ರಾಜ್ಯವನ್ನು ನೀನು ಪರಿಪಾಲಿಸು. ರಾಜ್ಯವನ್ನಾಳುವುದು ನಿನ್ನ ಕರ್ತವ್ಯವೇ ಹೊರತು, ನನ್ನನ್ನು ಕಾಡುಮೇಡುಗಳಲ್ಲಿ ಹಿಂಬಾಲಿಸುವುದಲ್ಲ. ನೀನು ನೆನಪಿಸಿಕೊಂಡಾಗ ನಾನೇ ಬರುವೆ’ ಎಂಬ ರಾಮದಾಸರ ಆಶೀರ್ವಾದದ ಬೆಳಕೇ ಶಿವಾಜಿಗೆ ಯಶೋದೀಪವಾದದ್ದು.

    ಗುರೋರಷ್ಟಕಂ ಯಃ ಪಠೇತ್ಪುಣ್ಯದೇಹೀ/ ಯತಿರ್ಭಪತಿಬ್ರಹ್ಮಚಾರೀ ಚ ಗೇಹೀ
    ಲಭೇದ್ವಾಂಛಿತಾರ್ಥಂ ಪದಂ ಬ್ರಹ್ಮ ಸಂಜ್ಞ / ಗುರೋರುಕ್ತವಾಕ್ಯೇ ಮನೋ ಯಸ್ಯಲಗ್ನಮ್

    ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದರು ದಾಸರು. ತಾಯಿಯೇ ಮೊದಲ ಗುರು. ಹುಟ್ಟಿನಿಂದ ಸಾವಿನವರೆಗೆ ಪ್ರತಿ ಕ್ಷಣದಲ್ಲೂ ಕಲಿಯುವ, ಕಲಿಸುವ ಪ್ರಕ್ರಿಯೆ ನಿರಂತರ. ವಿದ್ಯೆ, ಬುದ್ಧಿ, ವೃತ್ತಿ, ಬದುಕಿನ ವಿಸ್ತಾರ ಪಾಠಶಾಲೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಲಿಸುವ ಪ್ರತಿಯೊಬ್ಬರಿಗೂ ಕೃತಜ್ಞನಾಗಿರುವುದರಿಂದ ಜೀವನಕ್ಕೊಂದು ಅರ್ಥ, ಸಾರ್ಥಕತೆ. ಜಗತ್ತೇ ಒಂದು ಗುರುಕುಲ. ಗುರುಕಾರುಣ್ಯ ಎಲ್ಲರಿಗೂ ಸಿಗಲಿ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್​)

    VIDEO|ಸೈಂಟಿಫಿಕ್ ಫಿಕ್ಷನ್ ಸಿನಿಮಾದ ನಾಯಕಿ: ಈಕೆ ಜಗತ್ತಿನ ಮೊದಲ ಎಐ ಆರ್ಟಿಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts